Advertisement

ರಸ್ತೆ ಕಾಮಗಾರಿ ಶೀಘ್ರ ಪೂರ್ಣ: ತಿಪ್ಪಾರೆಡ್ಡಿ

05:36 PM Sep 16, 2021 | Team Udayavani |

ಚಿತ್ರದುರ್ಗ: ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿರುವುದು ನಮ್ಮ
ಗಮನದಲ್ಲಿದೆ. ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಸಿ ಸಮಸ್ಯೆ ಬಗೆಹರಿಸುತ್ತೇವೆ. ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮನವಿ ಮಾಡಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ರಸ್ತೆ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಖರ್ಚು
ಮಾಡುತ್ತಿದ್ದೇವೆ. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.

ಚಿತ್ರದುರ್ಗ ನಗರದಲ್ಲಿ 50 ವರ್ಷಗಳಿಂದ ರಸ್ತೆ ಸಮಸ್ಯೆ ಇತ್ತು. ಈಗ ಅಭಿವೃದ್ಧಿ, ಅಗಲೀಕರಣ ಆಗುತ್ತಿದೆ. ಮುಂದಿನ 50 ವರ್ಷಗಳವರೆಗೆ ರಸ್ತೆ ಸಮಸ್ಯೆ ಬಾರದಂತೆ ಯೋಜನೆ ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ರಸ್ತೆ ಕಾಮಗಾರಿ ಮಾಡುವಾಗ ಕೆಲವೆಡೆ
ಒತ್ತುವರಿಯಾಗಿವೆ. ಸುಮಾರು 48 ಮಂದಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಲು ಹೈಕೋರ್ಟ್‌ನಲ್ಲಿ ಹೆಚ್ಚುವರಿಯಾಗಿ ವಕೀಲರನ್ನು ನೇಮಕ ಮಾಡಿದ್ದೇವೆ. ಇದರೊಟ್ಟಿಗೆ ರಸ್ತೆ ಅಗೆಯುವಾಗ ವಿವಿ ಸಾಗರ ಹಾಗೂ ಶಾಂತಿ ಸಾಗರ ನೀರಿನ ಪೈಪುಗಳು ಸಿಗುತ್ತಿವೆ. ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಿಕೊಂಡು ಮುಂದುವರೆಯಬೇಕಿದೆ ಎಂದರು.

ಅನೇಕರು ರಾಜಕೀಯ ಉದ್ದೇಶದಿಂದ ಟೀಕೆ-ಟಿಪ್ಪಣಿ ಮಾಡುತ್ತಿದ್ದಾರೆ ಇದಕ್ಕೆ ಎಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನೆಲ್ಲಾ ದಾಟಿ ಮುಂದೆ ಬಂದಿದ್ದೇನೆ. ಸಾರ್ವಜನಿಕರಿಗೆ ಅನುಕೂಲ ಆಗಬೇಕು. ನಗರದ ಸಣ್ಣಪುಟ್ಟ ವ್ಯಾಪಾರಿಗಳಿಗೂ ತೊಂದರೆ ಆಗದಂತೆ ಸಂಚಾರ ವ್ಯವಸ್ಥೆ ರೂಪಿಸುವುದು ನಮ್ಮ ಆದ್ಯತೆ. ನಮಗೆ ನಗರದ ಸೌಂದರ್ಯವಷ್ಟೇ ಮುಖ್ಯ ಅಲ್ಲ, ಬಡವರ ಜೀವನವೂ ಮುಖ್ಯ.ಈನಿಟ್ಟಿನಲ್ಲಿ ನಾಗರಿಕರು ಮಾರ್ಚ್‌ವರೆಗೆ ಸುಧಾರಿಸಿಕೊಂಡರೆ ಎಲ್ಲ ಸಮಸ್ಯೆಗಲೂ ಬಗೆಹರಿಯುತ್ತವೆ ಎಂದು ತಿಳಿಸಿದರು.

ಇದನ್ನೂ ಓದಿ:ಹೂಡಿಕೆದಾರರಿಗೆ ಭರ್ಜರಿ ಲಾಭ: 59 ಸಾವಿರ ಗಡಿ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್

Advertisement

ಜೋಗಿಮಟ್ಟಿ ರಸ್ತೆ ಗೆ ಹೆಚ್ಚುವರಿ 5 ಕೋಟಿ ರೂ. ಮಂಜೂರು ಮಾಡಿಸಿದ್ದು, ಬಿ.ಡಿ. ರಸ್ತೆಯಲ್ಲಿ ಅಳವಡಿಸಿರುವಂತೆ ಅಲ್ಲಿಯೂ ವಿದ್ಯುತ್‌ ಕಂಬಗಳ ‌ನ್ನು ಅಳವಡಿಸಲು ಯೋಜನೆ ಸಿದ್ಧವಾಗಿದೆ. ಇದರೊಟ್ಟಿಗೆ ಮದಕರಿ ವೃತ್ತದಿಂದ ಒನಕೆ ಓಬವ್ವ ವೃತ್ತರವರೆಗೆ ದೀಪ ಅಳವಡಿಸಬೇಕು. ಎಸ್‌. ನಿಜಲಿಂಗಪ್ಪ ರಸ್ತೆಯಲ್ಲಿ ಗುಂಡಿ ಬಿದ್ದಿರುವುದನ್ನು ಸರಿಪಡಿಸಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚಿಸಿದರು. ರಸ್ತೆ, ವೃತ್ತಗಳ ಮಧ್ಯಭಾಗದಲ್ಲಿ ಹೂವಿನ ಕುಂಡಗಳನ್ನು ಸ್ಥಾಪಿಸಿ ಗಿಡಗಳನ್ನು ಬೆಳೆಸಲು 2 ಕೋಟಿ ರೂ. ಅನುದಾನವಿದೆ. ಜೆಸಿಆರ್‌ ಬಡಾವಣೆಯಕಟ್ಟಡವೊಂದರ ಬಳಿ ವಿದ್ಯುತ್‌ ಪರಿವರ್ತಕವನ್ನು ರಸ್ತೆಗೆ ಹಾಕಲಾಗಿದೆ. ಅದು ಸಣ್ಣ ಮಕ್ಕಳ ಕೈಗೆ ಸಿಗುವಂತಿದೆ. ತಕ್ಷಣ ಬದಲಾಯಿಸಿ ಕಟ್ಟಡ ಮಾಲೀಕರ ಜಾಗದೊಳಗೆ ಹಾಕಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಇಂದಿರಾ ಕ್ಯಾಂಟೀನ್‌ ಸ್ಥಳಾಂತರಕ್ಕೆ ಶಾಸಕರ ಸೂಚನೆ
ನಗರದ ಯೂನಿಯನ್‌ ಪಾರ್ಕ್‌ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ ಅನ್ನು ಜಿಲ್ಲಾ ಆಸ್ಪತ್ರೆ ಬಳಿ ಸ್ಥಳಾಂತರಿಸುವಂತೆ ನಗರಸಭೆ ಇಂಜಿನಿಯರ್‌ ಮನೋಹರ್‌ ಅವರಿಗೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಸೂಚನೆ ನೀಡಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಯೂನಿಯನ್‌ ಪಾರ್ಕ್‌ ಬಳಿ ಸಾಕಷ್ಟುಜನಊಟ, ಉಪಹಾರ ಮಾಡುತ್ತಿಲ್ಲ, ಇನ್ನೂ ಉಳಿಯುತ್ತಿದೆ ಎಂಬ ಮಾಹಿತಿ ಇದೆ. ಅದನ್ನು ಆಸ್ಪತ್ರೆ ಬಳಿ ಸ್ಥಳಾಂತರಿಸಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆ ಕಾಮಗಾರಿಗೆ ಸಂಬಂಧಿಸಿದಂತೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಸ್ಯೆ ಇಲ್ಲ. ಏನಾದರೂ ಇದ್ದರೆ ತಿಳಿಸಿದರೆ ನಾನು ಬಗೆಹರಿಸಿ ಕೊಡುತ್ತೇನೆ. ಕಾಮಗಾರಿ ಮುಗಿಯುವುದು ವಿಳಂಬವಾದರೆ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಹೆಚ್ಚು ನೀರು ಹರಿಸಿ ತುಂಬಿಸಲು ಪ್ರಯತ್ನಿಸಿ.
-ಜಿ.ಎಚ್‌. ತಿಪ್ಪಾರೆಡ್ಡಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next