Advertisement

ಮಹಾ ಮಳೆಗೆ ನಲುಗಿದ ನಗರದ ರಸ್ತೆಗಳು

10:51 AM Aug 20, 2018 | Team Udayavani |

ಮಹಾನಗರ: ಕೆಲವೇ ದಿನಗಳಲ್ಲಿ ಶ್ರೀ ಕೃಷ್ಣಾಷ್ಟಮಿ, ಶ್ರೀ ಗಣೇಶ ಚತುರ್ಥಿ ಸಂಭ್ರಮಾಚ ರಣೆ ನಡೆಯಲಿದೆ. ಆದರೆ ನಗರದ ರಸ್ತೆಗಳು ಮಾತ್ರ ಮಹಾಮಳೆ ಯಿಂದಾಗಿ ನಲುಗಿ ಹೋಗಿದ್ದು,ಹಬ್ಬಗಳ ಮೆರವಣಿಗೆ ಸಾಗಲು ಕೂಡ ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.

Advertisement

ಹಬ್ಬಗಳು ಎದುರುಗೊಳ್ಳುತ್ತಿದ್ದಂತೆ, ರಸ್ತೆಯಲ್ಲಿ ಮೆರವಣಿಗೆ ಗೌಜಿ ಇರುವ ಕಾರಣದಿಂದ ಮಳೆಗಾಲದ ಕೊನೆಯ ಅವಧಿಯಲ್ಲಿ ನಗರದ ರಸ್ತೆಗಳಿಗೆ ತಾತ್ಕಾಲಿಕವಾಗಿ ತೇಪೆ ಅಥವಾ ಮರು ಡಾಮರು ಕಾಮ ಗಾರಿ ಸಾಮಾನ್ಯವಾಗಿ ಕೃಷ್ಣಾಷ್ಟಮಿ ಬರುವ ವೇಳೆಗೆ ಪ್ರತಿ ವರ್ಷ ನಡೆಸಲಾಗುತ್ತದೆ. ಆದರೆ, ಈ ಬಾರಿ ಮಳೆ ಇನ್ನೂ ಕೂಡ ನಿಲ್ಲದಿರುವ ಕಾರಣ ಪಾಲಿಕೆ ಯಾವುದೇ ಕಾಮಗಾರಿಗೆ ನಡೆಸಿಲ್ಲ.

ಈ ಮಳೆಗಾಲ ಆರಂಭದ ಹೊತ್ತಿಗೆ ನಗರದ ರಸ್ತೆಗಳು ಹೊಂಡ ಗುಂಡಿಗಳಾಗಿ ಬದಲಾಗಿದ್ದವು. ಕಾಂಕ್ರೀಟ್‌ ಅಳವಡಿಸಲಾದ ಕೆಲವು ರಸ್ತೆಗಳನ್ನು ಹೊರತುಪಡಿಸಿ ನಗರದ ಮುಖ್ಯ, ಹೊರಭಾಗದ ಡಾಮರು ರಸ್ತೆಗಳು ಬಹುತೇಕ ಗುಂಡಿಬಿದ್ದಿವೆ. ಇತ್ತೀಚೆಗೆ ಮತ್ತೆ ಮಳೆ ಬಂದ ಹಿನ್ನೆಲೆಯಲ್ಲಿ ಮತ್ತಷ್ಟು ಹೊಂಡಗಳು ಸೃಷ್ಟಿಯಾಗಿವೆ. ಮಳೆ ಬರುವಾಗ ರಸ್ತೆ ರಿಪೇರಿ ಮಾಡಲು ಆಗುವುದಿಲ್ಲ ಎಂದು ಪಾಲಿಕೆ ಕೈಕಟ್ಟಿ ಕುಳಿತಿತ್ತು.

ಶ್ರೀ ಕೃಷ್ಣಾಷ್ಟಮಿ ಹಿನ್ನೆಲೆಯಲ್ಲಿ ಮೊಸರು ಕುಡಿಕೆ ಉತ್ಸವ ನಗರಾದ್ಯಂತ ರಸ್ತೆಗಳಲ್ಲಿಯೇ ನಡೆಯುತ್ತದೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಗಣೇಶನನ್ನು ಇಟ್ಟು ಕೆಲವು ದಿನ ಆರಾಧಿಸುವ ಸಂಪ್ರದಾಯವಿದೆ. ಜತೆಗೆ ಗಣೇಶನ ಭವ್ಯ ಮೆರವಣಿಗೆ ಟ್ಯಾಬ್ಲೋ ಸಹಿತವಾಗಿ ನೂರಾರು ಜನರೊಂದಿಗೆ ಸಾಗುವ ಸಂದರ್ಭ ಈ ಹೊಂಡ ಗುಂಡಿಗಳು ತೊಡಕಾಗಬಹುದು. ಮಂಗಳೂರು ದಸರಾ ಮಹೋತ್ಸವ ಕಾಲದಲ್ಲೂ ಮೆರವಣಿಗೆ ಸಾಗುವುದರಿಂದ ರಸ್ತೆ ರಿಪೇರಿಯಾಗದಿದ್ದರೆ ಆಗಲೂ ಪರಿಣಾಮ ಎದುರಿಬೇಕಾದೀತು.

ಬಂದರು-ಮಾರ್ಕೆಟ್‌ ರಸ್ತೆ ಗೋಳು
ಜಿಲ್ಲಾಧಿಕಾರಿ ಕಚೇರಿಯ ಪಕ್ಕದ ಲ್ಲಿಯೇ ಇರುವ ಬಂದರು ರಸ್ತೆಯಲ್ಲಿ ಮಳೆಯಿಂದ ಹೊಂಡಗಳು ಉಂಟಾಗಿವೆ. ನಿತ್ಯ ಇಲ್ಲಿ ಸಾವಿರಾರು ವಾಹನ ಗಳು ಸಂಚರಿಸುತ್ತಿದ್ದು, ಪ್ರಯಾಣ ದುಸ್ತರ ವಾಗಿದೆ. ಮೊದಲೇ ಇಕ್ಕಟ್ಟಿನ ರಸ್ತೆ ಇಲ್ಲಿದ್ದು ಹೊಂಡಗಳು ನಿರ್ಮಾಣವಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ತರಕಾರಿ, ಹಣ್ಣು ಹಂಪಲುಗಳು ಸಿಗುವ ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆ ವ್ಯಾಪ್ತಿಯ ರಸ್ತೆಯ ಕಥೆಯೂ ಹೇಳತೀರದಾಗಿದೆ. ಇಲ್ಲಿನ ಬಹುತೇಕ ರಸ್ತೆಗಳಲ್ಲಿ ಮಳೆನೀರು ಈಗಲೂ ನಿಂತು ರಸ್ತೆ ಕೆಟ್ಟುಹೋಗಿದೆ.

Advertisement

ಸರ್ವಿಸ್‌ ಬಸ್‌ಸ್ಟ್ಯಾಂಡ್ ; ಹೊಂಡಗಳು ಮಾತ್ರ!
ಸ್ಟೇಟ್‌ಬ್ಯಾಂಕ್‌ನ ಖಾಸಗಿ ಬಸ್‌ ನಿಲ್ದಾಣವಂತೂ ಸಮಸ್ಯೆಯ ಆಗರವಾಗಿದೆ. ನಿಲ್ದಾಣಕ್ಕೆ ಪ್ರವೇಶ ಪಡೆಯುವ ಭಾಗದಿಂದ ನಿಲ್ದಾಣ ಪೂರ್ತಿ ಹೊಂಡಗಳಿಂದ ತುಂಬಿ ಕೊಂಡಿದೆ. 

ಕೈಗಾರಿಕೆಗಳ ನಾಡಿನಲ್ಲಿ ಹೊಂಡ ಗುಂಡಿ!
ಸುರತ್ಕಲ್‌, ಬೈಕಂಪಾಡಿ ವ್ಯಾಪ್ತಿಯ ಕೈಗಾರಿಕ ಪ್ರದೇಶದ ಅಕ್ಕ-ಪಕ್ಕದ ರಸ್ತೆಗಳು ಸಂಪೂರ್ಣ ಹೊಂಡಗಳು ಸೃಷ್ಟಿಯಾಗಿದ್ದು, ಇಲ್ಲಿ ಪ್ರಯಾಣವೇ ದುಸ್ತರ. ಸ್ಥಳೀಯರು ಹಬ್ಟಾರಣೆಯನ್ನು ಕೆಟ್ಟುಹೋದ ರಸ್ತೆಯಲ್ಲಿಯೇ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಮಂಗಳೂರಿನ ಒಳ/ಅಡ್ಡ ರಸ್ತೆಗಳ ಪಾಡು ಕೇಳುವಂತಿಲ್ಲ. ಎಲ್ಲೆಲ್ಲೂ ಹೊಂಡಗಳದ್ದೇ ಸಾಮ್ರಾಜ್ಯ. 

ಹೈ ವೇ ಸಂಚಾರ ದುಸ್ತರ
ಪಂಪ್‌ವೆಲ್‌ ಸರ್ಕಲ್‌, ನಂತೂರು, ಕೊಟ್ಟಾರ, ಕೂಳೂರು ಬ್ರಿಡ್ಜ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಮಳೆಯ ಕಾರಣದಿಂದ ಸಾಕಷ್ಟು ಅಧ್ವಾನಗಳನ್ನೇ ಎದುರಿಸುತ್ತಿದೆ. ದ್ವಿಚಕ್ರ ವಾಹನಗಳಿಗೆ ಇಲ್ಲಿ ಪ್ರಯಾಣವೇ ದುಸ್ತರ. ಹೆದ್ದಾರಿಯ ಮಧ್ಯ ಭಾಗದಲ್ಲಿ ಕಾಣಸಿಗುವ ಹೊಂಡಗಳು ಸಂಚಾರಕ್ಕೆ ಸಂಕಷ್ಟ ತರಿಸುತ್ತಿವೆ. ಆದರೆ, ಸಣ್ಣ ಪುಟ್ಟ ತೇಪೆ ಹೆದ್ದಾರಿಯಲ್ಲಿ ನಡೆಯುತ್ತಿದೆಯಾದರೂ ಅದು ಯಾವುದೇ ಫಲ ನೀಡುತ್ತಿಲ್ಲ.

15 ದಿನಗಳ ತೇಪೆ
ಮಳೆಯ ಹಿನ್ನೆಲೆಯಲ್ಲಿ ನಗರದ ವಿವಿಧ ರಸ್ತೆಗಳು ಹಾಳಾಗಿವೆ. ಕೆಲವೇ ದಿನಗಳಲ್ಲಿ ಹಬ್ಬಗಳು ನಡೆಯುವ ಕಾರಣದಿಂದ ತತ್‌ ಕ್ಷಣದಿಂದ ದುರಸ್ತಿಪಡಿಸಲು ಸುಮಾರು 15 ಕೋ.ರೂ. ಒದಗಿಸುವಂತೆ ರಾಜ್ಯ ಸರಕಾರವನ್ನು ಈಗಾಗಲೇ ಕೋರಿಕೊಳ್ಳಲಾಗಿದೆ. ಮುಂದಿನ 15 ದಿನದೊಳಗೆ ತುರ್ತಾಗಿ ತೇಪೆ ಹಾಕುವ ಕಾರ್ಯ ನಡೆಸಲಾಗುವುದು.
 - ಭಾಸ್ಕರ್‌ ಕೆ, ಮೇಯರ್‌

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next