Advertisement

ರಸ್ತೆ ಬದಿ ವ್ಯಾಪಾರಿಗಳಿಗೆ ದುಬಾರಿ ಸುಂಕ ಬರೆ

06:45 AM Jun 10, 2019 | Lakshmi GovindaRaj |

ಎಚ್‌.ಡಿ.ಕೋಟೆ: ರಸ್ತೆ ಬದಿ ವ್ಯಾಪಾರಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸದೇ ಯಾವುದೇ ಸ್ಥಳೀಯ ಸಂಸ್ಥೆಗಳು ಸುಂಕ ವಸೂಲಿ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದ್ದರೂ, ಇಲ್ಲಿನ ಪುರಸಭೆ ಅಧಿಕಾರಿಗಳು ಮಾತ್ರ ತಮಗಿಷ್ಟ ಬಂದಂತೆ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ದೂರಿದ್ದಾರೆ.

Advertisement

ಪುರಸಭೆ ಹ್ಯಾಂಡ್‌ ಪೋಸ್ಟ್‌ನಲ್ಲಿ ಹತ್ತಾರು ವರ್ಷಗಳಿಂದ 50ಕ್ಕೂ ಹೆಚ್ಚು ಫ‌ುಟ್‌ಪಾತ್‌ ವ್ಯಾಪಾರಿಗಳು ರಸ್ತೆ ಬೀದಿಯಲ್ಲಿ ಹೋಟೆಲ್‌, ತರಕಾರಿ, ಗೋಬಿ, ಪಾನಿಪುರಿ, ಬಳೆ, ಹಣ್ಣು ಹಂಪಲು, ಟೀ ಅಂಗಡಿಗಳನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ.

ಎಷ್ಟು ಸುಂಕ?: ವರ್ಷ ಕಳೆದರೂ ಇಲ್ಲಿನ ಪುರಸಭೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಾರದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಪುರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿಯನ್ನು ಬಿಟ್ಟು ಮನಬಂದಂತೆ ಸುಂಕ ವಸೂಲಿ ಮಾಡುತ್ತಿದ್ದಾರೆ. ಒಂದು ಫಾಸ್ಟ್‌ಪುಡ್‌ ಹೋಟೆಲ್‌ಗೆ ದಿನಕ್ಕೆ 50 ರಿಂದ 100 ರೂ., ಪಾನಿಪುರಿ, ಗೋಬಿ, ಟೀ ಅಂಗಡಿಗಳಿಗೆ 30 ರಿಂದ 50 ರೂ.ವರೆಗೆ ಸುಂಕ ವಸೂಲಿ ಮಾಡುತ್ತಿದ್ದಾರೆ. ನಗರಸಭೆ ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಇಷ್ಟೊಂದು ದುಬಾರಿ ಸುಂಕ ವಸೂಲಿ ಇಲ್ಲ ಎಂದು ಹೇಳಲಾಗುತ್ತಿದೆ.

ಬೆದರಿಕೆ: ಪುರಸಭೆ ವಿಧಿಸುತ್ತಿರುವ ಈ ದುಬಾರಿ ಶುಲ್ಕವನ್ನು ಬೀದಿ ವ್ಯಾಪಾರಿಗಳು ಪ್ರಶ್ನಿಸಿದರೆ, ಸುಂಕ ನೀಡದಿದ್ದರೆ ನಾಳೆಯಿಂದ ಇಲ್ಲಿ ವ್ಯಾಪಾರ ಮಾಡುವಂತಿಲ್ಲ ಎಂದು ಸುಂಕ ವಸೂಲಿ ಸಿಬ್ಬಂದಿ ಬೆದರಿಕೆ ಹಾಕುತ್ತಾರೆ ಎಂದು ಅವಲತ್ತುಕೊಂಡಿದ್ದಾರೆ.

ಪುರಸಭೆ ಮುಖ್ಯ ಕೇಂದ್ರ ಸ್ಥಾನ ಎಚ್‌.ಡಿ.ಕೋಟೆ ಪಟ್ಟಣದಲ್ಲಿ 100ಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳಿದ್ದರೂ ಇಷ್ಟು ಪ್ರಮಾಣದ ಸುಂಕ ವಸೂಲಿ ಮಾಡುತ್ತಿಲ್ಲ. ಅದರೆ, ಕಳೆದೊಂದು ವರ್ಷದಲ್ಲಿ ಪುರಸಭೆ ವ್ಯಾಪ್ತಿಗೆ ಸೇರಿದ ಹ್ಯಾಂಡ್‌ಪೋಸ್ಟ್‌ ಗ್ರಾಮದಲ್ಲಿ ಮಾತ್ರ ದುಬಾರಿ ಸುಂಕ ವಸೂಲಿ ಮಾಡುತ್ತಿದ್ದಾರೆ.

Advertisement

ಈ ತಾರತಮ್ಯದ ಬಗ್ಗೆ ಇಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅಲ್ಲಿ ಇನ್ನೂ ಟೆಂಡರ್‌ ಆಗಿಲ್ಲ ಎಂದು ಸಬೂಬು ಹೇಳುತ್ತಾರೆ. ಈ ಬಗ್ಗೆ ಪುರಸಭೆ ಜನಪ್ರತಿನಿಧಿಗಳನ್ನು ಕೇಳಿದರೆ, ನಮಗೆ ಇನ್ನು ಅಧಿಕಾರ ಸಿಕ್ಕಿಲ್ಲ. ಅಧಿಕಾರಿಗಳನ್ನು ವಿಚಾರಿಸುತ್ತೇವೆ ಎಂದು ಜಾರಿಕೊಳ್ಳುತ್ತಾರೆ.

ಕನಿಷ್ಠ ಸೌಲಭ್ಯವಿಲ್ಲ: ಒಟ್ಟಾರೆ ಇಲ್ಲಿನ ಫ‌ುಟ್‌ಪಾತ್‌ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸದೆ, ಸುಂಕ ವಸೂಲಿ ಸಂಬಂಧ ಯಾವುದೇ ಹರಾಜು ಪ್ರಕ್ರಿಯೆ ನಡೆಸದೆ, ಪುರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿ ಬಿಟ್ಟು ಮನ ಬಂದಂತೆ ಸುಂಕ ವಸೂಲಿ ಮಾಡುತ್ತಿದ್ದರೂ, ಆ ಹಣ ಎಲ್ಲಿ ಹೋಗುತ್ತಿದೆ,

ಕಚೇರಿ ಖಾತೆಗೆ ಜಮಾ ಆಗುತ್ತಿದೆಯಾ ಎಂಬ ಯಾವುದಕ್ಕೂ ಇಲ್ಲಿನ ಅಧಿಕಾರಿಗಳಿಂದ ಉತ್ತರ ಸಿಗುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಜಿಲ್ಲಾಧಿಕಾರಿಗಳು, ಕ್ಷೇತ್ರದ ಶಾಸಕರು, ಪುರಸಭೆ ಸದಸ್ಯರು ಇತ್ತ ಗಮನಹರಿಸಿ ಫ‌ುಟ್‌ಪಾತ್‌ ವ್ಯಾಪಾರಿಗಳಿಗೆ ನ್ಯಾಯ ಒದಗಿಸಬೇಕಿದೆ ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

ವರ್ಷವಾದರೂ ಪುರಸಭೆ ಆಡಳಿತ ಇಲ್ಲ: ಎಚ್‌.ಡಿ.ಕೋಟೆ ಪುರಸಭೆಗೆ ಚುನಾವಣೆ ನಡೆದು ಚುನಾಯಿತ ಜನಪ್ರತಿನಿಧಿಗಳು ಆಯ್ಕೆಯಾಗಿ ವರ್ಷ ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ಪ್ರಶ್ನಿಸಿ ಕೆಲ ಸದಸ್ಯರು ನ್ಯಾಯಾಲಯದ ಮೇಟ್ಟಿಲೆರಿದ್ದರಿಂದ ಆರಂಭದಲ್ಲೇ ವಿಘ್ನ ಎದುರಾದರೇ, ಇನ್ನೂ ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಿಂದಾಗಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲು ತಡವಾಗಿದೆ. ಇದರಿಂದ ಪಟ್ಟಣದ ನಾಗರಿಕರಿಗೆ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ.

ಪುರಸಭೆ ಮುಖ್ಯಾಧಿಕಾರಿ ಮತ್ತು ನಾಲ್ಕು ಮಂದಿ ಫ‌ುಟ್‌ಪಾತ್‌ ವ್ಯಾಪಾರಿಗಳನ್ನೊಳಗೊಂಡ ಸಮಿತಿ ರಚಿಸಿ ವ್ಯಾಪಾರಿಗಳ ಹಿತ ಕಾಯುವ ದೃಷ್ಟಿಯಿಂದ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೀಡಿ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಅದರೆ, ಸುಂಕ ವಸೂಲಿ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ.
-ವಿಜಯಕುಮಾರ್‌, ಪುರಸಭೆ ಮುಖ್ಯಾಧಿಕಾರಿ

* ಬಿ.ನಿಂಗಣ್ಣ ಕೋಟೆ

Advertisement

Udayavani is now on Telegram. Click here to join our channel and stay updated with the latest news.

Next