Advertisement

ರಸ್ತೆ ಬದಿ, ಜಮೀನಿನಲ್ಲೇ ಕಸ ವಿಲೇವಾರಿ, ದುರ್ನಾತ

09:00 PM Jun 07, 2019 | Team Udayavani |

ಕೊಳ್ಳೇಗಾಲ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಗ್ರಹಿಸುವ ಕಸವನ್ನು ನಗರ ಹೊರವಲಯದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುರಿಯುವ ಬದಲು ರಸ್ತೆ ಬದಿಯಲ್ಲೇ ರಾಶಿ ಹಾಕುತ್ತಿದ್ದು, ಓಡಾಡುವ ವಾಹನ ಸವಾರರಿಗೆ, ನಾಗರಿಕರು ದುರ್ನಾತ ತಾಳಲಾರದೇ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ನಗರದ 31 ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ಸಂಗ್ರಹಿಸುವ ಕಸವನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಲಾಗುತ್ತದೆ. ಚಾಲಕರು ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುರಿಯದೇ ಡೀಸೆಲ್‌ ಉಳಿಸಲು ಮಾರ್ಗಮಧ್ಯದ ಜಮೀನು ಅಥವಾ ರಸ್ತೆ ಬದಿ, ಡಾ.ಜಚನಿ ಡಿ.ಇಡಿ ಕಾಲೇಜು ಆವರಣದಲ್ಲಿ ಸುರಿದು ಪರಾರಿಯಾಗುತ್ತಿದ್ದಾರೆ.

ಕಸದ ಜತೆ ಮಳೆ ನೀರು: ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಬದಿಯಲ್ಲಿ ಸುರಿದಿರುವ ಕಸ ಸ್ವಲ್ಪ ಚರಂಡಿ ಸೇರಿದ್ದರೆ, ಮತ್ತಷ್ಟು ಕೊಳೆತು ದುರ್ನಾತ ಬೀರುತ್ತಿದೆ. ಆದರೂ, ಈ ಅವ್ಯವಸ್ಥೆ ನೋಡಿದರೂ ನೋಡದಂತೆ ಓಡಾಡುವ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲ.

ವಿಶ್ವ ಪರಿಸರ ದಿನವನ್ನು ಆಚರಿಸುತ್ತಿರುವ ಈ ದಿನಗಳಲ್ಲಿ ಶುಚಿತ್ವದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ, ಜಾಹೀರಾತು ನೀಡುವ ನಗರಸಭೆ ಅಧಿಕಾರಿಗಳೇ ಕಸ ವಿಲೇವಾರಿ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆ. ಸ್ವತ್ಛ ಭಾರತ ಅಭಿಯಾನ ವರ್ಷವಿಡೀ ಮಾಡಿದ್ರೂ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಲ್ಲ. ಕಸ ವಿಲೇವಾರಿಗಾಗಿ ಪ್ರತಿವರ್ಷ ಜನರಿಂದ ತೆರಿಗೆ ವಸೂಲಿ ಮಾಡುವ ನಗರಸಭೆ ಅಧಿಕಾರಿಗಳು, ಸಮರ್ಪಕವಾಗಿ ತಮ್ಮ ಕಾರ್ಯ ನಿರ್ವಹಿಸುವಲ್ಲಿ ವಿಫ‌ಲವಾಗಿದ್ದಾರೆ ಎಂಬುದಕ್ಕೆ ರಸ್ತೆ ಬದಿಯಲ್ಲಿ ಸುರಿದಿರುವ ಕಸವೇ ಸಾಕ್ಷಿ.

ಒತ್ತಾಯ: ನಗರಸಭೆ ಅಧಿಕಾರಿಗಳು ಕೂಡಲೇ ನಿಗದಿತ ಸ್ಥಳಕ್ಕೆ ಕಸ ಸುರಿಯದೆ ಬೇಕಾಬಿಟ್ಟಿ ಜಾಗದಲ್ಲಿ ಸುರಿಯುವುದನ್ನು ತಡೆಯದಿದ್ದ ಪಕ್ಷದಲ್ಲಿ ಅಧಿಕಾರಿಗಳ ವಿರುದ್ಧವೇ ಹೋರಾಟಕ್ಕೆ ಇಳಿದು ವಾಸನೆ ಮತ್ತು ಕ್ರಿಮಿಕೀಟಗಳ ಬಾಧೆಯಿಂದ ಅನಾರೋಗ್ಯಕ್ಕೆ ಒಳಗಾಗುವ ರೈತರಿಗೆ ಆರೋಗ್ಯ ಭತ್ಯೆಗೆ ಒತ್ತಾಯಿಸಬೇಕಾಗುತ್ತದೆ. ಮತ್ತು ಪ್ರಾಣಕ್ಕೆ ಕುತ್ತು ಬಂದ ಪಕ್ಷದಲ್ಲಿ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆಂದು ಪ್ರಗತಿಪರ ಹೋರಾಟಗಾರರ ಒತ್ತಾಯವಾಗಿದೆ.

Advertisement

ಕಸ ತೆರವು ಮಾಡಿ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಗ್ರಹಿಸುವ ಘನ ತ್ಯಾಜ್ಯವನ್ನು ಸಂಬಂಧಿಸಿದ ಸ್ಥಳಗಳಿಗೆ ಸಾಗಿಸಬೇಕಾದ ಸಿಬ್ಬಂದಿ ನಗರದ ಮುದುಮಲೈ ಗುಡ್ಡದ ತಪ್ಪಲಿನಲ್ಲಿರುವ ಡಾ.ಜಚನಿ ಡಿ.ಇಡಿ ಕಾಲೇಜಿಗೆ ಸೇರಿದ ಜಾಗ ಮತ್ತು ರಸ್ತೆಗಳ ಬದಿಯಲ್ಲಿ ಸುರಿದಿದ್ದು, ದುರ್ನಾತ ಬೀರುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ತೆರವು ಮಾಡಿ ಸ್ವತ್ಛತೆಗೆ ಆದ್ಯತೆ ನೀಡಬೇಕೆಂದು ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರಚನ್ನಮಲ್ಲ ಸ್ವಾಮಿ ಆಗ್ರಹಿಸಿದ್ದಾರೆ.

ಕಸವಿಲೇವಾರಿಗಾಗಿ ನಗರಸಭೆಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಆದರೂ ಕಸವನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿರುವ ಬಗ್ಗೆ ದೂರು ಬಂದಿವೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಮತ್ತು ಇನ್ನಿತರ ಸ್ಥಳಗಳಲ್ಲಿ ಸುರಿದಿರುವ ಕಸವನ್ನು ಘಟಕಕ್ಕೆ ಸಾಗಿಸುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚಿಸಲಾಗುವುದು.
-ನಾಗಶೆಟ್ಟಿ, ಪೌರಾಯುಕ್ತ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next