ಬೆಳ್ತಂಗಡಿ : ಬಹುದಿನಗಳ ಬೇಡಿಕೆಯಾದ ಬದ್ಯಾರು ಮುಂಡೂರು ಮುಖ್ಯ ರಸ್ತೆ ಡಾಮರು ಕಾಮಗಾರಿ ಬಗ್ಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಚುನಾವಣೆ ನೀತಿಸಂಹಿತೆ ನೆಪ ಒಡ್ಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಶಾರದಾಂಬಾ ಯುವಕ ಮಂಡಲದ ಅಧ್ಯಕ್ಷ ರಮಾನಂದ ಸಾಲ್ಯಾನ್ ಮುಂಡೂರು ಅಧ್ಯಕ್ಷತೆಯಲ್ಲಿ ಸ್ಥಳೀಯ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆಯಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಬದ್ಯಾರಿನಿಂದ ಕೋಟಿ ಕಟ್ಟೆ ತನಕ ಕಾಮಗಾರಿ ನಡೆದು, ಕೋಟಿಕಟ್ಟೆಯಿಂದ ಮುಂಡೂರು ದೇವಸ್ಥಾನ ರಸ್ತೆಯ 2.1 ಕಿ.ಮೀ. ರಸ್ತೆಯ ಕಾಮಗಾರಿಗೆ ಲೋಕೋಪ ಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಂಗಳೂರು ವಿಭಾಗದಿಂದ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿದೆ. ಆದರೆ ಈ ವರೆಗೆ ರಸ್ತೆ ಕಾಮಗಾರಿ ಪ್ರಾರಂಭವಾಗದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಕಾಮಗಾರಿಗೆ ಗುತ್ತಿಗೆದಾರರು ಒಂದು ಲೋಡ್ ಜಲ್ಲಿ ತಂದು ಹಾಕಿದ್ದು, ಇದೀಗ ಕಾಮಗಾರಿ ನಡೆಸಲು ಲೋಕಸಭಾ ಚುನಾವಣೆ ನೀತಿ ಸಂಹಿತೆ ಕಾರಣ ನೀಡಿ ರಸ್ತೆ ಕಾಮಗಾರಿ ನಡೆಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ಬಾರಿ ಇದೇ ಕಾರಣ ನೀಡುತ್ತಿರುವುದರಿಂದ ಮುಂಡೂರು ಗ್ರಾಮಸ್ಥರು ಯುವಕ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಿದರು.
ಸಭೆಯಲ್ಲಿ ಯುವಕ ಮಂಡಲದ ಉಪಾಧ್ಯಕ್ಷ ಜಗನ್ನಾಥ ಆಚಾರ್ಯ, ಕಾರ್ಯದರ್ಶಿ ಪ್ರಶಾಂತ ಆಚಾರ್ಯ, ಜತೆ ಕಾರ್ಯದರ್ಶಿ ಪ್ರಸನ್ನ, ಕೋಶಾಧಿಕಾರಿ ರಾಜೀವ ಸಾಲ್ಯಾನ್, ಸಲಹೆಗಾರ ಜಿನ್ನಪ್ಪ ಬಂಗೇರ ಹಾಗೂ ಸದಸ್ಯರು ಭಾಗವಹಿಸಿದ್ದರು.