ಗುಡಿಬಂಡೆ: ಕಡೇಹಳ್ಳಿ ಗ್ರಾಮದ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದರಿಂದ ಬೇಸತ್ತ ರೈತರು ಹಸುಗಳನ್ನು ರಸ್ತೆಗೆ ಅಡ್ಡ ಕಟ್ಟಿ, ರಸ್ತೆ ತಡೆ ನಡೆಸಿ ವಿನೂತನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕಡೇಹಳ್ಳಿ ಗ್ರಾಮಸ್ಥ ಗಂಗರೆಡ್ಡಿ ಮಾತನಾಡಿ, ರಸ್ತೆ ಕಾಮಗಾರಿ ಪ್ರಾರಂಭ ಮಾಡಿ ಸುಮಾರು ಒಂದು ವರ್ಷ ಕಳೆಯುತ್ತಾ ಬಂದಿದೆ, ಆ ಸಮಯದಲ್ಲಿ ಇನ್ನೇನು ಕಾಮಗಾರಿ ಮುಗಿಸಿ ಬಿಡುವಂತೆ ಹಳೇ ಡಾಂಬಾರು ಕಿತ್ತು, ದೂಳು ಮಿಶ್ರಿತ ಜೆಲ್ಲಿ ಹಾಕಿರುತ್ತಾರೆ, ಅಂದಿನಿಂದ ಇಂದಿನವರೆಗೂ ಸಹ ಲೋಕೋಪಯೋಗಿ ಅಧಿಕಾರಿಗಳಿಗೂ, ಶಾಸಕರಿಗೆ ತಿಳಿಸಿದರು ರಸ್ತೆ ಕಾಮಗಾರಿ ಪೂರ್ಣಗೊಳಿಸಿರುವುದಿಲ್ಲ.
ರಸ್ತೆ ಕಾಮಗಾರಿ ಅಪೂರ್ಣವಾಗಿರುವುದರಿಂದ ವಾಹನಗಳು, ಭಾರಿ ಸರಕು ವಾಹನಗಳು ಸಂಚರಿಸಿದರೇ, ದೂಳು ಮನೆಗಳಿಗೆ ನುಗ್ಗುತ್ತಿದೆ, ಅಲ್ಲದೇ ಇದರಿಂದ ಜನರಿಗೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಸಂಚಾರ ಮಾಡಲು ತೊಂದರೆಯಾಗಿದೆ ಎಂದು ದೂರಿದರು.
ವಿಷಯ ತಿಳಿಯುತ್ತಿದ್ದಂತೆ ಗುಡಿಬಂಡೆ ಪೊಲೀಸ್ ಉಪ ನಿರೀಕ್ಷಕ ನಾಗರಾಜ್ ಭೇಟಿ ನೀಡಿ ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಪಟ್ಟರು, ಅದರು ಸಹ ಲೋಕೋಪಯೋಗಿ ಇಲಾಖೆ ಎ.ಇ.ಇ. ಪ್ರದೀಪ್ ಸ್ಥಳಕ್ಕೆ ಬರುವವರೆಗೂ ಸಹ ಪಟ್ಟು ಬಿಡದೆ ಕುಳಿತ್ತಿದ್ದರು.
ಎ.ಇ.ಇ ಪ್ರದೀಪ್ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ಇಪ್ಪತ್ತು ದಿನದಲ್ಲಿ ಕಾಮಗಾರಿ ಕೈಗೆತ್ತುಕೊಂಡು ತ್ವರಿತವಾಗಿ ಪೂರ್ಣಗೊಳಿಸುವ ಭರವಸೆ ಕೊಟ್ಟರು.