ಹುಣಸೂರು: ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ವೇಳೆ ಹೆದ್ದಾರಿಯ ತಾಲೂಕಿನ ಯಶೋಧರಪುರ ಬಳಿ ಶಿಪ್ಟ್ ಕಾರು ತಡೆದು ಚಿನ್ನ ವ್ಯಾಪಾರಿ ಬಳಿ ಇದ್ದ ಒಂದು ಕೋಟಿ ರೂ.ನಗದನ್ನು ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿರುವ ಘಟನೆ ಜರುಗಿದೆ.
ಕೇರಳದ ಕಣ್ಣೂರು ಜಿಲ್ಲೆಯ ಬಾನೂರಿನ ಸ್ವಪ್ನ ಜ್ಯುವೆಲ್ಲರಿ ಮಾಲಿಕ ಚಿನ್ನದ ವ್ಯಾಪಾರಿ ಸುರಾಜ್ ಹಣ ಕಳೆದು ಕೊಂಡವರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಕಣ್ಣೂರು ಜಿಲ್ಲೆಯ ಬಾನೂರಿನ ಚಿನ್ನದ ವ್ಯಾಪಾರಿ ಸುರಾಜ್ ಅವರು ಬೆಂಗಳೂರಿನಲ್ಲಿ ಮಾ.15 ರಂದು ಚಿನ್ನ ಮಾರಾಟ ಮಾಡಿ ಬಂದಿದ್ದ, ಒಂದು ಕೋಟಿ ರೂ. ಹಣದೊಂದಿಗೆ ಸಂಜೆಯೇ ಚಾಲಕ ಸುಭಾಷ್ ನೊಂದಿಗೆ ತಮ್ಮ ಶಿಪ್ಟ್ ಕಾರಿನಲ್ಲಿ ತವರಿಗೆ ತೆರಳುತ್ತಿದ್ದರು. ರಾತ್ರಿ 11ಗಂಟೆಗೆ ಹುಣಸೂರು ಬೈಪಾಸ್‌ನ ಕೆಫೆ ಕೌಂಟಿ ಬಳಿ ಬರುತ್ತಿದಂತೆ ತಡೆ ರಾತ್ರಿಯಾಗಿದ್ದರಿಂದ ಅಲ್ಲಿಯೇ ಕಾರಿನಲ್ಲಿ ವಿಶ್ರಾಂತಿ ಪಡೆದು ಮಾ.16ರ ಮುಂಜಾನೆ ಕೇರಳಕ್ಕೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಹುಣಸೂರು ನಗರಕ್ಕೆ ಸುಮಾರು 4 ಕಿ.ಮೀ. ದೂರದ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಯಶೋಧರಪುರದ ಬಳಿ ಬಹಿರ್ದೆಸೆಗೆ ಕಾರಿನಿಂದ ಇಳಿದಿದ್ದಾರೆ. ಈ ವೇಳೆ ಎರಡು ಇನೋವಾ ಕಾರಿನಲ್ಲಿ ಬಂದ 6-7 ಮಂದಿ ಕಾರನ್ನು ಅಡ್ಡ ನಿಲ್ಲಿಸಿ, ಇಬ್ಬರ ಮೇಲೆ ಹಲ್ಲೆ ನಡೆಸಿ, ಇಬ್ಬರನ್ನು ಅವರ ಕಾರುಗಳಲ್ಲಿ ಸ್ವಲ್ಪ ದೂರ ಕರೆದೊಯ್ದು, ಮೊಬೈಲ್ ಕಿತ್ತುಕೊಂಡು ಕೆಳಗಿಳಿಸಿ ಪರಾರಿಯಾದರು.
ಇದನ್ನೂ ಓದಿ:ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದೀರಿ: ಎಂಎಲ್‌ಸಿ ವಿಶ್ವನಾಥ್ ಪ್ರಶ್ನೆ
ಸಾವರಿಸಿಕೊಂಡು ವಾಪಸ್ ಕಾರು ಬಿಟ್ಟಿದ್ದ ಸ್ಥಳಕ್ಕೆ ಬಂದು ನೋಡಿದ ವೇಳೆ ಒಂದು ಕೋಟಿ ಹಣದ ಚೀಲದ ಸಮೇತ ಕಾರಿನೊಂದಿಗೆ ಪರಾರಿಯಾಗಿದ್ದರು. ಸ್ಥಳೀಯರ ನೆರವಿನೊಂದಿಗೆ ಗ್ರಾಮಾಂತರ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಅಪಹರಿಸಿದ್ದ ಕಾರು ತಾಲೂಕಿನ ಚಿಲ್ಕುಂದ ಗ್ರಾಮದ ಬಳಿ ಪತ್ತೆಯಾಗಿದ್ದು, ಈ ಸಂಬಂಧ ದರೋಡೆಕೋರರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದೇನು ಹೊಸದತಲ್ಲ: ಇದೇ ರೀತಿ ಕಳೆದ ಐದು ವರ್ಷಗಳಲ್ಲಿ ಮೈಸೂರು-ಹುಣಸೂರು ರಸ್ತೆ ಹಾಗೂ ಕೇರಳಕ್ಕೆ ತೆರಳುವ ಗೋಣಿಕೊಪ್ಪ ರಸ್ತೆಗಳಲ್ಲಿ ಕೇರಳದವರ ಮೇಲೆ ಆಗಾಗ ಹಲ್ಲೆ ನಡೆಸಿ ಹಣ ದರೋಡೆ ಮಾಡುವುದು ಮಾಮೂಲಾಗಿದೆ. ಬಿಳಿಕೆರೆ ಬಳಿಯಲ್ಲಿ ನಡೆದಿದ್ದ ಪ್ರಕರಣವನ್ನು ಹುಣಸೂರು ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದನ್ನು ಸ್ಮರಿಸಬಹುದು.