Advertisement

ಪಿಂಡಿಮನೆ –ಮಿತ್ತಡ್ಕ ರಸ್ತೆ ಕೆಸರುಮಯ

02:15 AM Jun 13, 2018 | Team Udayavani |

ಅರಂತೋಡು: ಪಿಂಡಿಮನೆ – ಅರಮನೆಗಯ ಮಿತ್ತಡ್ಕ ರಸ್ತೆಗೆ ಕಾಂಕ್ರೀಟ್‌ ಹಾಕಲು ಗುತ್ತಿಗೆದಾರರು ರಸ್ತೆ ಅಗೆದು ಹಾಕಿದ ಪರಿಣಾಮ ಇಡೀ ರಸ್ತೆ ಕೆಸರುಮಯವಾಗಿದ್ದು, ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ. ಅರಂತೋಡು ಗ್ರಾಮದ ಪಿಂಡಿಮನೆಯಿಂದ ಅರಮನೆಗಯ ಪರಿಶಿಷ್ಟ ಪಂಗಡದ ಕಾಲನಿಯ ಮೂಲಕ ಮರ್ಕಂಜ ಗ್ರಾಮದ ಮಿತ್ತಡ್ಕಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ರಸ್ತೆ ಇದು. ಪಿಂಡಿ ಮನೆ ಎಂಬಲ್ಲಿ ಸುಮಾರು 250 ಮೀಟರ್‌ ನಷ್ಟು ಕಡಿದಾದ ಏರು ರಸ್ತೆ ಇದೆ. ಇದನ್ನು ಅಭಿವೃದ್ಧಿಪಡಿಸಲು ಗ್ರಾಮ ಪಂಚಾಯತ್‌ ಸದಸ್ಯ ಕೇಶವ ಅಡ್ತಲೆ ಸಹಿತ ಊರವರು ಶಾಸಕ ಅಂಗಾರ ಅವರಿಗೆ ಮನವಿ ಮಾಡಿಕೊಂಡಿದ್ದರು. ಶಾಸಕರ ಶಿಫಾರಸಿನಂತೆ ಸಮಾಜ ಕಲ್ಯಾಣ ಇಲಾಖೆಯಿಂದ 10 ಲಕ್ಷ ರೂ. ಮಂಜೂರು ಗೊಂಡಿತು.

Advertisement

ಕಾಮಗಾರಿ ಟೆಂಡರ್‌ ವಹಿಸಿಕೊಂಡ ವಿಜಯ ಎಂಬ ವ್ಯಕ್ತಿ ಮಾರ್ಚ್‌ ತಿಂಗಳಿನಲ್ಲಿ ಜೆಸಿಬಿ ಮೂಲಕ 240 ಮೀಟರ್‌ ಉದ್ದಕ್ಕೆ ರಸ್ತೆಯನ್ನು ಅಗೆದು, ಚರಂಡಿ ಬ್ಲಾಕ್‌ ಮಾಡಿ ಮೂರು ಲೋಡ್‌ ಜಲ್ಲಿ ತಂದು ರಸ್ತೆ ಮಧ್ಯೆ ಹಾಕಿ, ರಸ್ತೆ ಬಂದ್‌ ಮಾಡಿ ತೆರಳಿದ್ದರು. ಅರಮನೆಗಯಕ್ಕೆ ಸಂಪರ್ಕ ಕಲ್ಪಿಸುವ ಏಕಮಾತ್ರ ರಸ್ತೆ ಬಂದ್‌ ಆದ ಪರಿಣಾಮ ಸ್ಥಳೀಯರು ಆಕ್ರೋಶಗೊಂಡು ಜಲ್ಲಿಯನ್ನು ರಸ್ತೆಗೆ ಹರಡಿದರು. ಆಮೇಲೆ ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗಿ ನಡೆದು ಹೋಗಲು ಹಾಗೂ ವಾಹನ ಸಂಚಾರಕ್ಕೂ ದುಸ್ತರವಾಗಿದೆ. ಮಳೆ ನೀರು ರಸ್ತೆ ಮಧ್ಯದಲ್ಲಿ ಹರಿದು ಹೋಗುತ್ತಿದ್ದು, ಕೃತಕ ತೋಡು ನಿರ್ಮಾಣವಾಗಿದೆ.


ಟೆಂಡರ್‌ ರದ್ದು?

ಅರೆಬರೆ ಕಾಮಗಾರಿ ಪೂರೈಸಿ ನಾಪತ್ತೆಯಾಗಿರುವ ಗುತ್ತಿಗೆದಾರನ ಟೆಂಡರ್‌ ರದ್ದುಪಡಿಸಿ, ಬೇರೆಯವರಿಗೆ ಗುತ್ತಿಗೆ ವಹಿಸಲಾಗುವುದು ಎಂಬ ಮಾಹಿತಿ ಇದೆ. ಮಳೆ ಕೊಂಚ ಕಡಿಮೆಯಾದ ಬಳಿಕ ರಸ್ತೆ ಕಾಮಗಾರಿ ಮುಂದುವರಿಯಬಹುದು ಎಂದು ಸ್ಥಳೀಯ ವಾರ್ಡ್‌ನ ಗ್ರಾ.ಪಂ. ಸದಸ್ಯ ಕೇಶವ ಅಡ್ತಲೆ ಹೇಳಿದ್ದಾರೆ. ಸಮರ್ಪಕವಾಗಿ ಕೆಲಸ ಮಾಡದ ವಿಜಯ ಅವರ ಗುತ್ತಿಗೆಯನ್ನು ರದ್ದುಪಡಿಸಿ, ಬೇರೆ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲು ಮೇಲಧಿಕಾರಿಗಳಿಗೆ ಬರೆದಿರುವುದಾಗಿ  ಎಂಜಿನಿಯರ್‌ ಹರೀಶ್‌ ತಿಳಿಸಿದ್ದಾರೆ.

ಸಮಸ್ಯೆ ಉಲ್ಬಣ
ಹಾಲಿ ಟೆಂಡರನ್ನು ರದ್ದುಪಡಿಸಿ ಬೇರೆ ಟೆಂಡರ್‌ ಮಾಡಲು ಬರೆಯಲಾಗಿದೆ ಎಂದು ತಿಳಿದು ಬಂದಿದೆ. ರಸ್ತೆ ಅವ್ಯವಸ್ಥೆಯಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಬೇರೆ ಟೆಂಡರ್‌ ಕರೆದು ಕಾಮಗಾರಿ ಶುರುವಾಗುವ ಹೊತ್ತಿಗೆ ಸಮಸ್ಯೆ ಇನ್ನಷ್ಟು ಉಲ್ಬಣಿಸಬಹುದು.
– ಜಯಪ್ರಕಾಶ್‌, ಅರಂತೋಡು ಗ್ರಾ.ಪಂ. ಪಿಡಿಒ

— ತೇಜೇಶ್ವರ್‌ ಕುಂದಲ್ಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next