ಮುದಗಲ್ಲ: ಪಿಎಸೈ ಪ್ರಕಾಶ ಡಂಬಳ ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಗುರುವಾರ ಬೆಳ್ಳಂಬೆಳಗ್ಗೆ ಬೀದಿಬದಿ ಅಂಗಡಿಗಳ ಸ್ಥಳಾಂತರಕ್ಕೆ ಕಾರ್ಯಾಚರಣೆ ನಡೆಸಿದರು.
ಪಿಎಸೈ ಪ್ರಕಾಶ ಡಂಬಳ, ಮುಖ್ಯಾಧಿ ಕಾರಿ ಮರಿಲಿಂಗಪ್ಪ ಮತ್ತು ಸಿಬ್ಬಂದಿ ರಸ್ತೆ ಅಗಲೀಕರಣವಾಗಿದ್ದರೂ ಹಳೇ ರಸ್ತೆಗೆ ಹೊಂದಿಕೊಂಡು ಬೀದಿಬದಿ ವ್ಯಾಪಾರಸ್ಥರು, ಅಂಗಡಿಕಾರರು ರಸ್ತೆಯಲ್ಲಿಯೇ ಸಾಮಗ್ರಿ ಇಟ್ಟುಕೊಂಡಿದ್ದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿತ್ತು. ಠಾಣೆಗೆ ವರ್ಗವಾಗಿ ಬಂದ ನೂತನ ಪಿಎಸೈ ಸಮಸ್ಯೆ ಮನಗಂಡು ಬೀದಿ ಬದಿ ವ್ಯಾಪಾರಸ್ಥರಿಗೆ ಈಗಾಗಲೇ ರಸ್ತೆ ಅಗಲೀಕರಣದ ಚರಂಡಿ ಮುಂದೆ ಗುರುತು ಹಾಕಿ ಅದರಲ್ಲಿಯೇ ಅಂಗಡಿ ಇಟ್ಟುಕೊಳ್ಳಬೇಕು. ಅಂಗಡಿಕಾರರು ಕೂಡ ತಮ್ಮ ಕಿರಾಣಿ ಸಾಮಾನು ರಸ್ತೆಯಲ್ಲಿಡಬಾರದು ಎಂದು ಎಚ್ಚರಿಕೆ ನೀಡಿ ಅವುಗಳನ್ನು ತೆರವುಗೊಳಿಸಿದರು.
ರಾಯಚೂರು-ಬೆಳಗಾವಿ ರಸ್ತೆ ಮತ್ತು ಮಸ್ಕಿ ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರಿಂದ ಪಟ್ಟಣದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಆಗ್ರಹ
ಪುರಸಭೆ ಪಕ್ಕದಲ್ಲಿರುವ ಆಟೋ, ಇತರೆ ವಾಹನಗಳು ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಗಲೀಕರಣವಾಗಿದ್ದರೂ ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿವೆ. ಅಲ್ಲದೇ ಪುರಸಭೆ ರಂಗ ಮಂದಿರದ ಆವರಣದಲ್ಲಿ ಕೂಡ ಮಾಂಸಾಹಾರಿ ಅಂಗಡಿಗಳು ಸೇರಿದಂತೆ ವಿವಿಧ ರೀತಿಯ ಅಂಗಡಿಗಳು ಹೆಚ್ಚಿನ ಜಾಗ ಹಿಡಿದುಕೊಂಡು ಮತ್ತು ಅನಗತ್ಯ ಬಂದ್ ಆದ ಅಂಗಡಿಗಳು ಜಾಗ ಹಿಡಿದುಕೊಂಡಿದ್ದರಿಂದ ಸಂಚಾರಕ್ಕೆ ಅಡೆತಡೆಯುಂಟಾಗಿದೆ. ಅವುಗಳನ್ನು ಪಿಎಸೈ, ಮುಖ್ಯಾಧಿಕಾರಿಗಳು ತೆರವುಗೊಳಿಸಿ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.