ಕುದೂರು: ಕುದೂರಿನಿಂದ ಸೋಲೂರಿನ ರಾಷ್ಟ್ರೀಯ ಹೆದ್ದಾರಿ- 75ರ ತಲುಪುವ ಬೈಪಾಸ್ ರಸ್ತೆ ಮಳೆಯಿಂದ ಸಂಪೂರ್ಣ ಹದಗೆಟ್ಟಿದ್ದು, ಪ್ರತಿದಿನ ಗುಂಡಿಗಳಲ್ಲಿ ಬಿದ್ದು ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಆದರೂ, ಈ ರಸ್ತೆಯಲ್ಲಿರುವ ಗುಂಡಿಗಳನ್ನು ಮಾತ್ರ ಮುಚ್ಚಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತ ಹೆಚ್ಚಳ: ಕುದೂರಿನಿಂದ ಸೋಲೂರು ರಸ್ತೆಯಲ್ಲಿ ಮೂರರಿಂದ ನಾಲ್ಕು ಅಡಿ ಆಳದ ಗುಂಡಿಗಳಲ್ಲಿ ದ್ವಿಚಕ್ರ ವಾಹನ ಚಾಲಕರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇಷ್ಟಲ್ಲಾ ಅನಾಹುತಗಳು ಸಂಭವಿಸುತ್ತಿದ್ದರೂ ಅಲ್ಲಿರುವ ಸ್ಥಳೀಯ ಗುಂಡಿಗಳಿಗೆ ತ್ಯಾಪೆ ಹಾಕುವ ಅಥವಾ ಗುಂಡಿಗಳಿಗೆ ಮಣ್ಣು ಹಾಕುವ ಕೆಲಸ ಕೂಡ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರೈಲ್ವೆ ನಿಲ್ದಾಣ, ಹೆದ್ದಾರಿಗೆ ತಲುಪುವ ದಾರಿ: ಇಷ್ಟೆಲ್ಲಾ ಅನಾಹುತ ಸಂಭವಿಸುತ್ತಿದ್ದರೂ ರಸ್ತೆಯಲ್ಲಿ ಬಿದ್ದರುವ ಗುಂಡಿಗಳನ್ನು ಸರಿ ಮಾಡುವ ಕಾರ್ಯ ಮಾತ್ರ ನಡೆಯುತ್ತತ್ತಿಲ್ಲ. ಈ ರಸ್ತೆಯಲ್ಲಿ ರೈಲ್ವೆ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ದಾರಿ ಇದಾಗಿದೆ. ಕುದೂರು ಮತ್ತು ಸುತ್ತಮುತ್ತಲಿನ ಜನರು ಇದೇ ದಾರಿಯಲ್ಲಿ ಪ್ರತಿ ನಿತ್ಯ ಸಂಚರಿಸುತ್ತಾರೆ. ಇಂತಹ ರಸ್ತೆ ರಿಪೇರಿ ಮಾತ್ರ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿ ಚಾಲಕರು: ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಚಲಿಸುವುದು ಭಾರಿ ದುರಂತಕ್ಕೆ ಕಾರಣವಾಗಿರುವ ಗುಂಡಿಗಳು, ರಾತ್ರಿ ವೇಳೆ ವಾಹನ ಬೆಳಕಿನಿಂದ ಎದುರಿಗಿರುವ ಗುಂಡಿಗಳು ಕಾಣಿಸದೇ ವಿಧಿಯಿಲ್ಲದೆ ವಾಹನಗಳನ್ನು ಗುಂಡಿಗಳಿಗೆ ಇಳಿಯುತ್ತವೆ. ಇದರಿಂದ ವಾಹನಗಳು ಜಖಂ ಆಗಿ ಅಪಘಾತವಾಗುತ್ತಿವೆ. ದ್ವಿಚಕ್ರ ವಾಹನವಾದರೇ ರಸ್ತೆಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಇದೆ ಎನ್ನುತ್ತಾರೆ ದ್ವಿಚಕ್ರ ವಾಹನ ಸವಾರರು.
ಸ್ಪಂದಿಸದ ಅಧಿಕಾರಿಗಳು: ಈ ರಸ್ತೆಯಲ್ಲಿ ಪ್ರತಿ ದಿನ ಜನಪ್ರತಿನಿಧಿಗಳು, ಅಧಿಕಾರಿಗಳು ಚಲಿಸುತ್ತಿದ್ದರೂ ಕಂಡರೂ ಕಾಣದಂತೆ ಕುಳಿತುಕೊಂಡು ಅಧಿಕಾರ ಅನುಭವಿಸುತ್ತಿದ್ದಾರೆ ಹೊರತು, ಜನರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರಸ್ತೆಯಲ್ಲಿ ರೈಲ್ವೆ ಬ್ರಿಡ್ಜ್ ಇರುವ ಪಕ್ಕದಲ್ಲಿ ಆಳುದ್ದ ಗುಂಡಿಗಳು ಬಿದ್ದು ರಸ್ತೆ ಹಾಳಾಗಿದೆ. ಇಲ್ಲಂತೂ ದ್ವಿಚಕ್ರ ವಾಹನ ಸವಾರರು ಮತ್ತು ಲಾರಿ, ಬಸ್ಸಿನವರೂ ಕೂಡ ಹೊಗಲು ಸಾಧ್ಯವಿಲ್ಲ. ಸ್ವಲ್ಪ ಪಕ್ಕಕ್ಕೆ ಹೋದರೆ ರೈಲ್ವೆ ಬ್ರಿಡ್ಜ್ನಿಂದ ಕೆಳಗುರುಳುವ ಸಾಧ್ಯತೆಯಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮಳೆದಿನಗಳಲ್ಲಿ ಕಷ್ಟ: ಮಳೆ ಬಂದರಂತೂ ಗಾಯದ ಮೇಲೆ ಬರೆ ಎಳೆದಂತೆ ಸಮಸ್ಯೆ ಹೆಚ್ಚಾಗುತ್ತದೆ. ರಸ್ತೆಯ ಅನೇಕ ಕಡೆಗಳಲ್ಲಿ ನೀರು ನಿಲ್ಲುವುದರಿಂದ ರಸ್ತೆ ಯಾವುದು, ಗುಂಡಿ ಯಾವುದು ತಿಳಿಯದೇ ವಾಹನ ಸಂಚರಿಸುವುದು ಕಷ್ಟವಾಗುತ್ತದೆ. ಸ್ವಲ್ಪ ಆಯಾ ತಪ್ಪಿದರೂ ಬೀಳುವುದು ಶತಸಿದ್ದ. ಇಂತಹ ಪರಿಸ್ಥಿತಿಯಲ್ಲಿ ಮಳೆಯ ದಿನಗಳನ್ನು ಕಳೆಯಬೇಕಿರುವುದು ನಮ್ಮ ಶೋಚನೀಯ ಸ್ಥಿತಿಯನ್ನು ತೋರುತ್ತದೆ.
ರೋಗಿಗಳ ಪಡು ಹೇಳತೀರದು: ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್‌ಗಳಿಗೆ ಕರೆ ಮಡಿದರೆ, ಆ್ಯಂಬುಲೆನ್ಸ್ ಬಂದು ರೋಗಿಗಳನ್ನು ಕರೆದೊ ಯ್ಯುವುದು ಆಮೆ ನಡಿಗೆಯಂತೆ. ಗುಂಡಿಗಳಲ್ಲಿ ವೇಗವಾಗಿ ಹೋಗಲಾರದೆ ವಾಹನ ಚಾಲಕರಂತೂ ಧರ್ಮ ಸಂಕಟ ಅನುಭವಿಸಬೇಕಾಗುತ್ತದೆ. ಹೀಗೂ ಆಸ್ಪತ್ರೆ ತಲುಪುವಷ್ಟರಲ್ಲಿ ರೋಗಿಗಳ ಪ್ರಾಣಕ್ಕೆ ಬೆಲೆಯಿಲ್ಲದಂತಾಗಿದೆ.
ರಾತ್ರಿ ವೇಳೆ ಈ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಕಾಣುತ್ತಿಲ್ಲ. ವಾಹನಗಳನ್ನು ಓಡಿಸುವುದೇ ಕಷ್ಟವಾಗಿದೆ. ಶೀಘ್ರದಲ್ಲೇ ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು,
– ಸುಭಾಷ, ದ್ವಿಚಕ್ರ ವಾಹನ ಚಾಲಕ
ರಸ್ತೆ ಸಂಪೂರ್ಣ ಹಾಳಾಗಿದ್ದು, ಸರಿಪಡಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಪ್ರತಿ ನಿತ್ಯ ಒಬ್ಬರಾದರೂ ಗುಂಡಿಯಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಮಳೆಗಾಲ ಆರಂಭವಾಗಿದೆ. ಇನ್ನಾದರೂ ಸರಿಪಡಿಸುತ್ತಾರೆಯೋ ನೋಡಬೇಕಿದೆ.
– ಬಸವರಾಜು, ಸ್ಥಳೀಯ