ಹೊಸಕೋಟೆ: ತಾಲೂಕಿನ ಜಡಿಗೇನಹಳ್ಳಿ ಹತ್ತಿರದ ರಾಜ್ಯ ಹೆದ್ದಾರಿ 75ರ ಮಾಲೂರು ಸಂಪರ್ಕಿಸುವ ರಸ್ತೆ ದೊಡ್ಡ ಗುಂಡಿಗಳಿಂದ ಕೂಡಿದ್ದು, ಹೆದ್ದಾರಿಯಲ್ಲಿ ದಿನನಿತ್ಯ ಸಂಚರಿಸುವ ಸಾವಿರಾರು ವಾಹನಗಳು ಮತ್ತು ದ್ವಿಚಕ್ರ ವಾಹನ ಸವಾರರ ಸಂಚಾರಕ್ಕೆ ತಲೆನೋವಾಗಿದೆ.
ಜೋರಾಗಿ ಬರುವ ಗುಡ್ಸ್ ವಾಹನಗಳು ಹತ್ತಿರ ಬರುವವರಿಗೂ ರಸ್ತೆಯಲ್ಲಿನ ಗುಂಡಿಗಳು ಕಾಣುವುದಿಲ್ಲ. ಒಂದು ವೇಳೆ ಗುಂಡಿಗಳ ಕಂಡ ತಕ್ಷಣ ಬ್ರೇಕ್‌ಹಾಕಿದರೆ ಪಲ್ಟಿ ಹೊಡೆಯುವ ಸಾಧ್ಯತೆದಟ್ಟವಾಗಿದೆ. ಇನ್ನು ಕಾರುಗಳಲ್ಲಿ ಸಂಚರಿಸುವವರ ಪಾಡು ಹೇಳತೀರದು. ಕೆಲವು ವಾಹನಗಳು ಗುಂಡಿಗಳಲ್ಲಿ ಬಿದ್ದು ವಾಹನ ಗಳಿಗೆ ತೊಂದರೆಯಾದರೆ, ಮತ್ತು ಕೆಲವು ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಎದುರುಗಡೆಯಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆಗಳು ನಡೆದಿವೆ.
ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ದ್ವಿಚಕ್ರ ವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಗಳಿದ್ದು, ರಾಜ್ಯ ಹೆದ್ದಾರಿ ಅಧಿಕಾರಿಗಳು ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಮಳೆಯಿಂದ ನೀರು ತುಂಬಿಕೊಂಡರೆ ರಸ್ತೆ ಕಾಣದಾಗಿ ಗುಂಡಿಗಳಲ್ಲಿ ಬಿದ್ದು ಅನಾಹುತ ಆಗುವುದು ಗ್ಯಾರಂಟಿ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಿಸಿ: ಹೊಸಕೋಟೆಯಿಂದ ಮಾಲೂರುಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಹೆಜ್ಜೆಹಜ್ಜೆಗೂ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ಇದರಿಂದ ಪ್ರಯಾಣಿಕರುಅವಸರದಲ್ಲಿ ಹೋಗುವಾಗ ಗುಂಡಿಗಳ ಕಾಣದೆ ಬಿದ್ದಿರುವ ಘಟನೆಗಳು ನಾವು ಕಣ್ಣಾರೆ ಕಂಡಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿ ಅನುಕೂಲ ಮಾಡಿ ಕೊಡಬೇಕು ಎಂದು ಜಡಿಗೇನಹಳ್ಳಿ ಗ್ರಾಪಂ ಉಪಾಧ್ಯಕ್ಷ ರವಿಕುಮಾರ್ ಆಗ್ರಹಿಸಿದ್ದಾರೆ.