ಹೊಸದಿಲ್ಲಿ: ಕರ್ನಾಟಕದ ಡ್ಯಾಶಿಂಗ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 2015ರ ಬಳಿಕ ಭಾರತೀಯ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೂ ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇವಲ ಆಟಗಾರರಾಗಿ ಮತ್ರವಲ್ಲ. ಫಿನಿಶರ್ ಆಗಿ ಮರಳುವುದು ಅವರ ಗುರಿಯಾಗಿದೆ. ಇಷ್ಟು ಮಾತ್ರವಲ್ಲದೇ ಇನ್ನೊಂದು ವಿಶ್ವಕಪ್‌ನಲ್ಲಿ ಆಡುವುದು ಅವರಿಗೆ ಬಾಕಿ ಉಳಿದಿದೆಯಂತೆ.
2007ರ ಏಕದಿನ ವಿಶ್ವಕಪ್ ಮತ್ತು ಉದ್ಘಾಟನಾ ಟಿ20 ವಿಶ್ವಕಪ್ ವಿಜಯಿ ತಂಡದ ಸದಸ್ಯರಾಗಿದ್ದ ಉತ್ತಪ್ಪ ಅವರು ಜಿಂಬಾಬ್ವೆ ಪ್ರವಾಸದ ವೇಳೆ 2015ರ ಜುಲೈ ತಿಂಗಳಲ್ಲಿ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು.
34ರ ಹರೆಯದ ಉತ್ತಪ್ಪ 2011ರ ಅಕ್ಟೋಬರ್ ಬಳಿಕ ಕೇವಲ ಎಂಟು ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಸದ್ಯದ ಮಟ್ಟಿಗೆ ನಾನು ಸ್ಪರ್ಧಾತ್ಮಕವಾಗಿ ಇರುವುದನ್ನು ಬಯಸುತ್ತೇನೆ. ಸ್ಫೋಟಕ ಮನೋಭಾವ ಮತ್ತು ಆಟವಾಡುವ ಉತ್ಸಾಹ ನನ್ನಲ್ಲಿ ಇನ್ನೂ ಉಳಿದಿದೆ. ತಂಡದಲ್ಲಿ ಸ್ಥಾನ ಪಡೆದು ಉತ್ತಮ ನಿರ್ವಹಣೆ ನೀಡುವ ಬಯಕೆ ನನ್ನಲ್ಲಿದೆ. ನಿಜ ಹೇಳಬೇಕೆಂದರೆ ಇನ್ನೊಂದು ವಿಶ್ವಕಪ್ ಆಡುವ ಮನಸ್ಸಿದೆ. ಹಾಗಾಗಿ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿಯಾದರೂ ಇದನ್ನು ಸಾಧಿಸಲು ಪ್ರಯತ್ನಿಸುವೆ ಎಂದಿದ್ದಾರೆ.
ಫಿನಿಶರ್ ಪಾತ್ರ
ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡು ವುದನ್ನು ಇಷ್ಟಪಡುತ್ತೇನೆ. ಆದರೆ ಪಂದ್ಯ ಗೆಲ್ಲಿಸಿ ಕೊಡಬಲ್ಲ ಫಿನಿಶರ್ ಪಾತ್ರ ವಹಿಸುವುದೇ ನನ್ನ ಗುರಿಯಾಗಿದೆ. ಲಾಕ್‌ಡೌನ್ ಇರುವುದರಿಂದ ಮನೆಯಲ್ಲಿಯೇ ಇರುವ ಕಾರಣ ಕಠಿನ ಅಭ್ಯಾಸ ಮಾಡುತ್ತಿದ್ದೇನೆ ಎಂದು ಉತ್ತಪ್ಪ ವಿವರಿಸಿದರು.