Advertisement
ದೇರೆಬೈಲು-ಎಯ್ನಾಡಿ ಸಂಪರ್ಕಿಸುವ ಹರಿಪದವು ರಸ್ತೆ ನೋಡಲು ಕಾಂಕ್ರೀಟ್ ಹಾಕಿ ಸುಂದರವಾಗಿಯೇ ಇದೆ. ಆದರೆ ಈ ಒಂದು ರಸ್ತೆಯಲ್ಲಿ ಹಲವು ಸಮಸ್ಯೆಗಳಿವೆ. ಅಪಾಯಕಾರಿ ಮರಗಳನ್ನು ಪಾಲಿಕೆ ಸಿಬಂದಿಗಳು ಇತ್ತೀಚೆಗೆ ಕಡಿದಿದ್ದರೂ ಅದನ್ನು ತೆರವು ಮಾಡುವಲ್ಲಿ ನಿರ್ಲಕ್ಷ್ಯ ತೋರಿರುವುದರಿಂದ ಸುಮಾರು ಒಂದು ತಿಂಗಳಿನಿಂದ ಮರ, ಗೆಲ್ಲುಗಳು ರಸ್ತೆಯಲ್ಲೇ ಬಿದ್ದಿವೆ. ಇದರಿಂದ ಈ ಭಾಗದಲ್ಲಿ ಓಡಾಡುವ ಜನರಿಗೆ ತೊಂದರೆಯಾಗುತ್ತಿದೆ.
ಹರಿಪದವು ರಸ್ತೆಯನ್ನು ಎಯ್ನಾಡಿಗೆ ತೆರಳಲು ಅಡ್ಡರಸ್ತೆಯಾಗಿ ಬಳಸಲಾಗುತ್ತದೆ. ಅಲ್ಲದೆ ಹಲವು ಮನೆಗಳಿರುವ ಮಂದಾರಬೈಲು ಭಾಗಕ್ಕೂ ಈ ರಸ್ತೆಯ ಮೂಲಕವೇ ಸಾಗಬೇಕು. ಅದರೊಂದಿಗೆ ಒಂದು ಖಾಸಗಿ ಆಸ್ಪತ್ರೆಯ ವಸತಿನಿಲಯ, ಬೃಹತ್ ಖಾಸಗಿ ಕಂಪೆನಿಯೂ ಇದೆ. ಈ ಹಿನ್ನಲೆಯಲ್ಲಿ ದಿನನಿತ್ಯ ಈ ಭಾಗದಲ್ಲಿ ನೂರಾರು ಜನ ಓಡಾಟ ನಡೆಸುತ್ತಾರೆ. ಆದರೆ ಈ ಭಾಗದಲ್ಲಿ ಬೀದಿ ದೀಪಗಳಿಲ್ಲದೆ ಜನರು ಕತ್ತಲಲ್ಲೇ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾತ್ರಿ ವೇಳೆ ಮಹಿಳೆಯರು ಈ ಭಾಗದಲ್ಲಿ ಸಂಚರಿಸಲು ಆತಂಕಕ್ಕೊಳಗಾಗುತ್ತಿದ್ದಾರೆ. ಅಲ್ಲದೆ ಈ ಕಾರಣದಿಂದ ಈ ಭಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆ ಇದೆ ಎಂಬುದು ಸ್ಥಳೀಯರು ಆತಂಕ
ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪ್ರತಿನಿಧಿಯನ್ನು ಕೇಳಿದರೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂಬುದಾಗಿ ಅಲ್ಲಿನ ನಿವಾಸಿಯೊಬ್ಬರು ಸುದಿನಕ್ಕೆ ತಿಳಿಸಿದ್ದಾರೆ.
Related Articles
ಮೇ 29ರಂದು ಸುರಿದ ಭಾರಿ ಮಳೆಗೆ ದೇರೆಬೈಲಿನಿಂದ ಹರಿಪದವು ರಸ್ತೆ ಆರಂಭವಾಗುವ ತಿರುವಿನಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದ್ದು, ಈವರೆಗೆ ಅದನ್ನು ತೆರವು ಗೊಳಿಸುವ ಕಾರ್ಯ ಪಾಲಿಕೆ ಮಾಡಿಲ್ಲ. ಮಳೆ ನೀರಿಗೆ ಮಣ್ಣುಗಳೆಲ್ಲಾ ರಸ್ತೆಯಲ್ಲೇ ಹರಿಯುತ್ತಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಕೆಸರಿನಲ್ಲೇ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯನ್ನು ಅನೇಕ ಬಾರಿ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ .
Advertisement