Advertisement

ಮೂಡುಬಗೆ-ಮಾರ್ಡಿ ರಸ್ತೆ: 2 ವರ್ಷಗಳಿಂದ ಆಗಿಲ್ಲ ದುರಸ್ತಿ

06:00 AM Jun 24, 2018 | Team Udayavani |

ಅಂಪಾರು: ಮಾರ್ಡಿಯಿಂದ ಮೂಡುಬಗೆಗೆ ಸಂಚರಿಸುವ ಸುಮಾರು 1.5 ಕಿ.ಮೀ. ದೂರದ ಜಿ.ಪಂ. ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಚರಿಸುವುದೇ ದುಸ್ತರ ವಾಗಿದೆ. ದುರಸ್ತಿ ಕಾಣದೇ 2 ವರುಷಗಳು ಕಳೆದಿದ್ದು, 2010ರ ಅನಂತರ ಡಾಮರೀಕರಣವೇ ಆಗಿಲ್ಲ. 

Advertisement

ಮಾರ್ಡಿಯಿಂದ ಮೂಡುಬಗೆಯಾಗಿ ಅಂಪಾರು, ಸಿದ್ದಾಪುರಕ್ಕೆ ಸಂಚರಿಸಲು ಇದೇ ಸಂಪರ್ಕ ರಸ್ತೆಯಾಗಿದ್ದು, ಮೂಡುಬಗೆ-ಮಾರ್ಡಿ ರಸ್ತೆಯ ಶೇಡಿನಕೊಡ್ಲುವಿನಲ್ಲಿ ಸಂಪೂರ್ಣ ಹದಗೆಟ್ಟು ಹೋಗಿದೆ. 

ದೂರು ನೀಡಿದರೂ ಸ್ಪಂದಿಸಿಲ್ಲ
ಈ ಮಾರ್ಗವಾಗಿ ದಿನನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಸಂಚರಿಸುತ್ತಾರೆ. ಅದರಲ್ಲೂ ಶಾಲಾ ಮಕ್ಕಳ ವಾಹನಗಳೇ ಹೆಚ್ಚಾಗಿ ಸಂಚರಿಸುತ್ತಿವೆ. ರಸ್ತೆಯ ದುರವಸ್ಥೆಯ ಬಗ್ಗೆ ಎಷ್ಟು ಬಾರಿ ದೂರು ನೀಡಿದರೂ ಪ್ರಯೋಜನ ಮಾತ್ರ ಶೂನ್ಯ. ಕೊಡ್ಲಾಡಿ- ಮಾರ್ಡಿ ಸೇತುವೆಯ ಆಚೆ ಬದಿ ರಸ್ತೆ ಆಜ್ರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದು, ಆ ರಸ್ತೆ ದುರಸ್ತಿಯಾಗಿ ಚೆನ್ನಾಗಿದೆ. ಆದರೆ ಸೇತುವೆಯ ಈ ಬದಿ ರಸ್ತೆ ಅಂಪಾರು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದೆ. 

9 ವರ್ಷಗಳ ಹಿಂದೆ ಡಾಮರು
ಮಾರ್ಡಿ- ಮೂಡುಬಗೆ ರಸ್ತೆಗೆ 2010 ರಲ್ಲಿ ಅಂದರೆ ಸುಮಾರು 9 ವರ್ಷಗಳ ಹಿಂದೆ ಡಾಮರೀಕರಣವಾಗಿತ್ತು. ಅದರ ಅನಂತರ 2012 ರಲ್ಲಿ  ಅಲ್ಲಲ್ಲಿ  ಹೊಂಡ- ಗುಂಡಿ ಬಿದ್ದ ಕಡೆಗೆ ಪ್ಯಾಚ್‌ವರ್ಕ್‌ ಮಾಡಲಾಗಿತ್ತು. ಆ ಬಳಿಕ ಇತ್ತ ಯಾರೂ ಗಮನವೇ ಹರಿಸಿಲ್ಲ.  

ಚರಂಡಿಯೇ ಇಲ್ಲ
ಈ ರಸ್ತೆ ಇಷ್ಟೊಂದು ಹದಗೆಟ್ಟು ಹೋಗಲು ಮುಖ್ಯ ಕಾರಣ ರಸ್ತೆಯ ಎರಡೂ ಬದಿಗಳಲ್ಲಿಯೂ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಪ್ರತಿವರ್ಷ ಹೊಂಡ – ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 

Advertisement

ಬಾಡಿಗೆ ಹಣವೆಲ್ಲ ರಿಕ್ಷಾ ದುರಸ್ತಿಗೆ 
7 ವರ್ಷಗಳಿಂದ ಹೊಂಡ- ಗುಂಡಿಗಳ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಬಾಡಿಗೆಯಿಂದ ಸಿಗುವ ಹಣವೆಲ್ಲ ರಿಕ್ಷಾ ದುರಸ್ತಿಗೆ ಹಾಕುವ ಸ್ಥಿತಿ ನಮ್ಮದಾಗಿದೆ. ಜಿ.ಪಂ.ನವರಿಗೆ ಹೇಳಿದರೆ ಅನುದಾನವಿಲ್ಲ  ಅಂತಾರೆ. ನಾವೇ ರಿಕ್ಷಾದವರೆಲ್ಲ  ಸೇರಿ 2-3 ಸಲ ಹೊಂಡ- ಗುಂಡಿಗಳಿಗೆ ಜಲ್ಲಿ- ಕಲ್ಲು ಹಾಕಿ ತುಂಬಿಸುವ ಕಾರ್ಯ ಮಾಡಿದ್ದೇವು. 
– ಆನಂದ ರಿಕ್ಷಾ ಚಾಲಕರು, ಮಾರ್ಡಿ

ರಸ್ತೆ ದುರಸ್ತಿಗೆ ಕ್ರಮ
ಹಿಂದಿನ ಬಾರಿ ಅನುದಾನ ಕೊರತೆಯಿಂದ ರಸ್ತೆ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಈ ಬಾರಿಯ ಜಿ.ಪಂ. ಬಜೆಟ್‌ನಲ್ಲಿ ಹೆಚ್ಚಿನ ಹಣ ಬಿಡುಗಡೆಯಾಗಲಿದ್ದು, ಈ ಸಲ ಮೂಡುಬಗೆ- ಮಾರ್ಡಿ ರಸ್ತೆಯ ದುರಸ್ತಿಗೆ ಮೊದಲ ಆದ್ಯತೆ ನೀಡಲಾಗುವುದು. ಕೆಲ ದಿನಗಳ ಹಿಂದಷ್ಟೇ ಅಲ್ಲಿಗೆ ಸ್ವತ‌ಃ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಚರಂಡಿ ನಿರ್ಮಾಣಕ್ಕೂ ಗಮನ ಕೊಡಲಾಗುವುದು. 
– ಜ್ಯೋತಿ ಎಂ., ಕಾವ್ರಾಡಿ ಜಿ.ಪಂ. ಸದಸ್ಯರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next