ಕಡಬ/ ಉಪ್ಪಿನಂಗಡಿ: ಇಚ್ಲಂಪಾಡಿ ಗ್ರಾಮದ ಮಾನಡ್ಕದ ವೃದ್ಧ ದಂಪತಿ ನಾರಾಯಣ ಪಿಳ್ಳೆ (70) ಹಾಗೂ ಶ್ಯಾಮಲಾದೇವಿ (65) ಅವರ ಮನೆಗೆ ಯುವಕರಿಬ್ಬರು ನುಗ್ಗಿ ಪಿಸ್ತೂಲು ಹಾಗೂ ತಲವಾರು ತೋರಿಸಿ ಬೆದರಿಸಿ ಲಕ್ಷಾಂತರ ರೂ. ಮೌಲ್ಯದ ನಗ ಹಾಗೂ ನಗದನ್ನು ಅಪಹರಿಸಿದ ಘಟನೆ ಬುಧವಾರ ರಾತ್ರಿ 7.30 ರ ಸುಮಾರಿಗೆ ಸಂಭವಿಸಿದೆ. ನಾರಾಯಣ ಪಿಳ್ಳೆ ನಿವೃತ್ತ ಸೈನಿಕರಾಗಿದ್ದು, ಅವರ ಇಬ್ಬರು ಪುತ್ರರೂ ಸೇನೆಯಲ್ಲಿದ್ದು, ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇದ್ದಾರೆ. ಅವರು ಟಿವಿ ವೀಕ್ಷಿಸುತ್ತಿದ್ದ ವೇಳೆ ತೆರೆದಿದ್ದ ಮುಂಬಾಗಿಲಿನಿಂದ ಒಳ ಪ್ರವೇಶಿಸಿದ ಯುವಕರು ಅವರನ್ನು ಬೆದರಿಸಿ ಶ್ಯಾಮಲಾದೇವಿ ಧರಿಸಿದ್ದ ಚಿನ್ನದ 2 ಬಳೆ, 2 ಚೈನ್ ಹಾಗೂ ಉಂಗುರಗಳನ್ನು ಕಿತ್ತುಕೊಂಡಿದ್ದಾರೆ.
ಕಪಾಟಿನೊಳಗಿದ್ದ ಸುಮಾರು 37, 500 ರೂ. ನಗದು, 2 ಮೊಬೈಲ್ ಹಾಗೂ ಎಟಿಎಂ ಕಾರ್ಡ್‌ಗಳನ್ನೂ ಕೊಂಡೊಯ್ದಿದ್ದಾರೆ. ತಮ್ಮ ಕೆಲಸ ಮುಗಿಸಿದ ಕಳ್ಳರು ಮನೆಯ ಹೊರಗೆ ಬರಬಾರದು ಮತ್ತು ಯಾರಿಗೂ ಮಾಹಿತಿ ನೀಡಬಾರದು, ನಾವು ಹೊರಗಡೆ ಕಾಯುತ್ತಿರುತ್ತೇವೆ, ಹೊರಗೆ ಬಂದರೆ ಕೊಲ್ಲುತ್ತೇವೆ ಎಂದು ಬೆದರಿಸಿ ಪರಾರಿಯಾಗಿದ್ದಾರೆ.
ಘಟನೆ ನಡೆದು ಒಂದು ತಾಸು ಕಳೆದ ಮೇಲೆ ಹೊರಬಂದ ದಂಪತಿ ಸ್ವಲ್ಪ ದೂರದಲ್ಲಿರುವ ಸಂಬಂಧಿಯ ಮನೆಗೆ ತೆರಳಿ ವಿಚಾರ ತಿಳಿಸಿದ ಮೇಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕಡಬ ಎಸ್‌ಐ ಪ್ರಕಾಶ್ ದೇವಾಡಿಗ, ಉಪ್ಪಿನಂಗಡಿ ಎಸ್‌ಐ ನಂದಕುಮಾರ್ ಹಾಗೂ ಧರ್ಮಸ್ಥಳ ಎಸ್‌ಐ ಅವಿನಾಶ್ ಸ್ಥಳದಲ್ಲಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ದರೋಡೆಕೋರರು ಬ್ಯಾರಿ ಭಾಷೆ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸೊತ್ತುಗಳ ನಿಖರ ಮೌಲ್ಯ ಇನ್ನಷ್ಟೇ ತಿಳಿದುಬರಬೇಕಿದೆ.