Advertisement

ಹದಗೆಟ್ಟ ರಸ್ತೆ-ಪ್ರಯಾಣಿಕರ ಪರದಾಟ

04:11 PM Aug 18, 2021 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ, ನೆರೆಯಿಂದಾಗಿ ಪಿಡಬ್ಲ್ಯೂಡಿ ಹಾಗೂ ಗ್ರಾಮೀಣ ಇಲಾಖೆಯ 1,292ಕಿಮೀ ನಷ್ಟು ರಸ್ತೆ ಹಾಳಾಗಿ, 197 ಕೋಟಿ ರೂ. ನಷ್ಟ ಉಂಟಾಗಿದೆ. ಮಳೆಯಿಂದಾಗಿ ಹಾನಿಗೊಳಗಾದ ರಸ್ತೆಯಲ್ಲಿ ಸಂಚಾರಕ್ಕೆ ಜನರು ಹರಸಾಹಸ ಪಡುವಂತಾಗಿದೆ.

Advertisement

ಅತಿವೃಷ್ಟಿ ಹಾಗೂ ನೆರೆ ಹಾವಳಿಗೆ ಲೋಕೋಪಯೋಗಿ ಇಲಾಖೆಯ 246 ಕಿಮೀ ರಸ್ತೆ ಹಾನಿಯಾಗಿದ್ದು, ಇದರಲ್ಲಿ 63.82ಕಿಮೀ ರಾಜ್ಯ ಹೆದ್ದಾರಿ, 182.22ಕಿಮೀ ಜಿಲ್ಲಾ ಮುಖ್ಯ ರಸ್ತೆ ಹಾಳಾಗಿದೆ. ಇದರ ಹಾನಿಯ ಅಂದಾಜು ಮೌಲ್ಯ 183.55 ಕೋಟಿಯಷ್ಟಾಗಿದೆ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ 1046.8ಕಿಮೀ ಗ್ರಾಮೀಣ ರಸ್ತೆ ಹಾಳಾಗಿದ್ದು, ಹಾನಿಯ ಅಂದಾಜು ಮೌಲ್ಯ 13.84ಕೋಟಿ ರೂ. ಆಗಿದೆ.

ಕಳೆದ ತಿಂಗಳು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜನಜೀವನವೇ ತತ್ತರಗೊಂಡಿತ್ತು. ಅನೇಕ ಗ್ರಾಮಗಳಿಗೆ ನೀರು ನುಗ್ಗಿತ್ತು. ರಸ್ತೆಗಳೆಲ್ಲ ಕೊಚ್ಚಿ ಹಳ್ಳಗಳಾಗಿದ್ದವು. ನದಿ ತೀರದ ಪ್ರದೇಶಗಳಲ್ಲಂತೂ ರಸ್ತೆ ಮುಳುಗಿ ಹೋಗಿದ್ದವು. ಪ್ರವಾಹದಿಂದ ಆಗಿರುವ ರಸ್ತೆ ಹಾನಿಯಿಂದ ಗ್ರಾಮೀಣ ಭಾಗದಲ್ಲಿ ಸಂಚಾರವೇ ದುಸ್ತರವಾಗಿದೆ. ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ವಾಹನ ಓಡಿಸುವುದೆಂದರೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ:ಆರೋಗ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವರ್ಗಾವಣೆಗೆ ಕಟ್ಟುನಿಟ್ಟಿನ ಕ್ರಮ : ಸುಧಾಕರ್

ಹದಗೆಟ್ಟ ಗ್ರಾಮೀಣ ರಸ್ತೆಗಳು: ಮಳೆಯಿಂದಾಗಿ ಗ್ರಾಮೀಣ ರಸ್ತೆಗಳು ಸಾಕಷ್ಟು ಹದಗೆಟ್ಟಿದ್ದು, ಕೆಲ ರಸ್ತೆಗಳಲ್ಲಿ ಹರಸಾಹಸ ಪಟ್ಟು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾವೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ 32 ಕಿಮೀ, ರಾಣಿಬೆನ್ನೂರು ತಾಲೂಕಿನಲ್ಲಿ 162ಕಿಮೀ, ಬ್ಯಾಡಗಿಯಲ್ಲಿ 20ಕಿಮೀ, ಹಿರೇಕೆರೂರಿನಲ್ಲಿ 49ಕಿಮೀ, ರಟ್ಟಿಹಳ್ಳಿಯಲ್ಲಿ 55ಕಿಮೀ, ಸವಣೂರಿನಲ್ಲಿ 491ಕಿಮೀ, ಶಿಗ್ಗಾವಿಯಲ್ಲಿ
55ಕಿಮೀ, ಹಾನಗಲ್ಲನಲ್ಲಿ 182ಕಿಮೀ ಗ್ರಾಮೀಣ ರಸ್ತೆಗಳು ಹಾನಿಯಾಗಿದ್ದು, 13.84ಕೋಟಿ ರೂ. ನಷ್ಟವಾಗಿರುವ ಕುರಿತು ಸರ್ಕಾರಕ್ಕೆ ವರದಿ
ಸಲ್ಲಿಕೆಯಾಗಿದೆ.

Advertisement

ಪಿಡಬ್ಲ್ಯೂಡಿ ಇಲಾಖೆ ರಸ್ತೆ ಹಾನಿ: ಲೋಕೋಪಯೋಗಿ ಇಲಾಖೆಯ 47.75ಕೋಟಿ ರೂ. ಮೌಲ್ಯದ 63.82ಕಿಮೀ ರಾಜ್ಯ ಹೆದ್ದಾರಿ, 135.80 ಕೋಟಿ ರೂ. ಮೌಲ್ಯದ 182 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳಿಗೆ ಹಾನಿಯಾಗಿದೆ. ಈ ಪೈಕಿ ಹಾವೇರಿ ತಾಲೂಕಿನಲ್ಲಿ 47.72ಕಿಮೀ ರಸ್ತೆ ಹದಗೆಟ್ಟಿವೆ. ರಾಣಿಬೆನ್ನೂರು ತಾಲೂಕಿನಲ್ಲಿ 13.60ಕಿಮೀ, ಬ್ಯಾಡಗಿ ತಾಲೂಕಿನಲ್ಲಿ 29.85, ಹಿರೇಕೆರೂರು ತಾಲೂಕಿನಲ್ಲಿ 15.45ಕಿಮೀ, ರಟ್ಟಿಹಳ್ಳಿ ತಾಲೂಕಿನಲ್ಲಿ 8.70ಕಿಮೀ, ಸವಣೂರು ತಾಲೂಕಿನಲ್ಲಿ 61.74ಕಿಮೀ, ಶಿಗ್ಗಾವಿ ತಾಲೂಕಿನಲ್ಲಿ 42.78ಕಿಮೀ, ಹಾನಗಲ್ಲ ತಾಲೂಕಿನಲ್ಲಿ 26.2ಕಿಮೀ ರಸ್ತೆ ಹಾಳಾಗಿವೆ. ಜಿಲ್ಲಾದ್ಯಂತ ಪಿಡಬ್ಲೂಡಿ ಇಲಾಖೆಯ 45 ಸೇತುವೆಗಳಿಗೆ ಹಾನಿಯಾಗಿದ್ದು, ಇದರ ಅಂದಾಜು ಮೌಲ್ಯ 55.08 ಕೋಟಿ ರೂ. ಎನ್ನಲಾಗಿದೆ. ಆರ್‌ಡಿಪಿಆರ್‌ ಇಲಾಖೆಯ 84 ಮೋರಿಗಳು ಹಾಗೂ ಸೇತುವೆಗಳಿಗೆ ಹಾನಿಯಾಗಿದ್ದು, ಇದರ ಅಂದಾಜು ಮೌಲ್ಯ 11.68ಕೋಟಿ ರೂ.ಆಗಿದೆ.

ಜಿಲ್ಲೆಯ ರಾಜ್ಯ ಹೆದ್ದಾರಿ, ಜಿಲ್ಲಾ ಪ್ರಮುಖ ರಸ್ತೆ, ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದ್ದು, ಜನ ಹೈರಾಣಾಗುವಂತಾಗಿದೆ. ಕಳೆದ ಬೇಸಿಗೆ ಯಲ್ಲಷ್ಟೇ ಹೊಸದಾಗಿ ಮಾಡಿದ ರಸ್ತೆಗಳೂ ಕೇವಲ 3 ತಿಂಗಳಲ್ಲಿ ಹಾಳಾಗಿದ್ದು, ಡಾಂಬರು ಕಿತ್ತು ಹೋಗಿವೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಓಡಾಡುವವರಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಎರಡೂ ಇಲಾಖೆಯರು ತಮ್ಮ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿಪಡಿಸಿ ಜನರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕಿದೆ.

ರಸ್ತೆ, ಸೇತುವೆ ಸೇರಿದಂತೆ ಸಾರ್ವಜನಿಕ ಅವಶ್ಯಕತೆಗಳ ತಾತ್ಕಾಲಿಕ ದುರಸ್ತಿಗೆ ಕ್ರಮ ವಹಿಸಲು ಪಿಡಬ್ಲ್ಯೂಡಿ, ಆರ್‌ ಡಿಪಿಆರ್‌ ಇಲಾಖೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ತಕ್ಷಣವೇ ವಿಪತ್ತು ನಿರ್ವಹಣಾ ನಿಧಿಯಿಂದ ಅನುದಾನ ಬಿಡುಗಡೆಗೆ ಕ್ರಮ ವಹಿಸಿ ತುರ್ತು ರಿಪೇರಿ ಕಾರ್ಯಗಳನ್ನು ತಕ್ಷಣದಲ್ಲೇ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.
-ಬಿ.ಸಿ. ಪಾಟೀಲ, ಕೃಷಿ ಸಚಿವರು

ಕ‌ಳೆದ ತಿಂಗಳು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಸ್ಥಿತಿ ಉಂಟಾಗಿ ರಸ್ತೆಗಳೆಲ್ಲ ಹಾಳಾಗಿವೆ. ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳೇ ನೀರಿಗೆ ಕೊಚ್ಚಿ ಹೋಗಿದ್ದು, ವಾಹನಗಳ ಸಂಚಾರಕ್ಕೆ ಸರ್ಕಸ್‌ ಮಾಡುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹದಗೆಟ್ಟ ರಸ್ತೆಗಳ ದುರಸ್ತಿಗೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕು.
-ಸಂತೋಷ ನಾಯಕ,
ವಾಹನ ಚಾಲಕರ

Advertisement

Udayavani is now on Telegram. Click here to join our channel and stay updated with the latest news.

Next