ಬೆಂಗಳೂರು: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬಿಎಸ್‌ಎಫ್ ಯೋಧ ಸೇರಿ ಇಬ್ಬರು ಮೃತಪಟ್ಟು, ಒಬ್ಬ ಗಾಯಗೊಂಡಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ತಡರಾತ್ರಿ ಬಳ್ಳಾರಿ ರಸ್ತೆಯ ಬಿಎಸ್‌ಎಫ್ ಗೇಟ್-2ರ ಮುಂಭಾಗ ನಡೆದಿದೆ.
ತಮಿಳು ನಾಡು ಮೂಲದ ಬಿಎಸ್‌ಎಫ್ ಯೋಧ ಸುಧಾಕರ್(41) ಹಾಗೂ ಕೋಲಾರ ಮೂಲದ ಯುಟ್ಯೂಬರ್ ಗಿರೀಶ್ (ಗಣಿ) (32) ಮೃತರು. ಘಟನೆಯಲ್ಲಿ ಮುರಳಿ ಎಂಬಾತ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಯುಟ್ಯೂಬರ್ ಗಿರೀಶ್ ಮತ್ತು ಆತನ ಸ್ನೇಹಿತ ಮುರುಳಿ ರಾಯಲ್ ಎನ್ ಫೀಲ್ಡ್ ಬುಲೆಟ್‌ನಲ್ಲಿ ಬಳ್ಳಾರಿ ರಸ್ತೆಯಲ್ಲಿ ಬಾಗಲೂರು ಕ್ರಾಸ್ ಕಡೆಯಿಂದ ನಗರದ ಕಡೆಗೆ ಬರುತ್ತಿದ್ದರು. ಇದೇ ಸಮಯಕ್ಕೆ ಬಿಎಸ್‌ಎಫ್ ಯೋಧ ಸುಧಾಕರ್ ಗೇಟ್-2ರ ಮೂಲಕ ಸರ್ವಿಸ್ ರಸ್ತೆಗೆ ಬಂದು ಬಾಗಲೂರು ಕಡೆಗೆ ತೆರಳಲು ದ್ವಿಚಕ್ರ ವಾಹನವನ್ನು ಮುಖ್ಯರಸ್ತೆ ಕಡೆಗೆ ತಿರುಗಿಸಿದ್ದಾರೆ. ಈ ವೇಳೆ ಎರಡೂ ದ್ವಿಚಕ್ರ ವಾಹನಗಳ ನಡುವೆ ಮುಖಾಮುಖೀ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಎರಡು ವಾಹನಗಳ ಸವಾರರು ರಸ್ತೆಗೆ ಬಿದ್ದಿದ್ದಾರೆ. ಬಳಿಕ ಸ್ಥಳೀಯರು ಗಾಯಗೊಂಡಿದ್ದ ಸವಾರರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸುಧಾಕರ್ ಅವರನ್ನು ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇನ್ನು ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದ ಗಿರೀಶ್ ಚಿಕಿತ್ಸೆ ಫಲಿಸದೆ ಭಾನುವಾರ ಮುಂಜಾನೆ 2 ಗಂಟೆಗೆ ಮೃತಪಟ್ಟಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.