Advertisement

ಚಂದ್ರಯಾನ-2ಗೆ ರಸ್ತೆಗಳೂ ಲಕ ಲಕ!

01:32 AM Sep 07, 2019 | Lakshmi GovindaRaju |

ಬೆಂಗಳೂರು: ವಾರದ ಹಿಂದೆ ಅಲ್ಲಿನ ರಸ್ತೆಯುದ್ದಕ್ಕೂ ಗುಂಡಿಗಳು, ಪೈಪ್‌ಲೈನ್‌ಗಳು ಬಿದ್ದಿದ್ದವು. ಎತ್ತರಿಸಿದ ಮಾರ್ಗದಲ್ಲಿ ಮಳೆ ಬಿದ್ದರೆ, ಅದರಲ್ಲಿನ ಪೈಪ್‌ನಿಂದ ಕೆಳಗೆ ಓಡಾಡುವ ವಾಹನ ಸವಾರರ ಮೇಲೆ ಆ ಮಳೆನೀರಿನ ಸ್ನಾನ ಆಗುತ್ತಿತ್ತು. ಆದರೆ ಶುಕ್ರವಾರ ರಸ್ತೆಯ ಚಿತ್ರಣವೇ ಬದಲಾಗಿದ್ದು, ಹುಡುಕಿದರೂ ಗುಂಡಿಗಳ ಗುರುತು ಸಿಗುತ್ತಿರಲಿಲ್ಲ. ಇದೆಲ್ಲವೂ ಚಂದ್ರಯಾನ-2 ಎಫೆಕ್ಟ್!

Advertisement

ಬಾಹ್ಯಾಕಾಶದಲ್ಲಿ ಚಂದ್ರನ ಸುತ್ತ ತಿರುಗುತ್ತಿರುವ “ಚಂದ್ರಯಾನ-2’ಕ್ಕೂ ನಗರದ ಪೀಣ್ಯ ರಸ್ತೆಗೂ ಯಾವ ಸಂಬಂಧ? ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ನೀವು ಕೇಳಬಹುದು. ಆದರೆ, ಸ್ವಾರಸ್ಯ ಇರುವುದು ಇಲ್ಲಿಯೇ. ಮಹತ್ವಾಕಾಂಕ್ಷಿ ಈ ಉಪಗ್ರಹದ ಹಗುರ ಚಂದ್ರನ ಸ್ಪರ್ಶಕ್ಕೆ ಸಾಕ್ಷಿಯಾಗಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ವಿಶೇಷ ವಿಮಾನದಲ್ಲಿ ಬರುವ ಪ್ರಧಾನಿ, ಇದೇ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ರೋ ಟೆಲಿಮೆಟ್ರಿಕ್‌ ಟ್ರ್ಯಾಕಿಂಗ್‌ ಆಂಡ್‌ ಕಮಾಂಡ್‌ ನೆಟ್‌ವರ್ಕ್‌ (ಐಎಸ್‌ಟಿಆರ್‌ಎಸಿ) ಕೇಂದ್ರಕ್ಕೆ ರಸ್ತೆ ಮೂಲಕ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ರಸ್ತೆ ದುರಸ್ತಿ ಕಾರ್ಯ ನಡೆಸಲಾಗಿತ್ತು.

ಗೊರಗುಂಟೆಪಾಳ್ಯದಿಂದ ಜಾಲಹಳ್ಳಿ ಕ್ರಾಸ್‌ನ ಎಡಕ್ಕೆ ತಿರುಗುತ್ತಿದ್ದಂತೆ ಜಲ ಮಂಡಳಿ ರಸ್ತೆ ಕೊರೆದಿತ್ತು. ಇದರಿಂದ ಅಲ್ಲಿ ಸುಗಮ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗಿತ್ತು. ಈ ಬಗ್ಗೆ ಅಧಿಕಾರಿಗಳು ತಿರುಗಿ ಕೂಡ ನೋಡಿರಲಿಲ್ಲ. ಗುರುವಾರ ಆ ರಸ್ತೆ ಸಂಪೂರ್ಣ ದುರಸ್ತಿಯಾಗಿದೆ. ಅದೇ ರೀತಿ, ಎತ್ತರಿಸಿದ ಮಾರ್ಗದಿಂದ ಮಳೆ ನೀರು ಕೆಳಗೆ ಓಡಾಡುವ ವಾಹನ ಸವಾರರ ಮೇಲೆ ಸುರಿಯುತ್ತಿತ್ತು. ಅದನ್ನೂ ಶುಕ್ರವಾರ ದುರಸ್ತಿ ಮಾಡಿದ್ದಾರೆ. ಇಸ್ರೋದ ಚಂದ್ರಯಾನ-2 ಕಾರ್ಯಕ್ರಮಕ್ಕೆ ಹಾಗೂ ಇದನ್ನು ವೀಕ್ಷಿಸಲು ಆಗಮಿಸುತ್ತಿರುವ ಪ್ರಧಾನಿಗೆ ಅಭಿನಂದನೆಗಳು ಎಂದು ಸ್ಥಳೀಯ ನಿವಾಸಿ ಮಂಜುನಾಥ್‌ ಹೇಳಿದರು.

ಯಶವಂತಪುರ ಬಳಿ ರಸ್ತೆ ಉಬ್ಬುಗಳು (ಎರಡೂ ಬದಿಯಲ್ಲಿದ್ದವು) ಇದ್ದವು. ಅವುಗಳನ್ನು ತೆರವುಗೊಳಿಸಿ, ಡಾಂಬರೀಕರಣಗೊಳಿಸಲಾಗಿದೆ. ಅಲ್ಲದೆ, ಮಾರ್ಗದುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ತಲೆಯೆತ್ತಿದ್ದವು. ಮೇಲಧಿಕಾರಿಗಳ ಸೂಚನೆ ಮೇರೆಗೆ ನಿರಂತರವಾಗಿ ಗುಂಡಿ ಮುಚ್ಚಲಾಗಿದೆ. ಮೂರರಿಂದ ನಾಲ್ಕು ತಂಡಗಳು ಈ ಕೆಲಸ ಕೈಗೆತ್ತಿಕೊಂಡಿವೆ ಎಂದು ರಸ್ತೆ ಉಬ್ಬು ತೆರವುಗೊಳಿಸುತ್ತಿದ್ದ ಗುತ್ತಿಗೆದಾರರ ಸಹಾಯಕರೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next