Advertisement
ನಗರದ ಬಂಟ್ಸ್‌ಹಾಸ್ಟೆಲ್‌ನಿಂದ ಪಿವಿಎಸ್ ಜಂಕ್ಷನ್‌ವರೆಗಿನ ಮುಖ್ಯ ರಸ್ತೆಯ ದುಸ್ಥಿತಿಯಿದು. ಹೆಸರಿಗೆ ಮಾತ್ರ ಇದು ಮುಖ್ಯರಸ್ತೆಯಾಗಿದೆ. ಆದರೆ ದಿನನಿತ್ಯ ತ್ಯಾಜ್ಯ ರಾಶಿಯಿಂದಾಗಿ ಕೆಟ್ಟ ವಾಸನೆ ಇಲ್ಲಿ ನಿರಂತರವಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಎಸೆದಿರುವ ಕಸದ ರಾಶಿಯಿಂದಾಗಿ ನಿತ್ಯ ಇಲ್ಲಿನ ವ್ಯಾಪಾರಸ್ಥರು, ದಾರಿಹೋಕರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವಿದೆ.
ಪಿವಿಎಸ್ ಜಂಕ್ಷನ್ ಬಳಿಯಲ್ಲಿಯೇ ಕುದ್ಮುಲ್ ರಂಗರಾವ್ ವಿದ್ಯಾರ್ಥಿನಿಯರ ವಸತಿ ನಿಲಯವಿದೆ. ಇದರ ಮುಂಭಾಗದ ರಸ್ತೆಯಲ್ಲಿ ಆಹಾರದ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಅಲ್ಲದೇ ರಸ್ತೆ ಪಕ್ಕದಲ್ಲಿ ವಿದ್ಯಾರ್ಥಿ ನಿಲಯದ ಕಂಪೌಂಡ್ ಹೊರಗಡೆ ಬಾಟಲ್, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಬೆಳಗ್ಗಿನ ಹೊತ್ತಿನಲ್ಲೇ ತ್ಯಾಜ್ಯ ಎಸೆದು ಹೋಗುವುದರಿಂದ ಯಾರು ಇಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಆದರೆ ವಿದ್ಯಾರ್ಥಿನಿ ನಿಲಯದ ಪಕ್ಕದಲ್ಲೇ ತ್ಯಾಜ್ಯ ರಾಶಿ, ಆಹಾರ ತ್ಯಾಜ್ಯಗಳನ್ನು ಎಸೆಯುವುದರಿಂದ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ‘ಬೆಳಗ್ಗೆಯೇ ಇಲ್ಲಿ ತ್ಯಾಜ್ಯ ಸುರಿದು ಹೋಗುತ್ತಾರೆ. ಆದರೆ ಯಾರು ಎಂಬುದು ಗೊತ್ತಾಗುತ್ತಿಲ್ಲ. ಈ ತ್ಯಾಜ್ಯ ಕೊಳೆತು ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಕುದ್ಮುಲ್ ರಂಗರಾವ್ ವಿದ್ಯಾರ್ಥಿನಿ ನಿಲಯದ ಸಿಬಂದಿ. ಫುಟ್‌ಪಾತ್‌ನಲ್ಲೇ ವಾಹನ ಪಾರ್ಕಿಂಗ್
ಇನ್ನು ಬಂಟ್ಸ್‌ಹಾಸ್ಟೆಲ್‌ನ ಎಡಬದಿ ರಸ್ತೆಯ ಫುಟ್‌ಪಾತ್‌ಗಳೆಲ್ಲ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಬದಲಾಗಿದೆ. ಪಾದಚಾರಿಗಳಿಗೆ ನಡೆದಾಡಲು ಮಾಡಿರುವ ಫುಟ್‌ಪಾತ್ ವಾಹನಗಳೊಂದಿಗೆ ತುಂಬಿ ತುಳುಕುತ್ತಿವೆ. ಬಂಟ್ಸ್‌ಹಾಸ್ಟೆಲ್, ಪಿವಿಎಸ್ ಜಂಕ್ಷನ್ ಹೀಗೆ ಎರಡೂ ಕಡೆ ಟ್ರಾಫಿಕ್ ಪೊಲೀಸರಿದ್ದರೂ, ಫುಟ್‌ಪಾತ್‌ನಲ್ಲಿ ಪಾರ್ಕಿಂಗ್ ಮಾಡುತ್ತಿರುವವರ ಮೇಲೆ ಯಾವುದೇ ಕ್ರಮ ವಹಿಸುತ್ತಿಲ್ಲ. ಇದರಿಂದ ದ್ವಿಚಕ್ರ ವಾಹನ ಸವಾರರಿಗೂ ಕ್ಯಾರೇ ಇಲ್ಲದಂತಾಗಿದೆ.
Related Articles
ಒಳಚರಂಡಿ ಅವ್ಯವಸ್ಥೆಯಿಂದಾಗಿ ಇಲ್ಲಿನ ರಸ್ತೆಯಲ್ಲಿ ಚರಂಡಿ ನೀರು ಹರಿಯುವುದೂ ನಿರಂತರ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಪಾದಚಾರಿಗಳಿಗೆ ನಡೆಯಲು ಸಮಸ್ಯೆಯಾದರೆ, ವಾಹನಗಳು ಹೋಗುವಾಗ ನೀರು ಪಾದಚಾರಿಗಳ ಮೇಲೆ ಎಸೆಯಲ್ಪಟ್ಟು ಚರಂಡಿ ನೀರಿನಲ್ಲಿ ತೋಯುವಂತಹ ಸಮಸ್ಯೆಯೂ ಘಟಿಸುತ್ತಿದೆ. ಮಳೆಗಾಲದಲ್ಲಿ ಚರಂಡಿ ನೀರು ಸನಿಹದ ಅಂಗಡಿಗಳಿಗೆ ನುಗ್ಗಿದ ನಿದರ್ಶನಗಳೂ ಇವೆ. ಇದರೊಂದಿಗೆ ಪಿವಿಎಸ್ ಜಂಕ್ಷನ್ ಸನಿಹದ ರಸ್ತೆ ಬದಿಯಲ್ಲಿ ಹಾಕಲಾಗಿರುವ ಸ್ಲ್ಯಾಬ್ ಗಳು ಎದ್ದು ಹೋಗಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. 8 ವರ್ಷಗಳ ಹಿಂದೆ ಇಲ್ಲಿ ಬಸ್ ನಿಲ್ದಾಣವಿದ್ದರೂ, ಅದನ್ನು ಕೆಡವಲಾಗಿದೆ. ಪ್ರಸ್ತುತ ಜನ ಬಸ್‌ಗೆ ಕಾಯಲು ರಸ್ತೆ ಬದಿಯನ್ನೇ ಆಶ್ರಯಿಸಬೇಕಾಗಿ ಬಂದಿದೆ.
Advertisement
ಸುಲಭ ಶೌಚಾಲಯ!ಬೆಂಗಳೂರು ಸೇರಿದಂತೆ ದೂರದೂರಿನಿಂದ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಲು ಮತ್ತು ಇಳಿಸಲು ಇದೇ ಪಿವಿಎಸ್ ಜಂಕ್ಷನ್ ಸನಿಹದಲ್ಲಿ ನಿಲುಗಡೆಯಾಗುತ್ತವೆ. ಇಲ್ಲಿ ಸನಿಹದಲ್ಲಿ ಶೌಚಾಲಯ ವ್ಯವಸ್ಥೆಯೂ ಸರಿಯಾಗಿಲ್ಲದ ಕಾರಣ ದೂರದೂರಿನಿಂದ ಬಂದ ಪ್ರಯಾಣಿಕರು ಬೆಳಗ್ಗಿನ ಹೊತ್ತು ಮೂತ್ರ ವಿಸರ್ಜನೆಗೆ ಇದೇ ರಸ್ತೆ ಬದಿಯನ್ನು ಬಳಸಿಕೊಳ್ಳುತ್ತಾರೆ. ಮುಂಜಾವು ನಸುಕಿನ ವೇಳೆಗೆ ಜನ ಮತ್ತು ವಾಹನ ಸಂಚಾರವೂ ಅಷ್ಟಾಗಿ ಇರದ ಕಾರಣ ಪ್ರಯಾಣಿಕರಿಗೆ ಇದೇ ರಸ್ತೆ ಸುಲಭ ಶೌಚಾಲಯವಾಗಿ ಮಾರ್ಪಾಡಾಗಿದೆ. ಇದರಿಂದಾಗಿ ಹಗಲು ಹೊತ್ತಿನಲ್ಲಿ ಇಲ್ಲಿ ಸಂಚರಿಸುವ ವಾಹನ ಮತ್ತು ಸಾರ್ವಜನಿಕರಿಗೆ ಕೆಟ್ಟ ವಾಸನೆ ಬಡಿಯುವುದರೊಂದಿಗೆ ಮೂಗು ಮುಚ್ಚಿಕೊಂಡೇ ನಡೆಯಬೇಕಾದ ಸ್ಥಿತಿ ಇದೆ. ಸಾರ್ವಜನಿಕರ ಸಹಕಾರವಿಲ್ಲ
ಸಾರ್ವಜನಿಕರ ಸಹಕಾರವಿಲ್ಲದಿದ್ದಲ್ಲಿ ಪಾಲಿಕೆಯು ಎಷ್ಟೇ ಕೋಟಿ ರೂ. ಖರ್ಚು ಮಾಡಿ ಅಭಿವೃದ್ಧಿ ಕೆಲಸ ಮಾಡಿದರೂ ವ್ಯರ್ಥವಾಗುತ್ತದೆ. ಪಿವಿಎಸ್ ಮುಖ್ಯ ರಸ್ತೆ ಬದಿಯಲ್ಲಿ ಯಾರು ತ್ಯಾಜ್ಯ ಎಸೆಯುತ್ತಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ. ಸನಿಹದಲ್ಲಿರುವ ಅಂಗಡಿಗಳಿಗೆ ತೆರಳಿ ಕಸ ಎಸೆಯದಂತೆ ಮನವಿ ಮಾಡಲಾಗಿದೆ. ಇನ್ನು ಸ್ಲ್ಯಾಬ್ ಎದ್ದು ಹೋಗಿ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ತಿಳಿದಿದೆ. ಇಲ್ಲಿ ರಸ್ತೆ ಅಗಲ ಕಾಮಗಾರಿ ನಡೆಯಲಿರುವುದರಿಂದ ಪ್ರಸ್ತುತ ಅದನ್ನು ಹಾಗೇ ಬಿಡಲಾಗಿದೆ.
– ಎ. ಸಿ. ವಿನಯರಾಜ್, ಕಾರ್ಪೊರೇಟರ್