ಕಾರ್ಕಳ: ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಸುವ ವೇಳೆ ಸಾಣೂರು ಪಶುಚಿಕಿತ್ಸಾ ಕೇಂದ್ರ ಕುಸಿಯುವ ಭೀತಿ ಎದುರಿಸುತ್ತಿತ್ತು. ಅದನ್ನು ತಡೆಯಲು ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಗುತ್ತಿಗೆ ಪಡೆದ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆ ಕಂಡುಕೊಂಡ ಪರಿಹಾರ ರೀತಿ ಮಾತ್ರ ಅಚ್ಚರಿ ಮೂಡಿಸುತ್ತಿದೆ. ಗುಡ್ಡ ಕುಸಿತ ತಡೆಗೆ ತಡೆಗೋಡೆ ನಿರ್ಮಿಸುವ ಬದಲು ಟಾರ್ಪಾಲ್ ಹೊದೆಸಿ ಕೈ ತೊಳೆದುಕೊಂಡಿದ್ದಾರೆ.
ಸಾಣೂರು ಗ್ರಾಮದ ಬೈಪಾಸ್ ಜಂಕ್ಷನ್‌ನಿಂದ ಮುರತಂಗಡಿ ವರೆಗೆ ಗುಡ್ಡವನ್ನು ಅಗೆದಿರುವುದರಿಂದ, ಸಾಣೂರು ಪಶು ಚಿಕಿತ್ಸಾಲಯ ಕಟ್ಟಡದ ತಳಪಾಯದ ವರೆಗೆ ಸುಮಾರು 15 ಅಡಿಯವರೆಗೆ ಅಗೆದು ಮಣ್ಣು ತೆಗೆದ ಪರಿಣಾಮ ಸಾಣೂರು ಪಶು ಚಿಕಿತ್ಸಾಲಯ ಕೇಂದ್ರ ಕುಸಿಯುವ ಹಂತಕ್ಕೆ ತಲುಪಿತ್ತು.
ಇತ್ತೀಚೆಗೆ ಈ ಭಾಗದಲ್ಲಿ ಮಳೆ ಬಿರುಸುಗೊಂಡಿದ್ದು ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕಾಮಗಾರಿ ವೇಳೆ ಕಟ್ಟಡದ ತಳಪಾಯದ ಮಣ್ಣು ತೆಗೆದ ಕಾರಣ ಮಳೆಗೆ ಕೊಚ್ಚಿ ಹೋಗಿ ಇಡೀ ಕಟ್ಟಡವೇ ನೆಲಕ್ಕುರುಳುವ ಭೀತಿ ಎದುರಿಸುತ್ತಿದೆ. ಪಕ್ಕದಲ್ಲಿ ಹೈ ಟೆನ್ಶನ್ ತಂತಿಯ ಟವರ್ ಇದ್ದು, ಗುಡ್ಡ ಕುಸಿದರೆ ಹೈಟೆನ್ಶನ್ ತಂತಿಗಳು ಧರಾಶಾಯಿಯಾಗಿ ಪದ್ಮನಾಭನಗರ ಸಹಿತ ಸುತ್ತಮುತ್ತಲಿನ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಪಾಯ ತಂದೊಡ್ಡುವ ಭೀತಿ ಎದುರಾಗಿತ್ತು ಈ ಬಗ್ಗೆ ಸ್ಥಳೀಯರು ಹೆದ್ದಾರಿ ಅಧಿಕಾರಿಗಳು, ಗುತ್ತಿಗೆದಾರರ ಗಮನಕ್ಕೆ ತಂದಿದ್ದರು.
ಪಶುಚಿಕಿತ್ಸಾ ಕೇಂದ್ರ ಧರಾಶಾಯಿಯಾಗುವ ಬಗ್ಗೆ ಇತ್ತೀಚೆಗೆ ಸುದಿನದಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಅದಾದ ಬಳಿಕ ಎರಡು ದಿನಗಳ ಹಿಂದೆ ಶಾಸಕ ವಿ.ಸುನಿಲ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮಳೆಹಾನಿ ನಿರ್ವಹಣೆ, ಪ್ರಾಕೃತಿಕ ವಿಕೋಪ ಮುಂಜಾಗ್ರತೆ ಕುರಿತ ಸಭೆಯಲ್ಲೂ ಈ ವಿಚಾರ ಪ್ರಸ್ತಾವಗೊಂಡಿತ್ತು. ಇದೆಲ್ಲದರ ನಡುವೆ ಗುತ್ತಿಗೆ ಸಂಸ್ಥೆಯವರು ಕುಸಿತ ತಡೆಗೆ ಕನಿಷ್ಠ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಬದಲು ಟಾರ್ಪಾಲ್ ಹೊದೆಸಿ ಏನು ಪ್ರಯೋಜನ ಎಂದು ಸ್ಥಳೀಯರು ದೂರಿದ್ದಾರೆ.
ಕಡಿಮೆ ಖರ್ಚಿನ
ಹೊಸ ತಂತ್ರಜ್ಞಾನವೇ?
ಗುಡ್ಡ ಜರಿಯುವಲ್ಲಿ ಪ್ಲಾಸಿಕ್ ಟಾರ್ಪಾಲ್ ತಂದು ಮುಚ್ಚಿದ್ದಾರೆ. ಕಾಮಗಾರಿಯ ಹಣ ಉಳಿತಾಯಕ್ಕೆ ಹೀಗೂ ದಾರಿ ಕಂಡುಕೊಳ್ಳಲಾಗಿದೆಯೇ. ಇದು ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ಕಡಿಮೆ ಖರ್ಚಿನ ನೂತನ ತಂತ್ರಜ್ಞಾನವೇ ಎಂದು ಹೆದ್ದಾರಿ ಹೋರಾಟ ಸಮಿತಿ ಸದಸ್ಯ ಸಾಣೂರು ನರಸಿಂಹ ಕಾಮತ್ ವ್ಯಂಗ್ಯವಾಡಿದ್ದಾರೆ.