Advertisement

18 ವರ್ಷಗಳಿಂದ ಡಾಮರು ಕಾಣದ ಪಾಂಡವರಕಲ್ಲು ರಸ್ತೆ

02:45 AM Jun 26, 2018 | Karthik A |

ಪುಂಜಾಲಕಟ್ಟೆ: ಬಂಟ್ವಾಳ- ಬೆಳ್ತಂಗಡಿ ತಾಲೂಕುಗಳ ಎರಡು ಗ್ರಾಮಗಳನ್ನು ಸಂಪರ್ಕಿಸುವ ಪಾಂಡವರಕಲ್ಲು- ಬೆರ್ಕಳ ಗ್ರಾಮೀಣ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬಂಟ್ವಾಳ ತಾಲೂಕಿನ ಬಡಗಕಜೆಕಾರು ಮತ್ತು ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮವನ್ನು ಸಂಪರ್ಕಿಸುವ ಈ ರಸ್ತೆ ಸುಮಾರು 4 ಕಿ.ಮೀ. ಉದ್ದವಿದ್ದು, ನೀರಾರಿಯಿಂದ ಬೆರ್ಕಳವನ್ನು ಸೇರುತ್ತದೆ. ಇದಕ್ಕೆ ಸಂಪೂರ್ಣ ಡಾಮರು ಕಾಮಗಾರಿಯಾಗಿ ಸುಮಾರು 18 ವರ್ಷಗಳು ಕಳೆದಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಈ ರಸ್ತೆ ಜನ ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು, ಪರಸ್ಪರ ಸಂಪರ್ಕ ಶೋಚನೀಯವಾಗಿದೆ.

Advertisement

ಕಾಂಕ್ರೀಟ್‌ ಸೂಕ್ತ
18 ವರ್ಷಗಳ ಹಿಂದೆ ಕೆ.ಎ. ಸತೀಶ್ಚಂದ್ರ ಬಂಟ್ವಾಳ ತಾಲೂಕು ಪಂಚಾಯತ್‌ ಅಧ್ಯಕ್ಷರಾಗಿದ್ದಾಗ ಈ ರಸ್ತೆ ಡಾಮರು ಕಂಡಿತ್ತು. ಕಳೆದ ಬಾರಿ ನೀರಾರಿಯಿಂದ ಮಿತ್ತೂಟ್ಟುವರೆಗೆ ಸ್ವಲ್ಪ ತೇಪೆ ಕಾರ್ಯ ನಡೆದಿತ್ತು. ನಾಲ್ಕು ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿಗಾಗಿ ವಿಸ್ತರಣೆ ಕಾಮಗಾರಿಗಾಗಿ ರಸ್ತೆ ಬದಿಯ ಮರಗಳನ್ನು ತೆಗೆಯಲಾಗಿತ್ತು. ಆದರೆ ರಸ್ತೆ ಅಭಿವೃದ್ಧಿಯಾಗಿಲ್ಲ, ಇದೀಗ ಕಲ್ಲಿನ ಕೋರೆಗಳ ಘನ ವಾಹನಗಳ ಸಂಚಾರ, ಮಳೆ ನೀರಿನ ಕಾರಣದಿಂದ ಡಾಮರು ಕಿತ್ತು ಹೋಗಿ ರಸ್ತೆ ಹೊಂಡ- ಗುಂಡಿಗಳಿಂದ ತುಂಬಿದೆ. ರಸ್ತೆಗೆ ಪೂರ್ಣವಾಗಿ ಕಾಂಕ್ರೀಟ್‌ ಅಳವಡಿಸಿದರೆ ಮಾತ್ರ ಮುಂದೆ ಸಂಚಾರಕ್ಕೆ ಅನುಕೂಲವಾಗಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಹತ್ತಿರದ ದಾರಿ
ಈ ರಸ್ತೆಯಲ್ಲಿ ದಿನ ನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸುತ್ತಿದ್ದು, ಕೆಸರು, ಹೊಂಡಗಳಿಂದಾಗಿ ರಿಕ್ಷಾದವರೂ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಕಟ್ಟದಪಡ್ಪು ಕಡೆಯಿಂದ ಮಡಂತ್ಯಾರಿಗೆ, ಕಕ್ಯಪದವಿಗೆ ಇದು ಹತ್ತಿರದ ದಾರಿಯಾಗಿದ್ದು, ಸರಿಪಡಿಸಿದಲ್ಲಿ ಬಹಳ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next