Advertisement

Reality Check: ಮೊದಲ ಮಳೆೆಗೆ ಗುಂಡಿ ಬಿದ್ದ ಮಂಗಳೂರು ರಸ್ತೆಗಳು!

03:00 AM Jun 12, 2018 | Karthik A |

ಮಹಾನಗರ: ನಗರದ ಥಳಕು- ಬಳಕಿನ ಕಾಂಕ್ರೀಟ್‌ ರಸ್ತೆ ದಾಟಿ ಡಾಮರು ರಸ್ತೆಯ ಕೆಲವು ಕಡೆಗಳಲ್ಲಿ ಮೊದಲ ಮಳೆಗೆ ಹೊಂಡಗುಂಡಿಗಳ ದರ್ಶನವಾಗಿದೆ. ಒಂದೆರಡು ವಾರದಲ್ಲಿ ಸುರಿದ ಮಳೆಗೇ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾದ್ದನ್ನು ಗಮನಿಸಿದರೆ, ಮುಂದಿನ ಪಾಡು ಯಾವ ರೀತಿ ಆಗಬಹುದು ಎಂಬ ಆತಂಕ ಈಗ ನಗರವಾಸಿಗಳಲ್ಲಿ ಮನೆ ಮಾಡಿದೆ. ನಗರದ ಜನನಿಬಿಡ ಹಾಗೂ ವಾಹನ ನಿಬಿಡ ಪ್ರದೇಶವಾದ ಬಂದರು ವ್ಯಾಪ್ತಿಯ ರಸ್ತೆಯ ಪೈಕಿ ಅಲ್ಲಲ್ಲಿ ಹೊಂಡಗಳು ಕಾಣಿಸಿಕೊಂಡಿವೆ. ಇದರಿಂದ ವಾಹನ ಸವಾರರು ಹೊಂಡಗುಂಡಿಗಳ ಮೂಲಕವೇ ಸಂಚರಿಸಬೇಕಾದ ಅನಿವಾರ್ಯವಾಗಿದೆ. ಚರಂಡಿ- ತೋಡುಗಳು ಈ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿದು ಡಾಮರು ರಸ್ತೆ ಹೊಂಡ ಗುಂಡಿಯಾಗುತ್ತಿದೆ. ಇಲ್ಲಿನ ನೆಲ್ಲಿಕಾಯಿ ರಸ್ತೆ, ಬೇಬಿ ಅಲಾಬಿ ರಸ್ತೆ ಸೇರಿದಂತೆ ಸುತ್ತಮುತ್ತಲಿನ ವ್ಯಾಪ್ತಿಯ ರಸ್ತೆಗಳು ಹೊಂಡಮಯವಾಗಿದೆ.

Advertisement


ಮರಳು, ಮಣ್ಣು ಎಲ್ಲ ರಸ್ತೆಗೆ

ನಂತೂರು ವೃತ್ತದಲ್ಲೂ ಹೊಂಡಗಳ ದರ್ಶನವಾಗಿದೆ. ಮಳೆ ನೀರು ರಸ್ತೆಯಲ್ಲಿ ನಿಂತು ಕುಲಶೇಖರ ಹೋಗುವ ರಸ್ತೆಯ ಪ್ರವೇಶದಲ್ಲಿಯೇ ಗುಂಡಿ ಕಾಣಿಸಿದೆ. ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ಮರಳು, ಮಣ್ಣು ಸಹಿತ ಎಲ್ಲ ರಸ್ತೆಗೆ ಬಂದು ಸಮಸ್ಯೆ ಆಗುತ್ತಿದೆ. ಇದು ಹೀಗೆ ಮುಂದುವರಿದರೆ, ಇನ್ನಷ್ಟು ಹೊಂಡ ಗುಂಡಿಗಳು ಇಲ್ಲಿ ಸೃಷ್ಟಿಯಾಗಬಹುದು. ಉಳಿದಂತೆ ನಗರದ ಕೆಲವು ಭಾಗದಲ್ಲಿ ಕೂಡ ಇದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ, ನಗರ ಕೇಂದ್ರದಲ್ಲಿ ಕಾಂಕ್ರೀಟ್‌ ರಸ್ತೆ ಇರುವಲ್ಲೆಲ್ಲ ಹೊಂಡ-ಗುಂಡಿಗಳು ಕಾಣಿಸುತ್ತಿಲ್ಲ. ಆದರೆ, ಕಾಂಕ್ರೀಟ್‌ ನ ಎಡ್ಜ್ ನಲ್ಲಿರುವಮಣ್ಣು ಮಳೆ ನೀರಿನಿಂದ ಕೊಚ್ಚಿ ಹೋಗಿ ಅಲ್ಲಿ ಹೊಂಡಗಳಾಗಿವೆ. ಹೀಗಾಗಿ ವಾಹನ ಸವಾರರು ಇದರಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ.


ಹೆದ್ದಾರಿಯಲ್ಲಿ ಹೊಂಡ ಗುಂಡಿಗಳದ್ದೇ ಸಾಮ್ರಾಜ್ಯ!

ಕಳೆದೊಂದು ವರ್ಷದಿಂದ ಅತ್ಯಂತ ಕೆಟ್ಟುಹೋಗಿದ್ದ ಬಿ.ಸಿ.ರೋಡು – ಸುರತ್ಕಲ್‌ ಹೆದ್ದಾರಿಯ ಕೊಟ್ಟಾರ, ಪಣಂಬೂರು, ಕೂಳೂರು, ಕುಂಟಿಕಾನ, ಪಡೀಲು ಸಹಿತ  ಹಲವು ಭಾಗದಲ್ಲಿ ಈ ಬಾರಿಯ ಮೊದಲ ಮಳೆಗೆ ಹೊಂಡ ಗುಂಡಿಗಳ ದರ್ಶನವಾಗಿದೆ. ಮುಂದಿನ ದಿನಗಳಲ್ಲಿ ಈ ಹೆದ್ದಾರಿಯ ಪರಿಸ್ಥಿತಿ ಹೇಗಾಗಬಹುದು ಎಂಬ ಆತಂಕ ಶುರುವಾಗಿದೆ. ಬೈಕಂಪಾಡಿ, ಪಣಂಬೂರು, ಎಂ.ಸಿ.ಎಫ್. ಮುಂಭಾಗ, ಕುಳಾಯಿ ಹೀಗೆ ಹಲವೆಡೆಗಳಲ್ಲಿ ಹಾಕಿರುವ ಡಾಮರು ಕಿತ್ತು ಹೋಗಿದೆ.

ನಗರದ ಸುತ್ತಮುತ್ತ ಹೆದ್ದಾರಿ ಹೊಂಡ ಮುಚ್ಚುವ ಕಾರಣಕ್ಕಾಗಿ ಹಾಗೂ ಇತರ ನಿರ್ವಹಣೆಗಾಗಿ ಸುಮಾರು 8 ಕೋ.ರೂ. ಗಳ ಗುತ್ತಿಗೆಯನ್ನು ಖಾಸಗಿ ಗುತ್ತಿಗೆದಾರರಿಗೆ ಹೆದ್ದಾರಿ ಇಲಾಖೆ ಈ ಹಿಂದೆ ನೀಡಿತ್ತು. ಹೀಗಾಗಿ ಕಳೆದ ಮಾರ್ಚ್‌ನಲ್ಲಿ ತೇಪೆ ಕಾರ್ಯ ನಡೆದಿತ್ತು. ಆದರೆ, ಮೊನ್ನೆ ಬಂದ ಭಾರೀ ಮಳೆಗೆ ರಸ್ತೆಯಲ್ಲಿ ಮತ್ತೆ ಹೊಂಡ ಗುಂಡಿಯೇ ಕಾಣಿಸುವಂತಾಗಿದೆ. ಕಳೆದ ಕೆಲವು ದಿನದ ಮಳೆಗೆ ಹೆದ್ದಾರಿಯ ರೂಪವೇ ಬದಲಾದಂತಾಗಿದೆ.

ಹೆದ್ದಾರಿಯಲ್ಲಿಯೇ ಮಳೆ ನೀರು!
ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ನೀರು ನಿಲ್ಲುವಂತಹ ಜಾಗಗಳಿವೆ. ಹೆದ್ದಾರಿಯ ಮೀಡಿಯನ್‌ ಕಡೆಗೇ ನೀರು ಬಂದು ನಿಲ್ಲುತ್ತದೆ. ಪಣಂಬೂರು ಬೀಚ್‌ ರಸ್ತೆಗೆ ತಿರುಗುವಲ್ಲಿ ಕಳೆದ ವರ್ಷ ದೊಡ್ಡ ಗಾತ್ರದ ಹೊಂಡವುಂಟಾಗಿ ಹಲವು ತಿಂಗಳು ವಾಹನ ಓಡಾಟಕ್ಕೆ ಅಡ್ಡಿಯುಂಟಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದ್ದರೂ, ಇಲ್ಲಿನ ನೀರು ನಿಲ್ಲುವ ಸಮಸ್ಯೆಗೆ ಪರಿಹಾರ ದೊರೆತಿಲ್ಲ.

Advertisement

ಮುಂಗಾರು ಆರಂಭವಾಗಿ ವಾರ ಕಳೆದಿಲ್ಲ; ಆಗಲೇ ನಗರದ ಕೆಲವು ರಸ್ತೆಗಳಲ್ಲಿ ಹೊಂಡಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ಮಳೆಗಾಲ ಮುಗಿಯುವ ವೇಳೆಗೆ ನಗರದ ಬಹುತೇಕ ಡಾಮರು ರಸ್ತೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರು ನಿತ್ಯ ಪರದಾಡುವಂತಾಗಿತ್ತು. ಹೀಗಿರುವಾಗ, ಮಹಾನಗರ ಪಾಲಿಕೆಯು ಈಗಲೇ ಎಚ್ಚೆತ್ತುಕೊಂಡು ಈ ರಸ್ತೆಗಳ ದುರಸ್ತಿಗೆ ಗಮನಹರಿಸಿದರೆ ಉತ್ತಮ ಎನ್ನುವುದು ನಗರವಾಸಿಗಳ ಅಭಿಪ್ರಾಯ. ಈ ಬಗ್ಗೆ  ಸುದಿನ ರಿಯಾಲಿಟಿ ಚೆಕ್‌ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದೆ. ಇದೇ ರೀತಿಯ ರಸ್ತೆಗಳಿರುವುದು ಗಮನಕ್ಕೆ ಬಂದರೆ ಓದುಗರು ಕೂಡ ಫೋಟೋ ಸಹಿತ ವಿವರಣೆಯನ್ನು ನಮ್ಮ ವಾಟ್ಸಪ್‌ ಸಂಖ್ಯೆ 990056700ಗೆ ಕಳುಹಿಸಬಹುದು.

–ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next