Advertisement

ರಸ್ತೆ ತುಂಬ ಹೊಂಡ; ಜನ- ವಾಹನ ಸವಾರರ ಪರದಾಟ

04:44 PM Jun 11, 2018 | |

ಶಿರಾಳಕೊಪ್ಪ: ಕಳೆದ ಎರಡು ವರ್ಷಗಳಿಂದ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗಿದ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು ಗುಂಡಿಮಯವಾಗಿ ರಸ್ತೆಯಲ್ಲಿ ನೀರು ನಿಂತು ನಾಗರಿಕರು ಮತ್ತು ವಾಹನ
ಚಾಲಕರು ಸಂಚರಿಸಲು ಪರದಾಡುವಂತಾಗಿದೆ.

Advertisement

ಕೆಸಿಪ್‌ ರಸ್ತೆ ನಿರ್ಮಾಣ ಮಾಡುತ್ತಿದ್ದು, ಶಿವಮೊಗ್ಗದಿಂದ ಹಾನಗಲ್‌ವರೆಗಿನ ಪ್ರಮುಖ ರಸ್ತೆ ನಿರ್ಮಾಣದ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದರೂ, ಶಿರಾಳಕೊಪ್ಪ ಪಟ್ಟಣದ ಪ್ರಮುಖ ರಸ್ತೆಯ ಕಾಮಗಾರಿಯ ಕೆಲಸ ಹಾಗೆಯೇ ನಿಲ್ಲಿಸಲಾಗಿತ್ತು.

ಕನಿಷ್ಠ ರಸ್ತೆ ಗುತ್ತಿಗೆದಾರರು ಮಳೆ ಬರುವ ಸೂಚನೆಯನ್ನು ಗಮನಿಸಿ ಮುಖ್ಯ ರಸ್ತೆಯಲ್ಲಿ ಬಿದ್ದಿರುವಂತಹ  ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚಿದ್ದರೆ ವಾಹನ ಸಂಚರಿಸಲು ಸಹಾಯವಾಗುತ್ತಿತ್ತು.

ನಿರೀಕ್ಷೆಯಂತೆ ಈ ಬಾರಿ ಮುಂಗಾರು ಮಳೆಯು ಉತ್ತಮವಾಗಿ ಪ್ರಾರಂಭವಾಗಿದ್ದು, ಮಳೆಗಾಲ ಪ್ರಾರಂಭವಾಗುವ ಮೊದಲೇ ರಸ್ತೆ ಕಾಮಗಾರಿ ಪೂರ್ಣಗೊಳ್ಳಬಹುದೆಂಬ ನಾಗರಿಕರ ನಿರೀಕ್ಷೆ ಹುಸಿಯಾಗಿ ಕೆಸರಲ್ಲಿಯೇ ಓಡಾಡಿ ತೀವ್ರ ಯಾತನೆ ಅನುಭವಿಸಬೇಕಾಗಿದೆ.

ರಸ್ತೆಯಲ್ಲಿ ಅತಿಯಾದ ಗುಂಡಿಗಳು ಇರುವುದರಿಂದ ದ್ವಿಚಕ್ರ ವಾಹನ ಸವಾರರು ರಸ್ತೆ ಬದಿಯಲ್ಲಿ ಸಂಚರಿಸುತ್ತಿರುವುದರಿಂದ ಪಾದಚಾರಿಗಳು ಓಡಾಡುವುದೇ ದುಸ್ಥರವಾಗಿ ಕಾಲುವೆ ಮೇಲೆ ಹಾಕಲಾದ ಸ್ಲಾಬ್‌ ಮೇಲೆ ಓಡಾಡುವಂತಾಗಿದೆ .

Advertisement

ಬಿಸಲು ಇದ್ದಾಗ ರಸ್ತೆ ಕಾಮಗಾರಿಯನ್ನು ಮಾಡದೇ ಈಗ ಮಳೆ ಪ್ರಾರಂಭವಾಗಿರುವ ಸಮಯದಲ್ಲಿ ರಸ್ತೆ ಕಾಮಗಾರಿ ಮಾಡಲು ಹೊರಟಿರುವುದು ಇನ್ನು ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡಿದಂತಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಸಾಕಷ್ಟು ಜನರು ಮುಖ್ಯ ರಸ್ತೆಯಲ್ಲಿ ಓಡಾಡಬೇಕಾದರೆ ಅವರ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಈ ರಸ್ತೆಯಲ್ಲಿ ಓಡಾಡುವುದನ್ನೇ ನಿಲ್ಲಿಸಿದ್ದಾರೆ. ಭಾನುವಾರ ಸಂತೆ ದಿನವಾಗಿದ್ದು ಸಂತೆಗೆ ಅಕ್ಕಪಕ್ಕದ ತಾಲೂಕು ಮತ್ತು ಜಿಲ್ಲೆಯಿಂದ ಮತ್ತು ಗ್ರಾಮಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಅವರೆಲ್ಲಾ ಸಂತೆಗೆ ಏಕೆ ಬಂದಿದ್ದೇವೆವೊ ಎಂದು ಪರಸ್ಪರ ಗ್ರಾಮಸ್ಥರೊಂದಿಗೆ ಮಾತನಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ.

ರಸ್ತೆ ನಿರ್ಮಾಣಕ್ಕೆ ಮಳೆನಿಲ್ಲುವುದನ್ನು ಕಾಯಬೇಕಾದ ಅನಿವಾರ್ಯತೆ ಇರುವುದರಿಂದ ಮಳೆ ನಿಂತಾಗ ಹಗಲು ಮತ್ತು ರಾತ್ರಿಯೆನ್ನದೇ ರಸ್ತೆ ಕಾಮಗಾರಿ ಕೈಗೊಂಡಲ್ಲಿ ಮಾತ್ರ ರಸ್ತೆ ನಿರ್ಮಿಸಲು ಸಾಧ್ಯವಾಗುತ್ತದೆ. ತಕ್ಷಣ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಸ್ತೆಯ ಅವಸ್ಥೆಯನ್ನು ನೋಡಿ ತಕ್ಷಣ ಸರಿಪಡಿಸಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next