ತಾಂಬಾ: ಶಿರಾಡೋಣದಿಂದ ಲಿಂಗಸುಗೂರು ರಾಜ್ಯ ಹೆದ್ದಾರಿ ಪ್ರಯಾಣ ಪ್ರಯಾಸವಾಗಿದೆ. ಮಳೆಯಿಂದ ತಗ್ಗು ದಿನ್ನೆಗಳು ಹೆಚ್ಚಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಇಂಡಿ, ತಾಂಬಾ, ದೇವರ ಹಿಪ್ಪರಗಿ, ತಾಳಿಕೋಟೆ ಮಾರ್ಗವಾಗಿ ಸಾಗುವ ಹೆದ್ದಾರಿ ಇದಾಗಿದೆ. ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ ಮಧ್ಯದಲ್ಲಿ ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿ ತಾಂಬಾ ಗ್ರಾಮದ ಜನರದ್ದಾಗಿದೆ. ಇನ್ನು ಹಲವು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಇಲ್ಲಿನ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ.
ಹೆದ್ದಾರಿಯಲ್ಲಿನ ತಗ್ಗುದಿನ್ನೆಗಳಲ್ಲಿ ಮಳೆ ನೀರು ನಿಂತು ಕೆಸರು ಗದ್ದೆಯಂತಾಗಿದೆ. ಹೆದ್ದಾರಿ ಹದಗೆಟ್ಟಿದ್ದರೂ ಜನಪ್ರತಿನಿಧಿಗಳು ಹಾಗೂ ಅ ಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಹಲವು ವರ್ಷದಿಂದ ಇಂಡಿ ಮುಖ್ಯ ರಸ್ತೆ ತಾಂಬಾದಿಂದ ಮಳ್ಳಿ ಹಳ್ಳಿತನಕ ಅಂದಾಜು 3-4 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಸವಾರರು ಸಂಚರಿಸಲು ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ: ಕಟೀಲ್ ವಿಶ್ವಾಸ
ಹೀಗಾಗಿ ಸಂಬಂಧಿಸಿದವರು ಕೂಡಲೇ ಈ ಸಮಸ್ಯೆಗೆ ಪರಿಹಾರ ನೀಡಬೇಕಿದೆ. ರಸ್ತೆ ಹದಗೆಟ್ಟು ಹೋಗಿದರೂ ಅ ಧಿಕಾರಿಗಳು ನೋಡಿಯೂ ನೋಡಲಾರದ ಹಾಗೆ ಹೋಗುತ್ತಾರೆ. ಮಳ್ಳಿ ಹಳ್ಳಿಯಿಂದ ತಾಂಬಾಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ ಎನ್ನುತ್ತಾರೆ ರೈತ ಮುಖಂಡ ಬೀರಪ್ಪ ವಗ್ಗಿ
ಈ ಕುರಿತು ಪ್ರಸ್ತಾವನೆ ಕಳುಹಿಸಿದ್ದೇವೆ. ಅನುದಾನ ಬಂದ ಮೇಲೆ ಕಾಮಗಾರಿ ಪ್ರಾರಂಭ ಮಾಡಲಾಗುವುದು.
-ಎಇಇ ದಯಾನಂದ ಮಠ, ಪಿಡಬ್ಲೂಡಿ ಉಪವಿಭಾಗ ಇಂಡಿ