ಕಾಪು: ಗ್ರಾಹಕನ ಸೋಗಿನಲ್ಲಿ ಬಂದು ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ಮಾಲಕನಿಂದ ಆರು ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಗುರುವಾರ ರಾತ್ರಿ ಕಾಪುವಿನಲ್ಲಿ ನಡೆದಿದೆ.
ಕಾಪು ಮಹಾಲಸಾ ಸ್ಟೋರ್ ಮಾಲಕ ರಾಘವೇಂದ್ರ ಕಿಣಿ ಹಣ ಕಳೆದುಕೊಂಡಿದ್ದು, ಕಾಪು ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ಬಗ್ಗೆ ದೂರು ನೀಡಿದ್ದಾರೆ.
ಕಾಪು ಪೇಟೆಯಲ್ಲಿ ಹಾರ್ಡ್ ವೇರ್, ಹಾಲಿನ ವ್ಯಾಪಾರ ಸಹಿತ ಉದ್ಯಮವನ್ನು ಹೊಂದಿರುವ ರಾಘವೇಂದ್ರ ಕಿಣಿ ಗುರುವಾರ ರಾತ್ರಿ ಮಳಿಗೆಗೆ ಬೀಗ ಹಾಕಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದ ವೇಳೆ ಗ್ರಾಹಕನ ಸೋಗಿನಲ್ಲಿ ಬಂದ ಅಪರಿಚಿತ ಈ ದುಷ್ಕೃತ್ಯವೆಸಗಿದ್ದಾನೆ.
ಮನೆಗೆ ತೆರಳುವ ಮುನ್ನ 3-4 ದಿನದ ವ್ಯವಹಾರದ ಸುಮಾರು 6 ಲಕ್ಷ ರೂ. ನಗದನ್ನು ಸ್ಕೂಟಿಯಲ್ಲಿ ಇರಿಸಿ, ಅಂಗಡಿಗೆ ಬೀಗ ಹಾಕಲು ತೆರಳಿದ್ದ ವೇಳೆ ಕರಾಮತ್ತು ತೋರಿದ ಕಳ್ಳರು ಸ್ಕೂಟಿ ಪಂಕ್ಚರ್ ಮಾಡಿ ನಗದು ದೋಚಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಬೆರಳಚ್ಚು, ಶ್ವಾನದಳ ಸಹಿತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
3-4 ಮಂದಿ ಕಳ್ಳರ ಕೃತ್ಯವೆಂದು ಶಂಕಿಸಲಾಗಿದ್ದು ಮಹಾಲಸಾ ಸ್ಟೋರ್ ಮತ್ತು ಸುತ್ತಲಿನ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ.