Advertisement

ಅಂಗವಿಕಲರ ಕೈಗೆಟಕದ ರಸ್ತೆ ತೆರಿಗೆ ವಿನಾಯಿತಿ

10:03 PM Feb 19, 2023 | Team Udayavani |

ದಾವಣಗೆರೆ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮಾಹಿತಿ ಕೊರತೆಯಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಂಗವಿಕಲರು ವಾಹನಗಳ ರಸ್ತೆ ತೆರಿಗೆ ವಿನಾಯಿತಿಯಿಂದ ವಂಚಿತರಾಗುತ್ತಿದ್ದಾರೆ.

Advertisement

ಅಂಗವಿಕಲರ ಸಂಚಾರದ ಹಿತದೃಷ್ಟಿಯಿಂದ ಸರಕಾರ, ಅಂಗವಿಕಲರ ವಾಹನಗಳಿಗೆ ರಸ್ತೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಿದೆ.

ಆದರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಾತ್ರ ಅಂಗವಿಕಲರು ತಮ್ಮ ಅಂಗವೈಕಲ್ಯಕ್ಕೆ ತಕ್ಕಂತೆ ಕಡ್ಡಾಯವಾಗಿ ವಾಹನಗಳನ್ನು ಮಾರ್ಪಾಡು ಮಾಡಿಕೊಂಡು ಬರುವಂತೆ ಒತ್ತಡ ಹೇರುತ್ತಿದ್ದಾರೆ. ಜತೆಗೆ ವಾಹನ ಮಾರ್ಪಾಡು ಮಾಡಿಕೊಂಡು ಬಂದರಷ್ಟೇ ರಸ್ತೆ ತೆರಿಗೆ ವಿನಾಯಿತಿ ಅನ್ವಯಿಸಿ ಅಡಾಪ್ಟೆಡ್‌ ವಾಹನಗಳೆಂದು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ತೀವ್ರ ತರಹದ ಅಂಗವೈಕಲ್ಯ ಹೊಂದಿ ಬೇರೆ ಚಾಲಕರ ನೆರವಿನೊಂದಿಗೆ ವಾಹನ ಬಳಸುವ ಅಂಗವಿಕಲರು ವಾಹನದ ರಸ್ತೆ ತೆರಿಗೆ ವಿನಾಯಿತಿಯಿಂದ ವಂಚಿತರಾಗುತ್ತಿದ್ದಾರೆ.

ಕೇಂದ್ರ ಸರಕಾರದ ಘನ ಉದ್ದಿಮೆ ಸಚಿವಾಲಯದಿಂದ ಅಂಗವಿಕಲರ ಮಾಲಕತ್ವದ ವಾಹನಗಳಿಗೆ ಶೇ. 10 ಜಿಎಸ್‌ಟಿ ರಿಯಾಯಿತಿ ನೀಡಲಾಗಿದೆ. ಅದೇ ರೀತಿ ರಸ್ತೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ ಸಂಪೂರ್ಣ ರಸ್ತೆ ತೆರಿಗೆ ರಿಯಾಯಿತಿ ನೀಡಲಾಗಿದೆ. ಈ ಆದೇಶದ ಪ್ರಕಾರ ಅಂಗವಿಕಲರು ತಮ್ಮ ವಾಹನವನ್ನು ತಾವು ಚಲಾಯಿಸುವಂತೆ ಮಾರ್ಪಾಡು ಮಾಡಿಕೊಂಡಿರಲಿ ಅಥವಾ ಮಾರ್ಪಾಡು ಮಾಡಿಕೊಳ್ಳದೆ ಬೇರೆ ಚಾಲಕರ ಸಹಾಯದಿಂದ ಬಳಕೆ ಮಾಡಲಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಂಗವಿಕಲರ ಮಾಲಕತ್ವದ ವಾಹನಗಳಿಗೆ ಅಂಗವಿಕಲರಿಗೆ ಸಿಗುವ ಎಲ್ಲ ಸೌಲಭ್ಯ ನೀಡಬೇಕು.

ನಿರ್ದೇಶನಕ್ಕೆ ಸೂಚನೆ
ತೀವ್ರತೆರನಾದ ಅಂಗವೈಕಲ್ಯ ಹೊಂದಿದ್ದು ಬೇರೆ ಚಾಲಕರ ಸಹಾಯದಿಂದ ವಾಹನ ಬಳಸುವ ಅಂಗವಿಕಲರಿಗೆ ವಾಹನ ಮಾರ್ಪಾಡು ಮಾಡಿಲ್ಲ ಎಂಬ ಕಾರಣಕ್ಕಾಗಿ ರಸ್ತೆ ತೆರಿಗೆ ವಿನಾಯಿತಿಯಿಂದ ವಂಚಿಸುತ್ತಿರುವ ಬಗ್ಗೆ ಇತ್ತೀಚೆಗೆ ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಅವರು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತರು ಸಾರಿಗೆ ಇಲಾಖೆ ಆಯುಕ್ತರಿಗೆ ಪತ್ರ ಬರೆದು, ಕೇಂದ್ರ ಸರಕಾರದ ಆದೇಶದಂತೆ ಅಂಗವಿಕಲರ ಮಾಲಕತ್ವದ ವಾಹನಗಳಿಗೆಲ್ಲ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು. ವಿನಾಕಾರಣ ವಾಹನ ಮಾರ್ಪಾಡಿಗೆ ಒತ್ತಾಯಿಸಬಾರದು ಎಂದು ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಸೂಚಿಸಿದ್ದಾರೆ.

Advertisement

ಈ ಸೂಚನೆಯಂತೆ ಸಾರಿಗೆ ಇಲಾಖೆ ಆಯುಕ್ತರು ಈ ಕುರಿತು ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next