ಬೆಳ್ತಂಗಡಿ- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ; 3 ದಶಕಗಳಿಂದಲೂ ನಿರ್ಲಕ್ಷ್ಯ
ವಿಶೇಷ ವರದಿ
ಬೆಳ್ತಂಗಡಿ: ಕುವೆಟ್ಟು ಜಿಲ್ಲಾ ಪಂಚಾಯತ್ ಹಾಗೂ ಮಾಲಾಡಿ ತಾ.ಪಂ. ಕ್ಷೇತ್ರದ ಮಾಲಾಡಿ – ಸೋಣಂದೂರು – ಗರ್ಡಾಡಿ ಸಂಪರ್ಕ ರಸ್ತೆಯ ಅಳಿದುಳಿದ ಪಳೆಯುಳಿಕೆ ವಿಕಾರವಾಗಿ ಎದ್ದು ಕಾಣುತ್ತದೆ. ಬೆಳ್ತಂಗಡಿ – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮಾಲಾಡಿ – ಸೋಣಂದೂರು – ಗರ್ಡಾಡಿ ಜಿಲ್ಲಾ ಪಂಚಾಯತ್ ರಸ್ತೆಯು ತೀವ್ರ ಹದಗೆಟ್ಟಿದ್ದು ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದು ಸ್ಥಳೀಯ ನಾಗರಿಕರ ಅಳಲು.
ರಾಷ್ಟ್ರೀಯ ಹೆದ್ದಾರಿಯ ಮಡಂತ್ಯಾರು ಸನಿಹದ ಕೊಲ್ಪೆದಬೈಲು ಎಂಬಲ್ಲಿಂದ ಸೋಣಂದೂರು ಗ್ರಾಮದ ಮೂಲಕ ಸುಮಾರು 4 ಕಿ.ಮೀ. ರಸ್ತೆಯು ಕೊನೆಯಲ್ಲಿ ಗುರುವಾಯನಕೆರೆ- ವೇಣೂರು ರಸ್ತೆಗೆ ಗರ್ಡಾಡಿಯಲ್ಲಿ ಸೇರಿಕೊಳ್ಳುತ್ತದೆ. ಈ ರಸ್ತೆಯಲ್ಲಿ ಖಾಸಗಿ ಬಸ್ಸು, ಆಟೋರಿಕ್ಷಾ ಸಹಿತ ನೂರಾರು ವಾಹನಗಳು ಸಂಚರಿಸುತ್ತಿದ್ದು ಶಾಲಾ ಮಕ್ಕಳು, ನಾಗರಿಕರು ಮಾನಸಿಕ ಹಿಂಸೆಯಲ್ಲೇ ಪ್ರಯಾಣಿಸಬೇಕಾಗಿದೆ.
ಮಾಲಾಡಿಯ ಕೊಲ್ಪೆದಬೈಲಿನಿಂದ ಪ್ರಾರಂಭಗೊಳ್ಳುವ ಈ ರಸ್ತೆಯು ಪಡಂಗಡಿ ಪಂಚಾಯತ್ ವ್ಯಾಪ್ತಿಯ ಗರ್ಡಾಡಿವರೆಗೂ ಬಹುತೇಕ ಕಡೆಗಳಲ್ಲಿ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು ಪೂರ್ಣ ಪ್ರಮಾಣದ ಅಭಿವೃದ್ಧಿಗೆ 10ರಿಂದ 15 ಲಕ್ಷ ರೂ. ಅನುದಾನದ ಅಗತ್ಯವಿದೆ ಎಂಬುದು ಕೆಲವು ಜನಪ್ರತಿನಿಧಿಗಳ ಅಭಿಪ್ರಾಯ. ಗ್ರಾ.ಪಂ. ಆಡಳಿತ ವ್ಯಾಪ್ತಿಗೊಳಪಡುವ ಈ ರಸ್ತೆಯನ್ನು ಕನಿಷ್ಠ ಮಳೆಗಾಲದಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಕೈಗೊಂಡರೆ ನಾಗರಿಕರು ನಿಟ್ಟುಸಿರು ಬಿಡುವಂತಾಗಬಹುದು. ವಾಹನ ಸಂಚಾರಕ್ಕೆ ತಕ್ಕ ಮಟ್ಟಿಗಾದರೂ ಅನುಕೂಲವಾಗಬಹುದೆಂಬುದು ಸ್ಥಳೀಯರ ಅಭಿಪ್ರಾಯ. ಕೊಲ್ಪೆದಬೈಲು – ಮಾಲಾಡಿಯಲ್ಲಿ ಕೆಲವು ವರ್ಷಗಳ ಹಿಂದೆ ಪ್ರಾರಂಭಗೊಂಡ ಮಾಲಾಡಿ ಸರಕಾರಿ ಐಟಿಐಯ ಸ್ವಂತ ನೂತನ ಕಟ್ಟಡವು ಇತ್ತೀಚೆಗಷ್ಟೆ ಉದ್ಘಾಟನೆಗೊಂಡಿದ್ದು ವಿದ್ಯಾರ್ಥಿಗಳೂ ಇದೇ ದುರವಸ್ಥೆಯ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.
ಮೋರಿ ಕುಸಿದು ರಸ್ತೆ ಬದಿ ಬಾಯ್ದೆರೆದಿರುವುದು.
ಮಾಲಾಡಿ-ಗರ್ಡಾಡಿ ರಸ್ತೆಗೆ ಮಾಜಿ ಸಚಿವ ಕೆ. ಗಂಗಾಧರ ಗೌಡ ಶಾಸಕರಾಗಿದ್ದ ಅವಧಿ ಅಂದರೆ 1990ರಲ್ಲಿ ಡಾಮರು ಕಾಮಗಾರಿ ನಡೆದಿತ್ತು. ಬಳಿಕ ಸಂಪೂರ್ಣ ದುರಸ್ತಿಗೊಳ್ಳದೆ ಮೂರು ದಶಕಗಳೇ ಕಳೆದು ಹೋಗಿದ್ದು ಜನಪ್ರತಿನಿಧಿಗಳಿಂದಲೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದಲೂ ನಿರ್ಲಕ್ಷ್ಯಕ್ಕೊಳಗಾಗಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ. ಕೆಲವು ಸಲ ತೇಪೆ ಕಾರ್ಯ ಹೊರತುಪಡಿಸಿದರೆ ಈ ರಸ್ತೆಯ ದುಃಸ್ಥಿತಿಯ ಬಗ್ಗೆ ಸಂಬಂಧಪಟ್ಟವರು ತಲೆಕೆಡಿಸಿಕೊಂಡಂತಿಲ್ಲ ಎಂಬ ಆರೋಪ ಈ ಭಾಗದ ನೊಂದ ಪ್ರಯಾಣಿಕರಿಂದ ಕೇಳಿ ಬಂದಿದೆ.
ಅಭಿವೃದ್ಧಿಗೆ ಅನುದಾನದ ಕೊರತೆ
ರಸ್ತೆಯ ದುಃಸ್ಥಿತಿಯನ್ನು ಗಮನಿಸಿದ್ದೇನೆ. ಅಭಿವೃದ್ಧಿ ಬೇಡಿಕೆಯೂ ಗಮನದಲ್ಲಿದೆ. ಆದರೆ 13ನೇ ಹಣಕಾಸು ನಮ್ಮ ವ್ಯಾಪ್ತಿಯಲ್ಲಿರದ ಕಾರಣ ಅಭಿವೃದ್ಧಿ ಅನುದಾನದ ಕೊರತೆಯಿಂದಾಗಿ ರಸ್ತೆಯ ಅಭಿವೃದ್ಧಿ ವಿಳಂಬವಾಗಿದೆ. ರಸ್ತೆಯನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಿ ವಿಶೇಷ ಅನುದಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.
– ಮಮತಾ ಎಂ. ಶೆಟ್ಟಿ, ಜಿ.ಪಂ. ಸದಸ್ಯೆ ಕುವೆಟ್ಟು ಕ್ಷೇತ್ರ.