Advertisement

ಸಸಿಹಿತ್ಲು: ಹೂಳು ಸಾಗಣೆಯಿಂದ ರಸ್ತೆಗೆ ಕುತ್ತು

12:00 AM Jul 30, 2017 | Team Udayavani |

ಹಳೆಯಂಗಡಿ: ಇಲ್ಲಿನ ಸಸಿಹಿತ್ಲುವಿನ ಮೀನುಗಾರಿಕಾ ಜಟ್ಟಿ ನಿರ್ಮಾಣದ ಪ್ರದೇಶದಿಂದ ಹೂಳೆತ್ತಿದ್ದ ಮರಳು ಮಿಶ್ರಿತ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಟಿಪ್ಪರ್‌ ಲಾರಿಗಳ ಸಂಚಾರದಿಂದ ರಸ್ತೆಗೆ ಹಾನಿಯಾಗತೊಡಗಿದೆ. ಕಾರ್ಯಾಚರಣೆ ಮುಗಿಸುವಷ್ಟರಲ್ಲಿ ರಸ್ತೆ ಸಂಪೂರ್ಣ ಹಾಳಾಗಿ ಸಂಚಾರಕ್ಕೆ ಅಯೋಗ್ಯವಾಗಲಿದೆ ಎಂಬುದು ಜನರ ಆತಂಕ. ಹಳೆಯಂಗಡಿ ಗ್ರಾ.ಪಂ.ಗೆ ಸೇರಿದ ಸಸಿಹಿತ್ಲುವಿನಲ್ಲಿ ನಿರ್ಮಾಣದ ಹಂತದಲ್ಲಿರುವ ಮೀನುಗಾರಿಕಾ ಜೆಟ್ಟಿ ಪ್ರದೇಶದ ನಂದಿನಿ ನದಿಯಲ್ಲಿರುವ ಸುಮಾರು 5,863ಕ್ಯು.ಮೀ. ನಷ್ಟು ಸಾಮಾನ್ಯ ಮರಳನ್ನು ತೆಗೆಯಲು ಮೀನುಗಾರಿಕಾ ಇಲಾಖೆಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕ ಉಳ್ಳಾಲದ ಗುತ್ತಿಗೆದಾರರೊಬ್ಬರಿಗೆ 37.92 ಲಕ್ಷ ರೂ.ಗೆ ಗುತ್ತಿಗೆ ವಹಿಸಲಾಗಿದೆ. ಅದರಂತೆ 15 ದಿನದೊಳಗೆ ಹೂಳನ್ನು ತೆಗೆದು ಅಲ್ಲಿಂದ ತೆರವು ಮಾಡಬೇಕು ಎಂದು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ.

Advertisement

ಪಂಚಾಯತ್‌ ಕೇಳಿತ್ತು
ಗ್ರಾ.ಪಂ. ತನ್ನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಹೆದ್ದಾರಿಯ ಅಕ್ರಮ ತ್ಯಾಜ್ಯ ಪ್ರದೇಶ ಮತ್ತು ಕೊಪ್ಪಳದಲ್ಲಿನ ಗುಂಡಿ ಪ್ರದೇಶವನ್ನು ಸಮತಟ್ಟು ಮಾಡಲು ಸುಮಾರು 50 ಲೋಡ್‌ಗಳ ಮಣ್ಣನ್ನು ಕೇಳಿಕೊಂಡಿತ್ತು. ಅದರಂತೆ ಮೇ.16ರಂದು ಮಣ್ಣನ್ನು ಸಾಗಿಸಲು ಅನುಮತಿ ಪತ್ರ ನೀಡಿತ್ತು. ಆದರೆ ಪತ್ರವನ್ನು ದುರುಪಯೋಗಪಡಿಸಿಕೊಂಡು ಮರಳು ಮಿಶ್ರಿತ ಮಣ್ಣನ್ನು ಬೇರೆಡೆ ಸಾಗಿಸುತ್ತಿದ್ದಾರೆ ಎಂಬ ಗ್ರಾಮಸ್ಥರ ದೂರಿನಂತೆ ಮೇ.29ರಂದೇ ರದ್ದುಪಡಿಸಿತ್ತು.

ಗಣಿ ಇಲಾಖೆ ಮಧ್ಯ ಪ್ರವೇಶ…
ಜೆಟ್ಟಿ ಯೋಜನೆ ಮೀನುಗಾರಿಕಾ ಬಂದರು ಇಲಾಖೆಗೆ ಸೇರಿದ್ದರಿಂದ ಇಲಾಖೆಯು ನೇರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಜಿಲ್ಲಾಧಿಕಾರಿಯರ ಕಚೇರಿಯಲ್ಲಿ ಪ್ರತ್ಯೇಕ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಹಂಚಿಕೆ ಮಾಡಲಾಗಿದೆ. ಇದರ ಹಿನ್ನೆಲೆಯಲ್ಲಿ ನಂದಿನಿ ನದಿಗೆ ಡ್ರೆಜಿಂಗ್‌ ನಡೆಸಿ ಸಾಮಾನ್ಯ ಮರಳನ್ನು ತೆಗೆದು ಟಿಪ್ಪರ್‌ ಮೂಲಕ ಸಾಗಿಸುತ್ತಿದೆ. ಈ ಸಂದರ್ಭದಲ್ಲಿ ನಡೆದ ಯಾವುದೇ ಘಟನೆಯನ್ನು ನಮಗೆ ತಿಳಿಸದೆ ಕತ್ತಲಲ್ಲಿಟ್ಟಿದ್ದಾರೆ ಎಂದು ಪಂಚಾಯತ್‌ ಆರೋಪಿಸಿದೆ.

ದಿನಕ್ಕೇ 150 ಟಿಪ್ಪರ್‌…


ಪ್ರತಿದಿನ ಜೆಟ್ಟಿ ಪ್ರದೇಶದಿಂದ ಮರಳು ತುಂಬಿದ 150 ಟಿಪ್ಪರ್‌ ಲಾರಿಗಳು ಸಂಚರಿಸುತ್ತಿವೆ. ಒಂದು ಲಾರಿಯಲ್ಲಿ 300 ಸಿಎಫ್‌ಟಿ (6.5ಟನ್‌) ಮರಳನ್ನು 6 ಚಕ್ರದ ಟಿಪ್ಪರ್‌ ಲಾರಿಯಲ್ಲಿ ಸಾಗಿಸಲಾಗುತ್ತಿದೆ. ಸಸಿಹಿತ್ಲುವಿನಿಂದ ಮೈಸೂರು ಭಾಗಕ್ಕೆ ಕಟ್ಟಡ ಕಟ್ಟಲು ಹೆಚ್ಚಾಗಿ ಸಾಗಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಚಾಲಕರೊಬ್ಬರು ಹೇಳುತ್ತಾರೆ.

ಗ್ರಾಮಸ್ಥರ ಅನುಮಾನ…
– ಹೂಳೆತ್ತಿರುವುದು ತ್ಯಾಜ್ಯ ಎಂದು ಅಕ್ರಮ ಮರಳು ಸಾಗಿಸಲಾಗುತ್ತಿದೆ.

Advertisement

– ನಿರಂತರ ಮರಳು ಸಾಗಾಟ ದಿಂದ ರಸ್ತೆಯು ಕೆಡುವ ಆತಂಕ.

– ಸುಮ್ಮನಿರುವ ಗ್ರಾ. ಪಂ., ಬೀಚ್‌ ಅಭಿವೃದ್ಧಿ ಸಮಿತಿಗೆ ಗೊತ್ತಿಲ್ಲವೇ.

– ಸಾಕಷ್ಟು ಹಣದ ಅವ್ಯವಹಾರ ಶಂಕೆ? ನಡೆಯುತ್ತಿದೆ.

ಪಂಚಾಯತ್‌ನ್ನು ವಿಶ್ವಾಸಕ್ಕೆ ಪಡೆದಿಲ್ಲ
ಮರಳು ಸಾಗಣೆ ಟೆಂಡರ್‌ ಹಾಗೂ ಇನ್ನಿತರ ಪ್ರಕ್ರಿಯೆಯ ಬಗ್ಗೆ ಗ್ರಾ.ಪಂ. ಹಾಗೂ ಬೀಚ್‌ ಅಭಿವೃದ್ಧಿ ಸಮಿತಿಗೆ ಮಾಹಿತಿಯೇ ನೀಡಿಲ್ಲ. ವಿಶ್ವಾಸಕ್ಕೆ ಪಡೆಯದೇ ಎಲ್ಲವೂ ಜಿಲ್ಲಾಡಳಿತದಲ್ಲಿಯೇ ಆಗಿದೆ. ಕಂದಾಯ ಇಲಾಖೆಗೆ ಸೇರಿದ 60 ಎಕ್ರೆ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಯು ಟಿಪ್ಪರ್‌ ಸಂಚಾರದಿಂದ ಕೆಡುವ ಆತಂಕವನ್ನು ಇಲಾಖೆಯ ಗಮನಕ್ಕೆ ತಂದಿದ್ದೇವೆ. ರಸ್ತೆಗೆ ಸಮಸ್ಯೆಯಾದರೆ ಇಲಾಖೆಯೇ ಹೊಣೆ.
– ಎಚ್‌.ವಸಂತ ಬೆರ್ನಾಡ್‌ ಅಧ್ಯಕ್ಷರು. ಬೀಚ್‌ ಅಭಿವೃದ್ಧಿ ಸಮಿತಿ, ಸಸಿಹಿತ್ಲು (ಹಳೆಯಂಗಡಿ ಗ್ರಾ.ಪಂ.)

ನದಿಯ ಆಳಕ್ಕೆ ಇಳಿಯುವಂತಿಲ್ಲ
ಗುತ್ತಿಗೆದಾರರಿಗೆ ನಿಯಮಾನುಸಾರ ನದಿಯ ಮೇಲ್ಮಟ್ಟದಲ್ಲಿದ್ದ ಸಾಮಾನ್ಯ ಮರಳನ್ನು ತೆಗೆಯಲು ಮಾತ್ರ ಅವಕಾಶ ಇದೆ. ಆದರೆ ನದಿಯ ಆಳಕ್ಕೆ ಇಳಿದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ. 15 ದಿನದಲ್ಲಿ ಎಲ್ಲ ಕಾರ್ಯಾಚರಣೆ ಮುಗಿಸುವಂತೆ ಸೂಚಿಸಲಾಗಿದೆ.
– ಕಿಶೋರ್‌ ಕುಮಾರ್‌, ವಿಶೇಷ ತಹಶೀಲ್ದಾರ್‌, ಮೂಲ್ಕಿ.

Advertisement

Udayavani is now on Telegram. Click here to join our channel and stay updated with the latest news.

Next