Advertisement

ಸಂಪೂರ್ಣ ಹದಗೆಟ್ಟ ಮೂಡುಬಗೆ –ಕೆಂಜಿಮನೆ ರಸ್ತೆ

07:11 PM Apr 13, 2020 | Karthik A |

ವಿಶೇಷ ವರದಿ : ಅಂಪಾರು: ಮೂಡುಬಗೆಯಿಂದ – ಕೆಂಜಿಮನೆಗೆ ತೆರಳುವ ಸುಮಾರು 7 ಕಿ.ಮೀ. ದೂರದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟಕರವೆನಿಸಿದೆ. ಚುನಾವಣೆ ಸಮಯದಲ್ಲಿ ಎಲ್ಲರೂ ಈ ರಸ್ತೆಯ ದುರಸ್ತಿ ಮಾಡಲಾಗುವುದು ಎನ್ನುವ ಮಾತು ಕೊಟ್ಟಿದ್ದು, ಅದೀಗ ಕೇವಲ ಭರವಸೆಯಾಗಿಯೇ ಉಳಿದಿದೆ. ವಿಧಾನಸಭಾ ಚುನಾವಣೆ ಮುಗಿದು ಅರ್ಧ ವರ್ಷ ಕಳೆದರೂ ದುರಸ್ತಿಗೆ ಮುಂದಾಗುವ ಲಕ್ಷಣ ಕಾಣುತ್ತಿಲ್ಲ.

Advertisement

6 ವರ್ಷಗಳ ಹಿಂದೆ ಡಾಮರೀಕರಣ
ಮೂಡುಬಗೆಯಿಂದ ಕೊಡ್ಲಾಡಿ, ಮಾರ್ಡಿ, ಆಜ್ರಿ, ಕೂಡ್ಗಿಯಾಗಿ ಕೆಂಜಿಮನೆ ಕಡೆಗೆ ಸಂಪರ್ಕ ಕಲ್ಪಿಸುವ ಸುಮಾರು 7 ಕಿ.ಮೀ. ದೂರದ ರಸ್ತೆಗೆ 6 ವರ್ಷಗಳ‌ ಹಿಂದೆ ಡಾಮರೀಕರಣವಾಯಿತು. ಆ ಬಳಿಕ ಒಮ್ಮೆ ಅಂದರೆ 2 ವರ್ಷಗಳ ಹಿಂದೆ ಹೊಂಡ- ಗುಂಡಿ ಬಿದ್ದ ಕಡೆಗಳಲ್ಲಿ ತೇಪೆ ಹಾಕಲಾಗಿತ್ತು. ಆ ಬಳಿಕ ಇತ್ತ ಯಾರೂ ಸುಳಿಯಲೂ ಇಲ್ಲ. ಈಗ ಸಂಪೂರ್ಣ ಹದಗೆಟ್ಟು ಹೋಗಿದೆ.

ಬಸ್‌ ಸಂಚಾರಕ್ಕೆ ಸಂಚಕಾರ
ಈ ಮಾರ್ಗವಾಗಿ 1 ಸರಕಾರಿ ಬಸ್‌ ದಿನ 4 ಟ್ರಿಪ್‌ ಸಂಚರಿಸುತ್ತಿದ್ದರೆ, 2 ಖಾಸಗಿ ಬಸ್‌ಗಳು ದಿನಕ್ಕೆ 3 ಟ್ರಿಪ್‌ ಸಂಚರಿಸುತ್ತವೆ. ಈಗ ಹದಗೆಟ್ಟ ರಸ್ತೆಯಿಂದಾಗಿ ಈ ಮಾರ್ಗವಾಗಿ ಬಸ್‌ಗಳು ಸಂಚರಿಸಲು ಹಿಂದೇಟು ಹಾಕುತ್ತಿವೆ. ಇನ್ನಾದರೂ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ, ಈ ಮಾರ್ಗವಾಗಿ ಬಸ್‌ ಸಂಚಾರಕ್ಕೆ ಸಂಚಕಾರ ಉಂಟಾಗುವ ಸಂಭವವೂ ಇದೆ. ಅನೇಕ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಇದೇ ಬಸ್‌ಗಳನ್ನು ಅವಲಂಬಿಸಿರುವುದರಿಂದ ಅವರಿಗೆ ತೊಂದರೆಯಾಗಲಿದೆ.

ಮನವಿ ಮಾಡಿದರೂ ಪ್ರಯೋಜನವಿಲ್ಲ
ನಾವು ನಿತ್ಯ ಇದೇ ಮಾರ್ಗವಾಗಿ ಸಂಚರಿಸಬೇಕು. ಅನೇಕ ಬಾರಿ ರಸ್ತೆ ಮಾಡಿ ಎಂದು ಈ ಭಾಗದ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನ ಆಗಿಲ್ಲ. ಓಟು ಬಂದಾಗೊಮ್ಮೆ ರಸ್ತೆ ರಿಪೇರಿ ಮಾಡಿಕೊಡುತ್ತೇವೆ ಅಂತಾ ಹೇಳುತ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆ ಮರೆತು ಬಿಡುತ್ತಾರೆ. ಈ ಸಲವಾದರೂ ದುರಸ್ತಿ ಮಾಡಲಿ.
– ನೊಂದ ಗ್ರಾಮಸ್ಥರು

ಪ್ರಸ್ತಾವನೆ ಕಳುಹಿಸಲಾಗಿದೆ
ಮೂಡುಬಗೆ – ಕೆಂಜಿಮನೆ ರಸ್ತೆಯ ಮರು ಡಾಮರೀಕರಣ ಸಂಬಂಧ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸ್ಥಳೀಯ ಶಾಸಕರಿಗೂ ಈ ಬಗ್ಗೆ ಮನವಿ ಮಾಡಿದ್ದೇವೆ. ಈಗ ಸದ್ಯಕ್ಕೆ ತೇಪೆ ಕಾರ್ಯಕ್ಕಾಗಿ 2.5 ಲಕ್ಷ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಈ ಕಾರ್ಯ ಶೀಘ್ರ ಆರಂಭವಾಗಲಿದೆ.
– ಜ್ಯೋತಿ ನಾಯಕ್‌, ಸ್ಥಳೀಯ ಜಿ.ಪಂ. ಸದಸ್ಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next