ಸಾಮ, ಭೇದ, ದಂಡಗಳ ಹೊರತಾಗಿ ಚಿತ್ರಕಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮ ಎಂದು ಪರಿಗಣಿಸಲ್ಪಟ್ಟಿದೆ. ಅದರಲ್ಲೂ ವ್ಯಂಗ್ಯಚಿತ್ರಗಳು ಪ್ರಮುಖ ಸಂದೇಶಗಳನ್ನು ಹಾಸ್ಯ ಮಿಶ್ರಿತ ವಿಡಂಬನೆ ಮೂಲಕ ಮನದಟ್ಟು ಮಾಡುವ ಶಕ್ತಿ ಹೊಂದಿವೆ. ಆದ್ದರಿಂದಲೇ ಇತ್ತೀಚೆಗೆ ಜಿಲ್ಲಾಡಳಿತ ಮಟ್ಟದ ಮತದಾನ ಜಾಗೃತಿ, ಪ್ಲಾಸ್ಟಿಕ್ ವಿರೋಧಿ ಅಭಿಯಾನಗಳಲ್ಲಿ ಕಾರ್ಟೂನ್ಸ್ ಪರಿಣಾಮಕಾರಿ ಪಾತ್ರ ವಹಿಸಿವೆ. ಈ ಸಮಯದಲ್ಲಿ ರಾಜ್ಯದ ಹೆಚ್ಚಿನ ವ್ಯಂಗ್ಯಚಿತ್ರಕಾರರು ಸಾಕಷ್ಟು ಬ್ಯುಸಿ ಡ್ನೂಟಿಯಲ್ಲಿದ್ದರು.
ಇದೇ ಹಿನ್ನೆಲೆಯಲ್ಲಿ ಮಂಗಳೂರಿನ ಟ್ರಾಫಿಕ್ ಪೊಲೀಸ್ ಇಲಾಖೆ ರಸ್ತೆ ಸುರಕ್ಷೆ ಸಪ್ತಾಹದಂಗವಾಗಿ “ಟ್ರಾಫಿಕ್ ಕಾರ್ಟೂನ್ಸ್ ಎಂಬ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಿತ್ತು. ರಾಜ್ಯದ ಖ್ಯಾತ 25ವ್ಯಂಗ್ಯಚಿತ್ರಕಾರರು ಈ ಪ್ರದರ್ಶನಕ್ಕಾಗಿ ನೂರಕ್ಕೂ ಹೆಚ್ಚು ಕಾರ್ಟೂನ್‌ಗಳನ್ನು ಕಳುಹಿಸಿಕೊಟ್ಟಿದ್ದರು. ಇವುಗಳನ್ನು ಮಂಗಳೂರಿನ ಫೋರಮ್ ಫಿಝಾ ಮಾಲ್‌ನಲ್ಲಿ ಚೊಕ್ಕವಾಗಿ ಜೋಡಿಸಿಟ್ಟಿದ್ದರು. ಒಂದಕ್ಕಿಂತ ಒಂದು ಹಾಸ್ಯಭರಿತ ವ್ಯಂಗ್ಯಚಿತ್ರಗಳು ರಸ್ತೆ ಸುರಕ್ಷೆಯ ಮೇಲೆ ಗಂಭೀರವಾಗಿ ಕ್ಷ-ಕಿರಣ ಬೀರುವಂತಿದ್ದುವು. ವಿಭಿನ್ನ ಕಲ್ಪನೆ ಮತ್ತು ವೈವಿಧ್ಯಮಯ ಶೈಲಿಯ ಚಿತ್ರಗಳಲ್ಲಿ ಯಮರಾಜನನ್ನು ಭೂಮಿಗೆ ತರಿಸಿದ್ದರು. ನಗೆ ಚಾಟಿಯ ಮಾತುಗಳನ್ನು ಹರಿಸಿದ್ದರು. ಪಂಚಿಂಗ್ ಸಂದೇಶಗಳನ್ನು ಬರೆದಿದ್ದರು.
ಒಂದು ವಿಚಾರದ ಮೇಲೆ ಚಿತ್ರ ಬರೆಯುವಾಗ ಇತಿಮಿತಿಗಳ ನಿರ್ಬಂಧ ಇರುತ್ತದೆ. ಆದರೂ ರಸ್ತೆ ಸುರಕ್ಷತೆ ವಿಷಯ ಬಂದಾಗ ವ್ಯಂಗ್ಯಚಿತ್ರಕಾರರು ಹೆಲ್ಮೆಟ್, ಅತೀವೇಗ, ಮದ್ಯಪಾನ ಮಾಡಿ ವಾಹನ ಚಾಲನೆ, ಓವರ್ ಲೋಡ್, ಓವರ್ ಟೇಕ್, ಮಕ್ಕಳ ಸುರಕ್ಷತೆ, ರಸ್ತೆ ದಾಟುವಿಕೆ ಮುಂತಾದ ವಿಶಾಲವಾದ ವಸ್ತು ವಿಷಯಗಳನ್ನು ಚಿತ್ರಗಳಲ್ಲಿ ಅಳವಡಿಸಿದ್ದರು. ಮುಂಜಾಗ್ರತಾ ಕ್ರಮಗಳ ಬಗ್ಗೆ ಸಂದೇಶಗಳ ಆಧಾರದ ಮೇಲೆ ಹೆಚ್ಚಿನ ಚಿತ್ರಗಳು ನಗುವಿನ ಅಲೆ ಎಬ್ಬಿಸುವುದರ ಜತೆಗೆ ಮನಮುಟ್ಟುವಂತಿದ್ದವು. ಅಪಘಾತಗಳಿಂದ ಕೊನೇ ನಗು ಆಗದಿರಲಿ ಎಂಬುದೇ ಒಟ್ಟಾರೆ ಉದ್ದೇಶವಾಗುತ್ತು.
ಸತೀಶ್ ಆಚಾರ್ಯ, ಪ್ರಕಾಶ್ ಶೆಟ್ಟಿ, ಜೇಮ್ಸ್ ವಾಜ್, ಹರಿಣಿ, ಜಾನ್ ಚಂದ್ರನ್, ರಘುಪತಿ ಶೃಂಗೇರಿ, ಯತೀಶ್ ಸಿದ್ದಕಟ್ಟೆ, ಜೀವನ್ ಶೆಟ್ಟಿ, ಅಮೃತ್ ವಿಟ್ಲ, ಜಿ. ಎಮ್. ಬೊಮ್ನಳ್ಳಿ, ಅರುಣ್ ಕುಮಾರ್, ಈರಣ್ಣ ಬೆಂಗಾಲಿ, ಶೈಲೇಶ್ ಉಜಿರೆ, ಶರದ್ ಕುಲಕರ್ಣಿ, ಶರಣು ಚೆಟ್ಟಿ, ರಂಗನಾಥ್ ಸಿದ್ದಾಪುರ, ಗಂಗಾಧರ ಅಡ್ಡೇರಿ, ಗೋಪಿ ಹಿರೇಬೆಟ್ಟು, ರವಿರಾಜ ಹಾಲಂಬಿ, ನಂಜುಂಡಸ್ವಾಮಿ, ಜಿ.ಎಸ್. ನಾಗನಾಥ್, ಬಿ.ವಿ. ಪಾಂಡುರಂಗ ರಾವ್, ಶ್ರೀಧರ್ ಕೋಮರವಳ್ಳಿ, ಯೋಗೀಶ್ ಶೆಟ್ಟಿಗಾರ್, ದತ್ತಾತ್ರಿ ಮೊದಲಾದ ವ್ಯಂಗ್ಯಚಿತ್ರಕಾರರು ಪ್ರದರ್ಶನದಲ್ಲಿ ಭಾಗವಹಿಸಿದ್ದರು.ವ್ಯಂಗ್ಯಚಿತ್ರಕಾರ ಜಾನ್ ಚಂದ್ರನ್ ವ್ಯಂಗ್ಯಚಿತ್ರ ಪ್ರದರ್ಶನವನ್ನು ಸಂಯೋಜಿಸಿದ್ದರು.
ಜೀವನ್ ಶೆಟ್ಟಿ