Advertisement

ಹಗಲು ಹೊತ್ತು ರಸ್ತೆ ಕಾಮಗಾರಿ

01:48 PM Feb 08, 2018 | |

ಮಹಾನಗರ : ನಗರ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಬೆಳಗ್ಗೆ ಮಧ್ಯಾಹ್ನ ಸಂಜೆ ವಾಹನಗಳ ದಟ್ಟಣೆ ಅಧಿಕವಾಗಿ ಸಂಚಾರ ಅಸ್ತವ್ಯವಸ್ಥಗೊಳ್ಳುತ್ತಿರುವ ಸಂಗತಿ ಘಟಿಸುತ್ತಲೇ ಇದೆ. ಇದಕ್ಕೆ ಸೇರ್ಪಡೆ ಎಂಬಂತೆ, ಮಂಗಳೂರು ಪಾಲಿಕೆ ಆಯೋಜಿತ ರಸ್ತೆ ಕಾಮಗಾರಿಯನ್ನು ಬೆಳಗ್ಗೆ ಮಾಡುವ ಮೂಲಕ ವಾಹನ ದಟ್ಟಣೆ ಉಂಟಾಗಿ ಸುಮಾರು ಹೊತ್ತು ವಾಹನಗಳು ರಸ್ತೆಯಲ್ಲಿಯೇ ಬಾಕಿಯಾದ ಘಟನೆ ಬುಧವಾರ ಕಂಕನಾಡಿಯಲ್ಲಿ ಸಂಭವಿಸಿದೆ.

Advertisement

ಕಂಕನಾಡಿಯ ಕರಾವಳಿ ವೃತ್ತದಿಂದ ಬೆಂದೂರ್‌ವೆಲ್‌ ವರೆಗೆ ರಸ್ತೆ ಹೊಂಡ ಗುಂಡಿ ಸರಿಪಡಿಸುವ ಉದ್ದೇಶದಿಂದ ಹಾಗೂ ಪ್ರಯಾಣಿಕರಿಗೆ ನೆರವಾಗುವ ಉದ್ದೇಶದಿಂದ ಸಂಪೂರ್ಣ ಡಾಮರು ಕಾಮಗಾರಿಗೆ ಪಾಲಿಕೆ ನಿರ್ಧರಿಸಿತ್ತು. ಇದರಿಂದ ಕರಾವಳಿ ವೃತ್ತದಿಂದ ಬುಧವಾರ ಬೆಳಗ್ಗೆ ಕಾಮಗಾರಿ ಆರಂಭಿಸಲಾಗಿತ್ತು.

ಒಂದು ಬದಿಯಿಂದ ಕಾಮಗಾರಿ ನಡೆಯುತ್ತಿದ್ದರೆ, ಇನ್ನೊಂದು ಬದಿಯಿಂದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಕಂನಾಡಿ ಕರಾವಳಿ ವೃತ್ತಕ್ಕೆ ಪಂಪ್‌ವೆಲ್‌ ಹಾಗೂ ವೆಲೆನ್ಸಿಯಾ ಭಾಗದಿಂದ ವಾಹನಗಳು
ಪ್ರವೇಶಿಸುವ ಕಾರಣ ಇಲ್ಲಿ ವಾಹನದಟ್ಟಣೆ ಉಂಟಾಗಿ ವಾಹನಗಳೆಲ್ಲ ಸಾಲುಗಟ್ಟಲೆ ರಸ್ತೆಯಲ್ಲಿಯೇ ನಿಲ್ಲುವಂತಾಯಿತು. ಪಂಪ್‌ವೆಲ್‌ವರೆಗೆ ವಾಹನಗಳು ಸಂಚರಿಸದೆ ರಸ್ತೆಯಲ್ಲೇ ಬಾಕಿಯಾದವು.

ವಿದ್ಯಾರ್ಥಿ, ಉದ್ಯೋಗಿಗಳಿಗೆ ಸಂಕಷ್ಟ
ಪ್ರಯಾಣಿಕರ ದೃಷ್ಟಿಯಿಂದ ಕಂಕನಾಡಿಯಲ್ಲಿ ಕಾಮಗಾರಿ ಮಾಡಿರುವುದು ಉಪಯೋಗವಾದರೆ, ಕಾಮಗಾರಿಯ ನೆಪದಲ್ಲಿ ರಸ್ತೆ ತಡೆಗೆ ಕಾರಣವಾಗುವುದು ಎಷ್ಟು ಸರಿ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ. ಬೆಳಗ್ಗಿನ ಸಮಯ ಉದ್ಯೋಗ, ಶಾಲೆ, ಕಾಲೇಜುಗಳಿಗೆ ತೆರಳುವವರು ಕಾಮಗಾರಿಯ ಹಿನ್ನೆಲೆಯಲ್ಲಿ ಕೆಲವು ಹೊತ್ತು ಕಂಕನಾಡಿ ವ್ಯಾಪ್ತಿಯ ಬ್ಲಾಕ್‌ನಲ್ಲಿ ಬಾಕಿಯಾಗಿದ್ದರು.

ಕಂಕನಾಡಿ ಪಂಪ್‌ ವೆಲ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕೆಲವು ಬಾರಿ ನಡೆದಿದೆ. ಸಣ್ಣ ವಾಹನವು ರಿಪೇರಿಗೆಂದು ರಸ್ತೆ ಬದಿ ನಿಂತರೂ ಇಲ್ಲಿ ವಾಹನಗಳ ಸರತಿ ಸಾಲು ಉದ್ದವಿರುತ್ತದೆ. ಕರಾವಳಿ ವೃತ್ತ ಸಮೀಪ ಅಲ್ಲಲ್ಲಿ ಹೊಂಡಗುಂಡಿಗಳಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಈ ಹಿಂದೆ ರಿಪೇರಿ ಮಾಡುವ ಕಾಲದಲ್ಲೂ ಹಲವು ಬಾರಿ ಸಂಚಾರದಟ್ಟಣೆ ಸಮಸ್ಯೆ ಎದುರಾಗಿತ್ತು.

Advertisement

ರಾತ್ರಿ ವೇಳೆ ಕಾಮಗಾರಿ ನಡೆಸಿ
ಹಗಲು ಹೊತ್ತಿನಲ್ಲಿ ಇಂತಹ ಅಗತ್ಯ ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳುವ ಬದಲು ರಾತ್ರಿ ಸಮಯದಲ್ಲಿ ಇದರ ಕಾಮಗಾರಿ ಕೈಗೊಂಡರೆ, ವಾಹನಗಳ ಸಂಚಾರಕ್ಕೆ ತಡೆ ಉಂಟಾಗುವುದು ಕಡಿಮೆ ಆಗಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next