Advertisement

ಉಡುಪಿ, ಮಣಿಪಾಲ: ದರೋಡೆ, ಸುಲಿಗೆ ಹೆಚ್ಚಳ

03:25 AM Dec 07, 2018 | Team Udayavani |

ಉಡುಪಿ: ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಸೇರಿದಂತೆ ಪರ ಜಿಲ್ಲೆ, ರಾಜ್ಯ ಮತ್ತು ವಿದೇಶಗಳಿಂದ ನಿತ್ಯ ಸಾವಿರಾರು ಮಂದಿ ಬಂದು ಹೋಗುವ ಉಡುಪಿ ಮತ್ತು ಮಣಿಪಾಲ ಕಳೆದ ಕೆಲವು ತಿಂಗಳುಗಳಿಂದ ದರೋಡೆ, ಸುಲಿಗೆ, ಕಳ್ಳತನ ಪ್ರಕರಣಗಳಿಂದ ಸುದ್ದಿಯಾಗುತ್ತಿದೆ. ಮುಖ್ಯವಾಗಿ ಒಂಟಿಯಾಗಿ ಓಡಾಡುವವರನ್ನು ಹೊಂಚು ಹಾಕಿ ಸುಲಿಗೆ ಮಾಡಲಾಗುತ್ತಿದೆ. ರಾತ್ರಿ ಮತ್ತು ಮುಂಜಾವ ಕಾರ್ಯಾಚರಣೆಗಳಿಯುತ್ತಿರುವ ದರೋಡೆಕೋರರು ಭೀತಿ ಮೂಡಿಸಿದ್ದಾರೆ. ಮಂಗಳವಾರ ರಾತ್ರಿ ಉಡುಪಿ ನಗರದಲ್ಲಿ ನಡೆದ ಪ್ರಕರಣ ಇದಕ್ಕೆ ಮತ್ತೂಂದು ಸೇರ್ಪಡೆ.

Advertisement

ಡ್ರಾಪ್‌ ಕೊಡುವ ನೆಪ
ಅ.22ರಂದು ಸಂಜೆ 7.30ರ ಸುಮಾರಿಗೆ ರಾ.ಹೆದ್ದಾರಿ 66ರ ಪುತ್ತೂರು ಬಾಳಿಗಾ ಫಿಶ್‌ನೆಟ್‌ ಬಳಿ ನೇಜಾರಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದಾಗ 37 ವರ್ಷದ ವ್ಯಕ್ತಿಯೋರ್ವರು ನಿಂತಿದ್ದಾಗ ಕಾರಿನಲ್ಲಿ ಬಂದವರು ‘ಗೋವಾ, ಕುಂದಾಪುರಕ್ಕೆ ಎಷ್ಟು ದೂರ ಇದೆ ? ಎಂದು ಪ್ರಶ್ನಿಸಿ ‘ಡ್ರಾಪ್‌ ಕೊಡುತ್ತೇವೆ’ ಎಂದು ಹೇಳಿ ಕಾರಿನಲ್ಲಿ ಕುಳ್ಳಿರಿಸಿ ಸ್ವಲ್ಪ ಮುಂದಕ್ಕೆ ಕೊಂಡೊಯ್ದು ಮೈಮೇಲಿದ್ದ ಚಿನ್ನದ ಸರ, ನಗದು ಮತ್ತು ಮೊಬೈಲ್‌ ಕಿತ್ತುಕೊಂಡು ಸಾಸ್ತಾನ ಟೋಲ್‌ ಗೇಟ್‌ನಿಂದ ಒಳರಸ್ತೆಗೆ ಕರೆದೊಯ್ದು ಕಾರಿನಿಂದ ದೂಡಿ ಹೋಗಿದ್ದರು, ಹಲ್ಲೆ ಕೂಡ ನಡೆಸಿದ್ದರು.

ಚಾಕಲೇಟ್‌ ಕೇಳಿ ಸರ ಕಸಿದ
ಈ ಘಟನೆ ನಡೆದದ್ದು ಆ.7ರಂದು ರಾತ್ರಿ 8.30ರ ವೇಳೆಗೆ ಮಣಿಪಾಲ ಈಶ್ವರ ನಗರದ ಆಂಗಡಿಯಲ್ಲಿ. ಒಬ್ಬ ವ್ಯಕ್ತಿ ನೀರು ಕೇಳಿದ. ಅನಂತರ ಇನ್ನೊಬ್ಬ ಬಂದು ಚಾಕಲೇಟ್‌ ಕೇಳಿದ. ಅಂಗಡಿ ಮಾಲಕ ಸುಮಾರು 75 ವರ್ಷ ಪ್ರಾಯದ ವ್ಯಕ್ತಿ ಚಾಕಲೇಟ್‌ ಕೊಡಲು ಕೈ ಹಾಕುತ್ತಿದ್ದಂತೆಯೇ ಕುತ್ತಿಗೆಗೆ ಕೈ ಹಾಕಿದ ಕಳ್ಳ ಸುಮಾರು 40,000 ರೂ. ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾಗಿದ್ದ.

ರೈಲಿನಲ್ಲಿಯೂ ದರೋಡೆ
ಅ.11ರಂದು ದಿಲ್ಲಿ-ಎರ್ನಾಕುಲಂ ರೈಲಿನಲ್ಲಿ ಉಡುಪಿಯ ಕುಟುಂಬವೊಂದಕ್ಕೆ ಅಮಲು ಪಾನೀಯ ನೀಡಿ ಚಿನ್ನಾಭರಣ, ನಗದು ದೋಚಿದ ಘಟನೆಯನ್ನು ಕೂಡ ಭೇದಿಸಲಾಗಿಲ್ಲ. ಇದು ಕೂಡ ಜನರಲ್ಲಿ ಮುಖ್ಯವಾಗಿ ರೈಲು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು.

ವಾಕಿಂಗ್‌ ಹೋಗುತ್ತಿದ್ದಾಗ…
ಡಿ.2ರಂದು ಲಕ್ಷ್ಮೀಂದ್ರನಗರದಲ್ಲಿ ಮುಂಜಾನೆ 4ರ ಸುಮಾರಿಗೆ ವಾಕಿಂಗ್‌ ಹೋಗುತ್ತಿದ್ದ 65 ವರ್ಷ ವಯಸ್ಸಿನ ವ್ಯಕ್ತಿಯನ್ನು ಆಮ್ನಿ ಕಾರಿನಲ್ಲಿ ಕರೆದೊಯ್ದು ಅವರ ಮೈಮೇಲಿದ್ದ ಚಿನ್ನಾಭರಣವನ್ನು ಲೂಟಿ ಮಾಡಿ ಕಿನ್ನಿಮೂಲ್ಕಿಯಲ್ಲಿ ಬಿಟ್ಟು ಹೋಗಲಾಗಿತ್ತು. ಬಳಿಕ ಡಿ.4ರಂದು ಮತ್ತೂಂದು ಘಟನೆ ನಡೆದಿದೆ. ಇಲ್ಲೂ 37 ವರ್ಷದ ವ್ಯಕ್ತಿ ಒಬ್ಬರೇ ಇದ್ದಿದ್ದು ಗಮನಿಸಿ ಸುಲಿಗೆ ಮಾಡಲಾಗಿದೆ. ಈಗ ಉಡುಪಿ, ಮಣಿಪಾಲದ ದರೋಡೆ, ಸುಲಿಗೆ ಪ್ರಕರಣಗಳು ಪೊಲೀಸರಿಗೆ ನಿಜಕ್ಕೂ ಸವಾಲಾಗಿ ಪರಿಣಮಿಸಿವೆ. ಪ್ರಕರಣಗಳನ್ನು ಭೇದಿಸಿ ಜನರಲ್ಲಿ ಸುರಕ್ಷಿತ ಭಾವನೆ ಮೂಡಿಸಲು ಒತ್ತಡವೂ ಸೃಷ್ಟಿಯಾದಂತಾಗಿದೆ.  

Advertisement

ಬಸ್‌ ನಿಲ್ದಾಣ ಸೇಫ್ ಅಲ್ಲ
ಉಡುಪಿ ಸಿಟಿ, ಸರ್ವೀಸ್‌ ಮತ್ತು ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದಲ್ಲಿ ಬೇರೆ ಜಿಲ್ಲೆಗಳಿಂದ ಬರುವ ಪ್ರಯಾಣಿಕರನ್ನು ಗುರಿಯಾಗಿಟ್ಟುಕೊಂಡು ಸುಲಿಗೆ ಮಾಡುತ್ತಿದ್ದ ಬಗ್ಗೆ ನಿರಂತರ ದೂರುಗಳು ಬರುತ್ತಿದ್ದವು. ಜುಲೈನಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದಕ್ಕೆ ಸಿಸಿಟಿವಿ ಫ‌ೂಟೇಜ್‌ ನೆರವಾಗಿತ್ತು. ಆದರೂ ಬಸ್‌ ನಿಲ್ದಾಣಗಳು ಪೂರ್ಣ ಸುರಕ್ಷಿತ ಎನ್ನುವ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ.

ಒಂದಕ್ಕೊಂದು ಸಾಮ್ಯತೆ?
ಕಳೆದ 5-6 ತಿಂಗಳ ಅವಧಿಯಲ್ಲಿ ಉಡುಪಿ ಬಸ್‌ ನಿಲ್ದಾಣ, ರಾ.ಹೆದ್ದಾರಿ 66, ರಾ.ಹೆದ್ದಾರಿ 169ಎ (ಉಡುಪಿ-ಮಣಿಪಾಲ) ಭಾಗಗಳಲ್ಲಿ ವರದಿಯಾಗಿರುವ ಹಲವು ಪ್ರಕರಣಗಳು ಒಂದಕ್ಕೊಂದು ಸಾಮ್ಯ ಇರುವಂತಿದೆ. ಒಬ್ಬೊಬ್ಬರಾಗಿ ಇರುವವರು, ಓಡಾಡುವವರನ್ನೇ ಗುರಿಯಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಲಾಗಿರುವುದು ಸ್ಪಷ್ಟ. 

— ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next