ಮಾಗಡಿ: ಬೆಂಗಳೂರು ನೈಸ್ ರೋಡ್ ಜಂಕ್ಷನ್‌ನಿಂದ ಮಾಗಡಿವರೆಗೆ ನಾಲ್ಕು ಪಥದ ರಸ್ತೆ ಹಾಗೂ ಮಾಗಡಿಯಿಂದ ಸೋಮವಾರ ಪೇಟೆವರೆಗೆ ಎರಡು ಪಥದ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಗುಣಮಟ್ಟ ವೀಕ್ಷಣೆ ಮಾಡಿದ್ದೇನೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.
ತಾಲೂಕಿನ ಜಮಾಲ್ ಸಾಬರಪಾಳ್ಯ ಮತ್ತು ಆಗಲಕೋಟೆ ಹ್ಯಾಂಡ್ ಪೋಸ್ಟ್ ಬಳಿ ತ್ವರಿತಗತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ .ಡಿ.ಕುಮಾರಸ್ವಾಮಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. 166 ಕಿಮೀ ರಸ್ತೆ ಕಾಮಗಾರಿ ನಡೆಯುತ್ತಿದೆ.
ಸಮಸ್ಯೆ ಇತ್ಯರ್ಥ: ಪಟ್ಟಣದ ಸೋಮೇಶ್ವರಸ್ವಾಮಿ ದೇವಸ್ಥಾನದ ಬಳಿಯಿಂದ ಮಾಗಡಿಯ ಗಡಿ ಬೆಸ್ತರಪಾಳ್ಯದವರೆಗೆ ಸುಮಾರು 13 ಕಿಮೀ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು. ಈ ಭಾಗದಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಬಂಧ ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ರೈತರು, ಮುಖಂಡರು ತಿಳಿಸಿದ್ದರಿಂದ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದೇನೆ ಎಂದು ಹೇಳಿದರು.
ಅಗತ್ಯ ಚರಂಡಿ ನಿರ್ಮಾಣ, ಆಗಲಕೋಟೆ ಹ್ಯಾಂಡ್ ಪೋಸ್ಟ್ ಬಳಿ ಇರುವ ವೃತ್ತ 14 ಮೀಟರ್ ವಿಸ್ತರಣೆ, ಹೈಮಾಸ್ಟ್ ಹಾಗೂ ವೃತ್ತದಿಂದ ನಾಲ್ಕು ಭಾಗದ ದಿಕ್ಕಿನಲ್ಲಿ 200 ಮೀಟರ್‌ನಷ್ಟು ಸಂಪರ್ಕ ರಸ್ತೆ ವಿಸ್ತರಣೆ ಮಾಡಲಾಗುವುದು. ಫುಟ್‌ಬಾತ್, ಟೈಲ್ಸ್ ಅಳವಡಿಸುವುದು, ಮಕ್ಕಳ ರಕ್ಷಣೆ ದೃಷ್ಟಿಯಿಂದ ರೈಲಿಂಗ್ಸ್, ರಸ್ತೆ ಹುಬ್ಬು ಹಾಕುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಗ್ರಾಮಗಳ ದೇವಸ್ಥಾನಗಳು, ಪ್ರವೇಶದ್ವಾರಗಳು ಸಹ ರಸ್ತೆ ಕಾಮಗಾರಿಗೆ ಹೋಗಿದ್ದು, ಅವುಗಳನ್ನು ಸಹ ಕೆಸಿಫ್ನವರು ಮತ್ತೆ ನಿರ್ಮಿಸಿಕೊಡಲಿದ್ದಾರೆ. ಅಗತ್ಯ ಸೇತುವೆಗಳು,ಹೊಲಗದ್ದೆ ತೋಟಗಳಿಗೆ ದನಕರು, ರೈತರು ಸಂಚರಿಸಲು ಸಂಪರ್ಕ ರಸ್ತೆ ಕಲ್ಪಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು. ಪ್ರತಿ ವರ್ಷವೂ ನೆರೆ ಹಾವಳಿ ಹೆಚ್ಚುತ್ತಿರುವುದು ದುಃಖದ ಸಂಗತಿ. ಅತಿವೃಷ್ಟಿ ಬಗ್ಗೆ ಸರ್ಕಾರ ಎಚ್ಚೆತ್ತು ನಷ್ಟಕೊಳಗಾದವರಿಗೆ ಅಗತ್ಯ ಸೌಕರ್ಯ ಕಲ್ಪಿಸಿಕೊಡಬೇಕು ಎಂದರು.
ಕೆಸಿಪ್ ಇಇ ಆನಂದ್ ಯೋಜನಾಧಿಕಾರಿ ಬಾಬು, ಎಇ ಸುಹಾಸ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ, ಜುಟ್ಟನಹಳ್ಳಿ ಮಾರೇಗೌಡ, ಜಯರಾಂ, ಬೋರ್‌ವೆಲ್ ನರಸಿಂಹಯ್ಯ, ತಾಪಂ ಇಒ ಪ್ರದೀಪ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ಶೈಲಜಾ, ಕೆಡಿಪಿ ಸದಸ್ಯ ಟಿ.ಜಿ.ವೆಂಕಟೇಶ್, ದಂಡಿಗೇಪುರದ ಅಶೋಕ್ ಡಿ.ಸಿ.ಮೂರ್ತಿ, ಮಾಜಿ ಸದಸ್ಯ ದೇವರಾಜು, ಗಂಗರಾಜು,ಉಮೇಶ್, ಚಂದ್ರಶೇಖರ್, ರವಿಕುಮಾರ್ ಚಿಕ್ಕಣ್ಣ, ಅಯ್ಯಣ್ಣ, ಚಾಚೇನಹಟ್ಟಿ ಅಶೋಕ್, ಬೆಳಗವಾಡಿ ಸುರೇಶ್ ಇದ್ದರು