Advertisement
ನಗರದ ಟಿಪ್ಪುನಗರದಲ್ಲಿ ಬ್ರಿಡ್ಜ್ ಕಟ್ಟಿಕೊಂಡಿದ್ದು, ನೀರಿನ ಹರಿವು ಕಷ್ಟವಾಗಿದ್ದು, ಸುರಿದ ಧಾರಾಕಾರ ಮಳೆಗೆ ನೀರು ಮನೆಗಳಿಗೆ ನುಗ್ಗಲಾರಂಭಿಸಿದೆ. 23ನೇ ವಾರ್ಡ್ ಟಿಪ್ಪುನಗರದಲ್ಲಿ ಬರುವ ಸೀರಳ್ಳ ತುಂಬಿ ಹರಿಯುತ್ತಿದ್ದು, ಆ ಭಾಗದ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನತೆ ರಾತ್ರಿ ನಿದ್ರೆ ಇಲ್ಲದೆ ನೀರು ಮನೆಗೆ ನುಗ್ಗದಂತೆ ನೋಡಿಕೊಳ್ಳುವುದೇ ಆಗಿತ್ತು. ಅಲ್ಲದೆ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿಟ್ಟಿದ್ದ ಪಡಿತರ ಸೇರಿದಂತೆ ಆಹಾರ ಸಾಮಗ್ರಿ ಹಾಗೂ ಬಟ್ಟೆ ಬರೆ ಎಲ್ಲವೂ ನೀರಿನಲ್ಲಿ ತೋಯ್ದು ಕೆಲವು ಕಡೆ ಕೊಚ್ಚಿಕೊಂಡು ಹೋದ ದೃಶ್ಯ ಸಾಮಾನ್ಯವಾಗಿತ್ತು.
ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು ನಿಂತು ಕೆರೆಯಂತಾಗಿದ್ದರಿಂದ ಜೀವ ಕೈಯಲ್ಲಿಡಿದು ವಾಹನ ಚಾಲಕರು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ಜಿಲ್ಲಾಡಳಿತ ಬೆಂಗಳೂರು ಮತ್ತು ಮೈಸೂರು ನಡುವಣ ಸಂಚಾರಕ್ಕೆ ರಸ್ತೆ ಬಳಸದಂತೆ ಎಚ್ಚರಿಕೆ ನೀಡಿದ್ದು, ಪರ್ಯಾಯ ಮಾರ್ಗವಾಗಿ ಕನಕಪುರ ಮಾರ್ಗ ಅಥವಾ ಮಾಗಡಿ ಮಾರ್ಗದ ರಸ್ತೆಗಳಲ್ಲಿ ಸಂಚಾರಕ್ಕೆ ಬಳಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ವಿಶೇಷವಾಗಿ ಬೆಂಗಳೂರಿನಿಂದ-ಮೈಸೂರಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳಪೆ ಕಾಮಗಾರಿಯಾಗಿದ್ದು, ರಸ್ತೆ ನಿರ್ಮಾಣದ ವೇಳೆ ಬಿದ್ದ ನೀರು ಮೋರಿ ಅಥವಾ ರಾಜಕಾಲುವೆಗೆ ನೇರವಾಗಿ ಹೋಗುವಂತೆ ಕಾಮಗಾರಿ ನಿರ್ಮಿಸುವಲ್ಲಿ ವಿಫಲವಾಗಿದ್ದೆ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.