Advertisement

ಕೊಂಕಣ ಸುತ್ತಿ ಮೈಲಾರಕ್ಕೆ  ಹೋಗುವ ಸ್ಥಿತಿ 

08:36 PM Aug 08, 2021 | Team Udayavani |

ಆತ್ರಾಡಿ-ಹಿರೆಬೆಟ್ಟು ಗ್ರಾಮವನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ರಸ್ತೆ ಸಮಸ್ಯೆಒಂದು. ಇದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಂದಿನ ಈ ಸರಣಿಯಲ್ಲಿದೆ.

Advertisement

ಉಡುಪಿ: ಮಣಿಪಾಲದ ಟ್ಯಾಪ್ಮಿ ಮುಂಭಾಗದಿಂದ ಹಾದು ಹೋಗುವ ಆತ್ರಾಡಿ- ಹಿರೇಬೆಟ್ಟು ಗ್ರಾ.ಪಂ.ನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ವಾಹನಗಳು ಸಂಚರಿಸಲು ಹಿಂದೇಟು ಹಾಕುತ್ತಿವೆ. ಕಳೆದೊಂದು ವರ್ಷದಿಂದ ಕಾಡುತ್ತಿರುವ ಸಮಸ್ಯೆ ಇದೀಗ ಮಳೆಗಾಲದಲ್ಲಿ ಇನ್ನಷ್ಟ ಭೀಕರ ಸ್ವರೂಪವನ್ನು ಪಡೆದುಕೊಂಡಿದೆ.

80 ಬಡಗಬೆಟ್ಟು ಮಾರ್ಗವಾಗಿ ಸಾಗಿ ಆತ್ರಾಡಿಯನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ವಾಹನ ಸವಾರರು ನಿರ್ದಿಷ್ಟ ದಿಕ್ಕಿನಿಂದ ಈ ಮಾರ್ಗವಾಗಿ ಓಡಾಡುವುದು ಕಷ್ಟಕರವಾಗಿದೆ. ಹೀಗಾಗಿ ವಾಹನಗಳು, ಆಟೋಗಳು ಹೊಂಡಗಳಿಲ್ಲದ ರಸ್ತೆಯಲ್ಲಿ ಸಂಚರಿಸಲು ಹೋಗಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುವುದರಿಂದ ನಿತ್ಯ ಜಗಳ, ತಂಟೆ ತಕರಾರುಗಳು ನಡೆಯುತ್ತಿವೆ. ಅಲ್ಲದೇ ಅಪಘಾತಗಳು ಸಂಭವಿಸುತ್ತಿದೆ.

 ಬಸ್‌ ಸೇವೆ ಇಲ್ಲ:

ಸ್ಥಳೀಯರಿಗೆ ಟ್ಯಾಪ್ಮಿ ಮೂಲಕ ಮಣಿಪಾಲವನ್ನು ಕಡಿಮೆ ಸಮಯದಲ್ಲಿ ಯಾವುದೇ ಟ್ರಾಫಿಕ್‌ ಸಮಸ್ಯೆ ಇಲ್ಲದೇ ಸಂಪರ್ಕಿಸ ಬಹುದಾಗಿದೆ. ಲಾಕ್‌ಡೌನ್‌ ವೇಳೆ ಹಿರೇಬೆಟ್ಟು -ಮಣಿಪಾಲ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ ಸೇವೆ ಸ್ಥಗಿತಗೊಂಡಿದ್ದು, ಇದುವರೆಗೆ ಪ್ರಾರಂಭವಾಗಿಲ್ಲ. ಇದರಿಂದಾಗಿ ಸ್ಥಳೀಯರು ಮಣಿಪಾಲದಿಂದ ಹಿರೇಬೆಟ್ಟುವಿಗೆ ಬರಲು ಬಾಡಿಗೆ ಅಥವಾ ಸ್ವಂತ ವಾಹನದಲ್ಲಿ ಬರಬೇಕಾದ ಪರಿಸ್ಥಿತಿ ಇದೆ.

Advertisement

 2 ಕಿ.ಮೀ.ಗೆ 7 ಕಿ.ಮೀ. ಸಾಗಬೇಕು:

ಆತ್ರಾಡಿಯಲ್ಲಿ ಸುಮಾರು 579 ಮನೆಗಳಿವೆ. ಈ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ಉದ್ದಿಮೆಗಳು ಇಲ್ಲದೆ ಇರುವುದರಿಂದ ಉದ್ಯೋಗಕ್ಕಾಗಿ ಹಾಗೂ ನಿತ್ಯ ಅವಶ್ಯಕತೆಗಳಿಗಾಗಿ ಸ್ಥಳೀಯರು ಮಣಿಪಾಲಕ್ಕೆ ಹೋಗಬೇಕಾದ ಪರಿಸ್ಥಿತಿ. ಹಿಂದೆ ಮೂರು ಕಿ.ಮೀ. ಕ್ರಮಿಸಿದರೆ ಮಣಿಪಾಲ ತಲುಪುತ್ತಿದ್ದವರು ಇದೀಗ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಂತೆ ಸ್ಥಳೀಯರು ಆತ್ರಾಡಿ, ಪರ್ಕಳ ಮಾರ್ಗವಾಗಿ ಸುಮಾರು 7 ಕಿ.ಮೀ. ಕ್ರಮಿಸಿ ಮಣಿಪಾಲವನ್ನು ತಲುಪಬೇಕಾಗಿದೆ.

ರಸ್ತೆ ಇಕ್ಕೆಲದಲ್ಲಿ ಭೂ ಕುಸಿತ :

ಈ ಮಾರ್ಗದ ಸುಮಾರು 2 ಕಿ.ಮೀ. ರಸ್ತೆಯಲ್ಲಿನ ಡಾಮರು ಕಿತ್ತು ಹೋಗಿ ಅಲ್ಲಲ್ಲಿ ಡಾಮರು ಕಿತ್ತು, ಜೆಲ್ಲಿ ಕಲ್ಲುಗಳು ರಸ್ತೆಯ ಮೇಲೆ ಹರಡಿಕೊಂಡಿದೆ. ಇನ್ನು ಎರಡು ಕಡೆಯಲ್ಲಿ ರಸ್ತೆ ನಿರ್ಮಿಸಲು ಅಗೆಯಲಾದ ಪ್ರದೇಶದಲ್ಲಿನ ಗುಂಡಿಗಳಲ್ಲಿ ನೀರು ನಿಂತು ಮಾರ್ಗವು ಕೆಸರು ಮಯಾವಾಗಿದೆ. ಇನ್ನು ಕೆಲವಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಇಕ್ಕೆಲದಲ್ಲಿ ಭೂಕುಸಿತ ಉಂಟಾಗಿದೆ.

ಇತರ ಸಮಸ್ಯೆಗಳೇನು? :

  • ಬಸ್‌ ಸೇವೆ ಸ್ಥಗಿತಗೊಂಡಿದ್ದು, ವಾಹನಗಳನ್ನು ಬಾಡಿಗೆ ಮಾಡಿಕೊಂಡು ಹೋಗಬೇಕು
  • ಅಗತ್ಯ ವಸ್ತುಗಳ ಖರೀದಿಗೆ ಬಹುದೂರ ಸಾಗಬೇಕಿದೆ.
  • ರಸ್ತೆಯ ಎರಡು ಬದಿಯಲ್ಲಿ ಪೊದೆಗಳು ಬೆಳೆದಿದ್ದರಿಂದ ರಾತ್ರಿ ಹಗಲು ವಿಷಪೂರಿತ ಹಾವು ಕಾಟ.
  • ನಿರ್ಜನ ಪ್ರದೇಶದಲ್ಲಿ ಕಳ್ಳರ ಕಾಟ
  • ತ್ಯಾಜ್ಯ ಸಮಸ್ಯೆ
  • ಬೀದಿ ದೀಪ ಕೊರತೆ

ಶೀಘ್ರದುರಸ್ತಿಗೊಳಿಸಿ:

ದ್ವಿಚಕ್ರ ವಾಹನ ಸವಾರರು ಹೊಂಡ ತಪ್ಪಿಸಲು ಹೋಗಿ ಮಾರ್ಗ ಪಕ್ಕದ ಪೊದೆಗಳಿಗೆ ಬಿದ್ದು ಗಾಯಗೊಂಡಿರುವ ಹಲವು ನಿದರ್ಶನಗಳಿವೆ. ಮೇ ತಿಂಗಳ ಅಂತ್ಯದಲ್ಲಿ ರಸ್ತೆ ನಿರ್ಮಿಸಲು ಅಲ್ಲಲ್ಲಿ ರಸ್ತೆಯನ್ನು ಅಗೆದು ಹಾಗೇ ಬಿಡಲಾಗಿದೆ. ಈ ಮಾರ್ಗ ದುರಸ್ತಿಗೊಂಡರೆ ಆತ್ರಾಡಿ ಜನರು ಕೇವಲ 3 ಕಿ.ಮೀ. ಕ್ರಮಿಸಿದರೆ ಮಣಿಪಾಲವನ್ನು ತಲುಪಬಹುದು.-ಕೃಷ್ಣ ಪ್ರಸಾದ್‌ಆತ್ರಾಡಿ,   ಹಿರೇಬೆಟ್ಟು ನಿವಾಸಿ.

ಕಾಮಗಾರಿಗೆ ಹಿನ್ನಡೆ :

ರಸ್ತೆ ನಿರ್ಮಾಣ ಮಾಡಲು ಟೆಂಡರ್‌ ಆಗಿದೆ. ಮಳೆಯಿಂದಾಗಿ ಕಾಮಗಾರಿಗೆ ಹಿನ್ನಡೆಯಾಗಿದೆ. ಜನರಿಗೆ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶೀಘ್ರ ಪರಿಹಾರ ಕಲ್ಪಿಸುವತ್ತ ಗಮನ ಹರಿಸಲಾಗುತ್ತದೆ. – ರೂಪಾ ಶೆಟ್ಟಿ, ಆತ್ರಾಡಿ-ಹಿರೇಬೆಟ್ಟು ಗ್ರಾ.ಪಂ. ಅಧ್ಯಕ್ಷೆ

 

-ತೃಪ್ತಿ ಕುಮ್ರಗೋಡು

 

Advertisement

Udayavani is now on Telegram. Click here to join our channel and stay updated with the latest news.

Next