ಅರಂತೋಡು: ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿಯ ಮೊದಲ ಹಂತ 1 ಕೋಟಿ ರೂ. ವೆಚ್ಚದಲ್ಲಿ ಪೂರ್ತಿಗೊಂಡಿದ್ದು, 2ನೇ ಹಂತಕ್ಕೆ 2 ಕೋಟಿ ರೂ. ಅನುದಾನ ಇಟ್ಟಿದ್ದು, ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಡ್ತಲೆಯ ನಾಗರಿಕ ಹಿತರಕ್ಷಣ ವೇದಿಕೆಯು ಪಟ್ಟು ಹಿಡಿದ ಪರಿಣಾಮ ವಾಗಿ 1 ಕೋಟಿ ರೂ. ಅನುದಾನದಲ್ಲಿ ಅರಂತೋಡಿನಿಂದ ಕಾಮಗಾರಿ ಆರಂಭವಾಗಿ 1,357 ಮೀ. ರಸ್ತೆ ಅಭಿವೃದ್ಧಿ ಆಗಿದೆ. ಬಳಿಕ ಒತ್ತಡದ ಪರಿಣಾಮ 2 ಕೋಟಿ ರೂ. ಅನುದಾನ ಇಡಲಾಗಿತ್ತು. ಆ ಕಾಮಗಾರಿ ಆರಂಭವಾಗಿ ಇದೀಗ ಒಂದು ಕೋಟ್ ಡಾಮರು ಹಾಕಲಾಗಿದೆ.
ಅರಂತೋಡಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಆಗಿದೆ. ಆದರೆ ಈ ರಸ್ತೆ ಬದಿ ಅರ್ಧ ಅಡಿ ಜಾಗವೂ ಇಲ್ಲ ಮತ್ತು ವಿದ್ಯುತ್ ಕಂಬಗಳು ರಸ್ತೆಗೆ ತಾಗಿಕೊಂಡಿದೆ. ರಸ್ತೆ ಬದಿಯೇ ಚರಂಡಿ, ವಿದ್ಯುತ್ ಕಂಬಗಳು ಹಾಗೂ ಮರಗಳು ಇರುವುದರಿಂದ ಮುಂದೆ ಸಮಸ್ಯೆಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಜಂಟಿಯಾಗಿ ಅಪಾಯ ಸಂಭವಿಸುವ ಮೊದಲು ಎಚ್ಚೆತ್ತು ಈ ಬಗ್ಗೆ ಮಳೆಗಾಲ ಆರಂಭಕ್ಕೆ ಪೂರ್ವ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಈ ರಸ್ತೆಯ ದುಸ್ಥಿತಿಯಿಂದ ಮೇ 14ರಂದು ಟಿಪ್ಪರ್ ರಸ್ತೆ ಬದಿಗೆ ಹೋಗಿ ಬಳಿಕ ಅದನ್ನು ಜೆಸಿಬಿ ಮೂಲಕ ಮೇಲೆತ್ತಲಾಗಿತ್ತು. ಎರಡು ದಿನ ಅಂತರದಲ್ಲಿ ಕಾರ್ ಮತ್ತು ಪಿಕಪ್ ವಾಹನ ಚರಂಡಿಗೆ ಬಿದ್ದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
Related Articles
ಶೀಘ್ರ ಅಭಿವೃದ್ಧಿಗೆ ಆಗ್ರಹ
1 ಕೋಟಿ ರೂ. ಅನುದಾನದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಎರಡನೇ ಹಂತದಲ್ಲಿ ಸುಮಾರು 2.5 ಕಿ.ಮೀ. ರಸ್ತೆಗೆ ಕೇವಲ ಒಂದು ಕೋಟ್ ಡಾಮರು ಕಾಮಗಾರಿ ಆಗಿದ್ದು ಇನ್ನೊಂದು ಕೋಟ್ ಬಾಕಿ ಇದೆ. ಲೋಕೋಪಯೋಗಿ ಇಲಾಖೆಯಲ್ಲಿ ವಿಚಾರಿಸಿದಾಗ, ಕೆಲವು ತಾಂತ್ರಿಕ ಸಮಸ್ಯೆಗಳು ಇರುತ್ತದೆ ಎಂದು ತಿಳಿಸಿದ್ದಾರೆ. ಶೀಘ್ರವಾಗಿ ಎರಡನೇ ಕೋಟ್ ಡಾಮರು ಕಾಮಗಾರಿ ಮುಗಿಸಬೇಕು. ಅಲ್ಲದೆ ವೇದಿಕೆಯ ಬೇಡಿಕೆಯಂತೆ ಅಡ್ತಲೆ ತನಕ ರಸ್ತೆ ಅಭಿವೃದ್ಧಿಗೆ ಇನ್ನೂ 1 ಕಿ.ಮೀ.ಕ್ಕಿಂತ ಅಧಿಕ ಬಾಕಿ ಆಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಅರಂತೋಡು -ಎಲಿಮಲೆ ರಸ್ತೆ ಶೀಘ್ರವಾಗಿ ಅಭಿವೃದ್ಧಿಯಾಗಬೇಕು ಎಂದು ಅಡ್ತಲೆ ನಾಗರಿಕ ಹಿತರಕ್ಷಣ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಆಗ್ರಹಿಸಿದ್ದಾರೆ.