ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ಮಳೆ ಬಂದರೂ ಕೆಲಸ, ಮಳೆ ಹೋದರೆ ಮತ್ತಷ್ಟು ಕೆಲಸ. ರಾತ್ರಿ ವೇಳೆ ಮಳೆ ಬಂದಾಗ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ನೀರು ಸರಾಗವಾಗಿ ಹೋಗುವಂತೆ ಮಾಡುವುದು ಒಂದು ಕೆಲಸವಾದರೆ, ಮಳೆ ಸುರಿದ ಹೋದ ಮೇಲೆ ಬೀಳುವ ರಸ್ತೆಗುಂಡಿಗಳ ಲೆಕ್ಕಹಾಕಿ ಮುಚ್ಚುವುದು ಮತ್ತೂಂದು ತಲೆನೋವಿನ ಕೆಲಸವಾಗಿದೆ.
ಒಟ್ಟೊಟ್ಟಿಗೆ ಎರಡೂ ಕೆಲಸಗಳನ್ನು ಮಾಡಬೇಕಾದ ಪರಿಸ್ಥಿತಿ ಈಗಿದ್ದು, ರಸ್ತೆ ಗುಂಡಿಗಳನ್ನು ಸಂಪೂರ್ಣ ಮುಚ್ಚುವ ಸಲುವಾಗಿ ಈಗ ಶುಭ್ರ ಆಕಾಶಕ್ಕಾಗಿ ಬಿಬಿಎಂಪಿ ಎದುರು ನೋಡುತ್ತಿದೆ. ಮುಂಗಾರು ಮಳೆ ಅಬ್ಬರಕ್ಕೆ ಈಗಾಗಲೇ ಬೆಂಗಳೂರಿನ ಸುತ್ತಮುತ್ತಲ ಹಲವು ಪ್ರದೇಶಗಳಲ್ಲಿ ರಸ್ತೆಗಳು ಕಿತ್ತು ಹೋಗಿವೆ. ಇನ್ನೂ ಹಲವು ಕಡೆಗಳಲ್ಲಿ ರಸ್ತೆಗಳ ಮಧ್ಯೆ ಮತ್ತು ಇಕ್ಕೆಲಗಳಲ್ಲಿ ಗುಂಡಿ ಬಿದ್ದು, ರಸ್ತೆ ಸವಾರರಿಗೆ ತೊಂದರೆ ಉಂಟಾಗಿದೆ. ಈವರೆಗೂ ಸುಮಾರು 5 ಸಾವಿರಕ್ಕೂ ಅಧಿಕ ರಸ್ತೆಗುಂಡಿಗಳು ಬಿದ್ದಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ಬಿಬಿಎಂಪಿ ಎಲ್ಲ ರೀತಿ ಸಜ್ಜಾಗಿದೆ.
ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಗುಂಡಿ: ಮುಂಗಾರು ಮಳೆಯ ಅಬ್ಬರಕ್ಕೆ ರಾಜಧಾನಿಯ ಹಲವು ರಸ್ತೆಗಳು ಗುಂಡಿ ರಸ್ತೆಗಳಾಗಿ ಮಾರ್ಪಾಟು ಹೊಂದಿವೆ. ರಸ್ತೆಯ ಮೇಲೆ ಚರಂಡಿ ನೀರು ಉಕ್ಕಿ ಹರಿದಿರುವುದರಿಂದ ಚಿಕ್ಕಗಾತ್ರದ ಗುಂಡಿಗಳು ಈಗ ದೊಡ್ಡ ಗಾತ್ರದಲ್ಲಿ ಬಾಯೆ¤ರೆದಿದ್ದು, ವಾಹನ ಸವಾರರ ಓಡಾಟಕ್ಕೆ ಸಂಚಕಾರ ತಂದೊಡ್ಡಿವೆ. ಬೆಂಗಳೂರಿನ ಮುಖ್ಯ ರಸ್ತೆಗಳು (ಆರ್ಟಿರಿಯಲ್) ಮತ್ತು ಉಪ ಮುಖ್ಯ ರಸ್ತೆ (ಸಬ್ ಆರ್ಟಿರಿಯಲ್) ಗಳಲ್ಲಿ ಗುಂಡಿಗಳು ಬಾಯಿತೆರೆದಿವೆ. ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಗಾತ್ರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಭಯ ದಿಂದಲೇ ದ್ವಿಚಕ್ರ ವಾಹನ ಸವಾರರು ಸಂಚಾರ ನಡೆಸ ಬೇಕಾದ ಪರಿಸ್ಥಿತಿ ಎದುರಾಗಿದೆ.
ಹೊರಮಾವು- ಅಗರ ಮುಖ್ಯರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ಸೃಷ್ಟಿಯಾಗಿದ್ದು ಪ್ರತಿನಿತ್ಯ ಒಬ್ಬರು ಬಿದ್ದು ಗಾಯಗೊ ಳ್ಳುತ್ತಿದ್ದಾರೆ. ಸ್ಥಳೀಯರು ಕೂಡ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಕಿತ್ತು ಹೋದ ರಸ್ತೆಯ ಮಧ್ಯದಲ್ಲೇ ಒಳಚರಂಡಿ ವಾಲ್ ಗಳು ಉಕ್ಕಿ ಹರಿಯುತ್ತಿದ್ದು, ರಾತ್ರಿ ಓಡಾಟ ದ್ವಿಚಕ್ರವಾಹನ ಸವಾರರಿಗೆ ಪ್ರಾಣ ಭಯ ತರಿಸಿದೆ.
8
ವಲಯಗಳಲ್ಲಿ 5,670 ರಸ್ತೆ ಗುಂಡಿ: ರಾಜಧಾನಿಯ ರಸ್ತೆಗುಂಡಿಗಳ ಬಗ್ಗೆ ಬಿಬಿಎಂಪಿ ಈಗಾಗಲೇ ಲೆಕ್ಕ ಹಾಕಿದೆ. ಜೂನ್‌ವರೆಗೂ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 5,670 ರಸ್ತೆಗುಂಡಿಳಿವೆ ಎಂಬ ಲೆಕ್ಕ ಸಿಕ್ಕಿದೆ. 670 ರಸ್ತೆ ಗುಂಡಿಗಳು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿವೆ. ಈ ರಸ್ತೆಗಳಲ್ಲಿ 66 ಬ್ಯಾಡ್ ಪ್ಯಾಚ್ (ಕೆಟ್ಟ ತೇಪೆ) ಗಳಿವೆ. ಆ ಹಿನ್ನೆಲೆಯಲ್ಲಿ ಆರ್ಟಿರಿಯಲ್ ಮತ್ತು ಸಬ್ ಅರ್ಟಿರಿಯಲ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಕೋಲ್ಡ್ ಮಿಕ್ಸ್ ಮೂಲಕ ಮುಚ್ಚುವ ಕೆಲಸ ನಡೆಯಲಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಕೋಲ್ಡ್ ಮಿಕ್ಸ್ ಮೂಲಕ ರಸ್ತೆ ಗುಂಡಿ ಮುಚ್ಚುವ ಕೆಲವು ಕಡೆಗಳಲ್ಲಿ ನಡೆಯುತ್ತಿದೆ. ಬಿಬಿಎಂಪಿ ಯಲ್ಲಿ 5 ಸಾವಿರ ಕೋಲ್ಡ್ ಮಿಕ್ಸ್ ಬ್ಯಾಗ್‌ಗಳಿವೆ. ಇನ್ನೂ 3 ಸಾವಿರ ಕೋಲ್ಡ್ ಮಿಕ್ಸ್ ಬ್ಯಾಗ್‌ಗಳನ್ನು ನಿತ್ಯ ತಯಾರಿಸಲಾಗುತ್ತದೆ.
ಹವಾಮಾನ ಶುಭ್ರವಾಗಿಲ್ಲ: ಈಗ ಬೆಂಗಳೂರಿನಲ್ಲಿ ಹವಾಮಾನ ಅಷ್ಟೊಂದು ಸರಿಯಾಗಿಲ್ಲ. ಆಗಾಗ್ಗೆ ಮಳೆ ಸುರಿಯುವುದರಿಂದ ಗುಂಡಿ ಮುಚ್ಚಲು ಆಗುತ್ತಿಲ್ಲ. ಮುಂದಿನ ಕೆಲವು ದಿನಗಳಲ್ಲಿ ಶುಭ್ರ ಆಕಾಶ ಇರಲಿದ್ದು, ಮುಂದಿನ ಹತ್ತು-ಹದಿನೈದು ದಿನಗಳಲ್ಲಿ ರಾಜಧಾನಿಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಆಯಾ ವಲಯವಾರು ಎಂಜಿನಿಯರ್‌ಗಳು ನಾಲ್ಕೈದು ದಿನಗಳಲ್ಲಿ ಆಯಾ ವಲಯದ ಸುಮಾರು 500ರಿಂದ 800 ಗುಂಡಿಗಳನ್ನು ಮುಚ್ಚುತ್ತಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಬಿಬಿಎಂಪಿ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಲೆಕ್ಕಹಾಕಿದೆ. ಜತೆಗೆ ಕೆಲವು ಕಡೆಗಳಲ್ಲಿ ಕೋಲ್ಡ್ ಮಿಕ್ಸ್ ಮೂಲಕ ಗುಂಡಿ ಮುಚ್ಚುವ ಕೆಲವು ಕಡೆಗಳಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ವಲಯವಾರು ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮತ್ತಷ್ಟು ಚುರುಕು ನೀಡಲಾಗುವುದು
. –ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ
-ದೇವೇಶ ಸೂರಗುಪ್ಪ