Advertisement

ಅಪಘಾತ ಕೇಂದ್ರವಾದ ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ 

05:43 PM Dec 02, 2017 | Team Udayavani |

ಮುಳಬಾಗಿಲು: ಮೂರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 234ರ ಶ್ರೀನಿವಾಸಪುರ-ಮುಳಬಾಗಿಲು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸದೇ ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕುರುಡುಮಲೆ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಸರ್ಕಾರದಿಂದ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಲಾಗುತ್ತಿದೆ, ಕೋಟಿ ಕೋಟಿ ಹಣ ವೆಚ್ಚ ಮಾಡಿ, ಹೆದ್ದಾರಿಗಳನ್ನು ಸಮರ್ಪಕವಾಗಿ ನಿರ್ಮಿಸಿ ಕಾಮಗಾರಿ ಪೂರ್ಣಗೊಳಿಸಬೇಕಾದ ಗುತ್ತಿಗೆ ಪಡೆದ ಜೆಎಸ್‌ಆರ್‌ ಕಂಪನಿ ಕಾಮಗಾರಿಯನ್ನು ಮೂರು ವರ್ಷವಾದರೂ ಪೂರ್ಣಗೊಳಿಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡ ಗುತ್ತಿಗೆ ಕಂಪನಿ ತಾಳಕ್ಕೆ ಕುಣಿಯುತ್ತಿದ್ದು, ಈ ರಸ್ತೆಯಲ್ಲಿ ಮೂರು ವರ್ಷಗಳಿಂದ ಸುಮಾರು 20ಕ್ಕೂ ಹೆಚ್ಚು ಮಂದಿ ಅಪಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನ ಕೈಕಾಲು ಕಳೆದುಕೊಂಡಿದ್ದಾರೆ.ಇಷ್ಟೆಲ್ಲಾ ಅವೈಜಾnನಿಕದಿಂದ ರಸ್ತೆ ಕೂಡಿದ್ದರೂ ಅಧಿಕಾರಿಗಳು ಮತ್ತು ತಾಲೂಕು ಆಡಳಿತದ ಮೌನ ವಹಿಸಿದೆ ಎಂದು ಕಿಡಿಕಾರಿದರು.

ಕಾಮಗಾರಿಯನ್ನು ಪೂರ್ಣಗೊಳಿಸದೇ ಸಾರ್ವಜನಿಕರ ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತಿರುವ ಟೆಂಡರ್‌ದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿ ರಸ್ತೆಯ ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಹಳೇ ಮೋರಿಗೆ ಸಿಮೆಂಟ್‌ ಲೇಪನ: ತಾಲೂಕು ಅಧ್ಯಕ್ಷ ಫಾರೂಕ್‌ ಪಾಷ ಮಾತನಾಡಿ, ರಸ್ತೆ ಕಾಮಗಾರಿ 2015ರಲ್ಲಿ ಪ್ರಾರಂಭವಾಗಿ ಮೂರು ವರ್ಷ ಕಳೆದಿದೆ. ಆದರೆ, ಒಂದು ಕಡೆ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣ ಮತ್ತೂಂದೆಡೆ ಮೋರಿಗಳನ್ನು ಹೊಸದಾಗಿ ನಿರ್ಮಿಸಲು ಹಳೆಯ ಮೋರಿಗಳಿಗೆ ಸಿಮೆಂಟ್‌ ಲೇಪನ ಮಾಡಿ ವಂಚನೆ ಮಾಡಿರುವುದರ ಜೊತೆಗೆ ಕೆರೆಮಣ್ಣನ್ನು ಸಹ ತೆಗೆದು ಕೆರೆಯನ್ನೂ ನಾಶ ಮಾಡುತ್ತಿದ್ದಾರೆ. ಕಾಮಗಾರಿಯನ್ನು ಜೆಎಸ್‌ಆರ್‌ ಕಂಪನಿಗೆ ನೀಡಿದ್ದು,

Advertisement

ಆ ಕಂಪನಿಯು ಮತ್ತಿತರ ನಾಲ್ಕು ಜನರಿಗೆ ತುಂಡು ಗುತ್ತಿಗೆ ಆಧಾರದಲ್ಲಿ ನೀಡಿರುವುದು ರಸ್ತೆಯ ಕಾಮಗಾರಿ ಪೂರ್ಣಗೊಳಿಸದಿರುವುದಕ್ಕೆ ಮಖ್ಯ ಕಾರಣವಾಗಿದೆ, 780 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಯ ರಸ್ತೆಯನ್ನು ಅಗಲೀಕರಣ ಮಾಡಿ ಗುಣಮಟ್ಟದ ರಸ್ತೆ ನೀಡಬೇಕು ಎಂದ ಅವರು, ರಸ್ತೆಯು ಉಬ್ಬು ತಗ್ಗುಗಳಿಂದ ಕೂಡಿದ್ದು, ರಸ್ತೆ ತಿರುವುಗಳಲ್ಲಿ ಕಾಮಗಾರಿ ಮಾಡುತ್ತಿರುವುದರಿಂದ ಸೂಚನಾ ಫ‌ಲಕಗಳನ್ನು ಅಳವಡಿಸದ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ ಎಂದರು.

ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌, ಜಿಲ್ಲಾ ಗೌರವಾಧ್ಯಕ್ಷ ಮೇಲಾಗಣಿ ದೇವರಾಜ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್‌ಪಾಲ್‌, ಜಿಲ್ಲಾ ಉಪಾಧ್ಯಕ್ಷ ಸಾಗರ್‌, ಜಿಲ್ಲಾ ಕಾರ್ಯಾಧ್ಯಕ್ಷ ರಂಜಿತ್‌ಕುಮಾರ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಬಾಲು, ಶಿವ, ಭರತ್‌, ಸುಪ್ರೀಂಚಲ, ಅಂಬ್ಲಿಕಲ್‌ ಮಂಜುನಾಥ್‌, ಕೊಮ್ಮನಹಳ್ಳಿ ನವೀನ್‌, ಜುಬೇದ್‌ಪಾಷಾ, ಗಜ, ಗಜೇಂದ್ರ, ಪುತ್ತೇರಿ ನಾರಾಯಣಸ್ವಾಮಿ, ಪುತ್ತೇರಿ ರಾಜು, ಈಕಂಬಳ್ಳಿ ಮಂಜುನಾಥ್‌, ಪುರುಷೋತ್ತಮ್‌, ರಾಮು, ಕೆಂಬೋಡಿ ಕೃಷ್ಣೇಗೌಡ ಸೇರಿಸಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ: ಪ್ರತಿಭಟನಾ ಸ್ಥಳಕ್ಕೆ ಆಗಮಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್‌ ಬಿ.ಎನ್‌.ಪ್ರವೀಣ್‌, ರಸ್ತೆ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಎಲ್ಲಾ ಟೆಂಡರ್‌ದಾರನ್ನು ಸಭೆ ಕರೆದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಅಪಘಾತವಾದ ವ್ಯಕ್ತಿಗಳ ಕುಟುಂಬಗಳಿಗೆ ಜೆಎಸ್‌ಆರ್‌ ಕಂಪನಿ ಪರಿಹಾರ ನೀಡುವುದರ ಜೊತೆಗೆ ಮೂರು ತಿಂಗಳಲ್ಲಿ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ತಿಳಿಸುವುದು ಇಲ್ಲವಾದರೆ ಟೆಂಡರ್‌ದಾರರ ಪರವಾನಿಗೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next