ಮಂಡ್ಯ: ತಾಲೂಕಿನ ಗಂಟಗೌಡನಹಳ್ಳಿ-ದ್ಯಾಪಸಂದ್ರ ಸಮೀಪ ನಡೆದಿದ್ದ ದರೋಡೆ ಪ್ರಕರಣವನ್ನು 48 ಗಂಟೆಯೊಗೆ ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಆರು ಮಂದಿಯನ್ನು ಬಂಧಿಸಿ 80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ವಾಹನ ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಉದಯಗಿರಿ ಮೂಲದ ರಮೇಶ್, ವರುಣ್‌ಗೌಡ, ಪುನೀತ್, ಪ್ರಕಾಶ್, ರಾಜು, ಕೈಲಾಶ್ ಕುಮಾರ್ ಬಂಧಿತರು. ಇವರಿಂದ 3 ಕೆ.ಜಿ.100 ಗ್ರಾಂ. ತೂಕದ ಚಿನ್ನಾಭರಣ, 50 ಸಾವಿರ ರೂ. ಹಣ, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.
4 ತಂಡ ರಚನೆ: ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಿ ತನಿಖೆ ಆರಂಭಿಸಲಾಯಿತು. ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಮಾಹಿತಿ, ಚಿನ್ನಾಭರಣ ಕಳೆದುಕೊಂಡವರಿಂದ ಪಡೆದ ವಿವರ ಹಾಗೂ ತಾಂತ್ರಿಕ ತಂಡದ ತನಿಖೆಯಿಂದ ಮಾಹಿತಿ ಲಭ್ಯವಾಯಿತು. ಈ ವೇಳೆ ಆರೋಪಿಗಳನ್ನು ಬಂಧಿಸಿದಾಗ ವೃತ್ತಿ ವೈಷಮ್ಯದಿಂದ ನಡೆದ ಕೃತ್ಯವಾಗಿದೆ. ಅಂತೆಯೇ ಲಲಿತ್ ಅವರ ಅಂಗಡಿಯಲ್ಲಿ ಸುಮಾರು 14 ವರ್ಷ ಕೆಲಸ ಮಾಡಿ ನಂತರ ಕಾರಣಾಂತರಗಳಿಂದ ಕೆಲಸ ಬಿಟ್ಟಿದ್ದ ವ್ಯಕ್ತಿಯೇ ಪ್ರಮುಖ ಆರೋಪಿ ಎಂಬುದು ಖಾತ್ರಿಯಾಯಿತು. ಬಳಿಕ ಇವನಿಗೆ ಸಹಕರಿಸಿದ ಆಟೋ ಚಾಲಕರು, ಕೂಲಿ ಕಾರ್ಮಿಕ ಹಾಗೂ ಪ್ರಮುಖ ಆರೋಪಿ ಜತೆಗೆ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಸೇರಿದಂತೆ ಆರು ಜನರನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ತನಿಖಾ ತಂಡಕ್ಕೆ ಬಹುಮಾನ: ಪ್ರಮುಖ ಪ್ರಕರಣವಾಗಿದ್ದರಿಂದ ನಾಲ್ಕು ತಂಡ ರಚಿಸಲಾಗಿತ್ತು. ಸಿಪಿಐ ಕ್ಯಾತೇಗೌಡ, ಪಿಎಸ್‌ಐಗಳಾದ ರಮೇಶ್, ಮಾರುತಿ, ಎಎಸ್‌ಐ ಚಿಕ್ಕಯ್ಯ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜೇಗೌಡ, ಮಧುಕುಮಾರ್, ಇಂದ್ರಕುಮಾರ್ ಗಿರೀಶ್ ತನಿಖಾ ತಂಡ, ಡಿಸಿಆರ್‌ಬಿ ಪಿಐ ಎನ್.ವಿ.ಮಹೇಶ್, ಪಿಎಸ್‌ಐಗಳಾದ ಶೇಷಾದ್ರಿಕುಮಾರ್, ವೆಂಕಟೇಶ್, ಸಿಬ್ಬಂದಿಗಳಾದ ಕೆ.ಪಿ.ರವಿಕಿರಣ್, ಲೋಕೇಶ್, ಕೇಶವ ತಾಂತ್ರಿಕ ತಂಡ, ಪಿಐ ಆನಂದೇಗೌಡ, ಪಿಎಸ್‌ಐಗಳಾದ ರವಿಕುಮಾರ್ ಸೇರಿದಂತೆ ಮತ್ತಿತರರಿದ್ದರು.
ಕೇವಲ 48 ಗಂಟೆಯಲ್ಲಿಯೇ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ತನಿಖಾ ತಂಡಕ್ಕೆ ಜಿಲ್ಲಾ ಎಸ್ಪಿ 25 ಸಾವಿರ ರೂ. ನಗದು ಬಹುಮಾನ ಘೋಷಿಸಿದರು. ಅಪರ ಪೊಲೀಸ್ ವರಿಷ್ಠಾ ಧಿಕಾರಿ ಎಂ.ವೇಣುಗೋಪಾಲ್, ಡಿವೈಎಸ್ಪಿ ಟಿ.ಮಂಜುನಾಥ್, ಡಿಎಆರ್ ಡಿವೈಎಸ್ಪಿ ವಿರೂಪಾಕ್ಷೇಗೌಡ ಇತರರಿದ್ದರು.
ಏನಿದು ಪ್ರಕರಣ? : ಮೈಸೂರಿನ ವ್ಯಾಪಾರಿ ಲಲಿತ್ ಎಂಬವರು ಜ್ಯುವೆಲ್ಲರಿ ಅಂಗಡಿಗೆ ಚಿನ್ನಾಭರಣ ಕೊಡುವ ವೃತ್ತಿ ಮಾಡುತ್ತಾರೆ.ಏ.14ರಂದು ಲಲಿತ್ ಮತ್ತು ಮಾಧುರಾಂ ಅವರು ಕಾರಿನಲ್ಲಿ ಚಿನ್ನದ ಮೂಗುತಿ, ಉಂಗುರವನ್ನು ಜಕ್ಕನಹಳ್ಳಿ, ಚೀಣ್ಯ, ಬಸರಾಳು ಅಂಗಡಿಗಳಲ್ಲಿ ಮಾರಾಟ ಮಾಡಿದ್ದಾರೆ. ನಂತರ ಕೆರಗೋಡು ಗ್ರಾಮಕ್ಕೆ ಬರುವ ಮಾರ್ಗ ಮಧ್ಯೆ ಗಂಟಗೌಡನಹಳ್ಳಿ-ದ್ಯಾಪಸಂದ್ರ ಸಮೀಪ ಸಿನಿಮಾ ಶೈಲಿಯಲ್ಲಿ ಹಿಂದಿನಿಂದ ಬೈಕ್‌ನಲ್ಲಿ ಇಬ್ಬರು ಹಾಗೂ ಎದುರಿನಿಂದ ನಾಲ್ವರು ಕಾರಿನಲ್ಲಿ ಬಂದು ಅಡ್ಡ ಹಾಕಿದ್ದರು. ನಂತರ ಸುತ್ತಿಗೆಯಿಂದ ಕಾರಿನ ಗ್ಲಾಸ್ ಒಡೆದು ಮಾಧುರಾಂ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ತುಂಬಿದ ಸೂಟ್‌ಕೇಸ್ ಕದ್ದೊಯ್ದಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ವಿವರಿಸಿದರು.