ದೋಟಿಹಾಳ: ಗ್ರಾಮದ ಬಹುತೇಕ ರಸ್ತೆಗಳಲ್ಲಿ ನೀರು ನಿಂತು ಚರಂಡಿಯಾಗಿ ನಿರ್ಮಾಣವಾಗಿದೆ. ಹೀಗಾಗಿ ರಸ್ತೆಗಳಲ್ಲಿ ಸಂಚರಿಸುವರಿಗೆ ಇದು ರಸ್ತೆಯೋ..ಚರಂಡಿಯೋ..ಎಂಬಂತಾಗಿದೆ.
ದೋಟಿಹಾಳ ಗ್ರಾಮದಲ್ಲಿ ಕಳೆದ ವರ್ಷದ ಹಿಂದೆ ಆರಂಭವಾದ ಜಲಜೀವನ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಹೆಸರಿನಲ್ಲಿ ನೀರಿನ ಪೈಪ್ ಲೈನ್ ಅಳವಡಿಸಲು ಸಿಸಿ ರಸ್ತೆಯನ್ನು ಅಗೆದು ಬಿಟ್ಟ ಕಾರಣ ರಸ್ತೆಗಳಲ್ಲಿ ನೀರು ನಿಂತು ಇದು ರಸ್ತೆಯೋ.. ಅಥವಾ ಚರಂಡಿಯೋ.. ಎಂಬಂತಾಗಿದೆ.
ಇಂತಹ ಸ್ಥಿತಿಯಲ್ಲಿ ಇತ್ತೀಚೆಗೆ ಗ್ರಾಮದಲ್ಲಿ ಜಾತ್ರೆಗಳು ನಡೆದವು. ಜಾತ್ರೆಗೆ ಬಂದ ಕೆಲವರು ರಸ್ತೆಯಲ್ಲಿ ಸಂಚರಿಸುವ ವೇಳೆ ಕಾಲು ಜಾರಿ ಬಿದ್ದು ಆಸ್ಪತ್ರೆ ಸೇರಿದ ಉದಾರಣೆಗಳಿವೆ. ಈ ಕಾಮಗಾರಿಯಿಂದ ಇಷ್ಟೆಲ್ಲಾ ಸಮಸ್ಯೆಯಾಗಿದ್ದರೂ ಯಾವ ಅ ಧಿಕಾರಿಗಳು, ಜನಪ್ರತಿನಿಧಿ ಗಳು ಸಮಸ್ಯೆಯನ್ನು ಸರಿಪಡಿಸದೇ ಮೂಕ ಪ್ರೇಕ್ಷಕರಾಗಿ ಕುಳಿತಿದ್ದಾರೆ. ಜಿಲ್ಲೆಯಲ್ಲಿ ಈ ಕಾಮಗಾರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಡೆಯುತ್ತಿವೆ. ಅನೇಕ ಕಡೆಗಳಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳು ವಿಚಾರಿಸಿದ್ದು, ಇನ್ನೆರಡು ದಿನಗಳಲ್ಲಿ ಕಾಮಗಾರಿ ಆರಂಭವಾಗುತ್ತದೆ ಎಂಬ ಹಾರಿಕೆ ಉತ್ತರ ನೀಡಿದ್ದಾರೆ.
ಸಂಚಾರಕ್ಕೆ ತೊಂದರೆ: ಗ್ರಾಮದ ಶಾಲಾ ಮಕ್ಕಳು ಮತ್ತು ವೃದ್ಧೆಯರು ಹಾಗೂ ವಯಸ್ಸಾದವರು ಈ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವಾಗ ಪಕ್ಕದಲ್ಲಿ ವಾಹನ ಹಾಯ್ದು ಹೋದರೆ ರಸ್ತೆಯ ಮೇಲಿರುವ ನೀರು ಮೈಮೇಲೆ ಸಿಡಿಯುತ್ತವೆ. ರಸ್ತೆಗಳಲ್ಲಿ ನೀರು ನಿಂತು ಚರಂಡಿ ನಿರ್ಮಾಣವಾದ ಕಾರಣ ಚರಂಡಿ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಅಷ್ಟೇ ಅಲ್ಲ ಅಕ್ಕಪಕ್ಕದ ಮನೆಯವರಿಗೆ ಇದರಿಂದ ದುರ್ವಾಸನೆ ಹರಡುತ್ತಿದೆ.
ಜಿಜಿಎಂ ಕಾಮಗಾರಿ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚಿಸಿದ್ದಾರೆ. ಸಮಸ್ಯೆಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಪತ್ರ ಬರೆಯುಲು ತಿಳಿಸಿದ್ದು, ಎಡ ಬ್ಲ್ಯೂಇ ಅವರಿಗೆ ಪತ್ರ ಬರೆಯಲಾಗಿದೆ.
-ಮುತ್ತಪ್ಪ ಛಲವಾದಿ,ಪಿಡಿಒ, ದೋಟಿಹಾಳ ಗ್ರಾಪಂ
ಕಾಮಗಾರಿ ಗುತ್ತಿಗೆ ಪಡೆದವರು ಬೇರೆ, ಕೆಲಸ ಮಾಡುವವರು ಬೇರೆಯಾಗಿದ್ದಾರೆ. ಹೀಗಾಗಿ ಅನೇಕ ಕಡೆಗಳಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಿ ಕೈತೊಳೆದು ಕೊಂಡಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಂಡು ಅವರ ಲೈಸೆನ್ಸ್ ನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿಯ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
-ಶ್ಯಾಮಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ. ಕುಷ್ಟಗಿ.
ಮಲ್ಲಿಕಾರ್ಜುನ ಮೆದಿಕೇರಿ