Advertisement

Road mishap: ಹೊಸ ವರ್ಷದಂದೇ ರಸ್ತೆ ಅಪಘಾತ: 3 ಸಾವು

01:59 PM Jan 02, 2024 | Team Udayavani |

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ಮನೆಗೆ ತೆರಳುವಾಗ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣದಲ್ಲಿ ಟೆಕಿ ಸೇರಿ ಮೂವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

Advertisement

ಟೆಕಿ ಸಾವು: ಒನ್‌ ವೇಯಲ್ಲಿ ಆಟೋ ಮತ್ತು ಕಾರು ನಡುವೆ ಅಪಘಾತ ನಡೆದು ಟೆಕಿ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಬೆಳ್ಳಂದೂರು ಸಂಚಾರ ಠಾಣೆ ವ್ಯಾಪ್ತಿಯ ಹರಳೂರು-ಕಸವನಹಳ್ಳಿ ರಸ್ತೆಯಲ್ಲಿ ನಡೆದಿದೆ. ಬೆಳ್ಳಂದೂರು ನಿವಾಸಿ ರವಿ ಕಾರ್ತಿಕೇಯ(29) ಮೃತ ಟೆಕಿ.

ಈತನ ಸ್ನೇಹಿತರಾದ ಅರ್ಬಾಜ್‌ ಖಾನ್‌, ಜೇವಾ, ಗಾರ್ಗಿ ಗುಪ್ತಾ ಹಾಗೂ ಆಟೋ ಚಾಲಕ ಶಾಕೀಬ್‌ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಹರಿಯಾಣ ಮೂಲದ ರವಿ ಕಾರ್ತಿಕೇಯಾ, ಭಾನುವಾರ ರಾತ್ರಿ ಹೊಸ ವರ್ಷದ ಹಿನ್ನೆಲೆಯಲ್ಲಿ ಮೂವರು ಸಹೋದ್ಯೋಗಿಗಳ ಜತೆ ಪಾರ್ಟಿ ಮಾಡಿದ್ದಾರೆ. ಬಳಿಕ ಸ್ನೇಹಿತರ ಜತೆಗೆ ಶಾಕೀಬ್‌ನ ಆಟೋರಿಕ್ಷಾ ದಲ್ಲಿ ಬೆಳ್ಳಂದೂರಿನ ಮನೆಗೆ ಹೊರಟ್ಟಿದ್ದರು. ತಡರಾತ್ರಿ 12.20ರ ಸುಮಾರಿಗೆ ಹರಳೂರು- ಕಸವನಹಳ್ಳಿ ರಸ್ತೆಯಲ್ಲಿ ಏಕಮುಖ ಸಂಚಾರವಿದ್ದರೂ ಆಟೋ ಚಾಲಕ ವಿರುದ್ಧ ದಿಕ್ಕಿನಿಂದ ಹೊರಟ್ಟಿದ್ದಾನೆ.

ಈ ವೇಳೆ ಎದುರಿನಿಂದ ವೇಗವಾಗಿ ಬಂದ ಕಾರೊಂದು ಆಟೋರಿಕ್ಷಾಗೆ ಡಿಕ್ಕಿಯಾಗಿದೆ. ಪರಿಣಾಮ ಆಟೋ ಪಲ್ಟಿಯಾಗಿದ್ದು, ಆಟೋ ಚಾಲಕ ಹಾಗೂ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ನಾಲ್ವರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ರವಿ ಕಾರ್ತಿಕೇಯ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು. ಈ ಸಂಬಂಧ ಬೆಳ್ಳಂದೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸವಾರ ಸಾವು: ಮತ್ತೂಂದು ಪ್ರಕರಣದಲ್ಲಿ ವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ಮನೆಗೆ ಹೋಗುವಾಗ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಹೆಣ್ಣೂರು ಸಂಚಾರ ಠಾಣೆ ವ್ಯಾಪ್ತಿ ಕೊತ್ತನೂರು ಮುಖ್ಯರಸ್ತೆಯಲ್ಲಿ ನಡೆದಿದೆ.

ಕಾಚರಕನಹಳ್ಳಿ ನಿವಾಸಿ ಚೇತನ್‌(22) ಮೃತ ಸವಾರ.

ಪಾರ್ಟಿ ಮುಗಿಸಿಕೊಂಡು ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಚೇತನ್‌, ಕೊತ್ತನೂರು ಮುಖ್ಯರಸ್ತೆಯಲ್ಲಿ ಅತಿವೇಗವಾಗಿ ಬೈಕ್‌ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸವಾರ ಚೇತನ್‌, ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.

ಹೆಣ್ಣೂರು ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

ವಿದ್ಯುತ್‌ ಕಂಬಕ್ಕೆ ಡಿಕ್ಕಿ: ಪೇಂಟರ್‌ ಸಾವು: ಇನ್ನೊಂದು ಪ್ರಕರಣ ದಲ್ಲೂ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುವಾಗ ದ್ವಿಚಕ್ರ ವಾಹನ ಸವಾರನೊಬ್ಬ ನಿಯಂತ್ರಣ ಕಳೆದುಕೊಂಡು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ವೈಟ್‌ ಫೀಲ್ಡ್‌ ಸಂಚಾರ ಠಾಣೆ ವ್ಯಾಪ್ತಿ ನಲ್ಲೂರುಹಳ್ಳಿ ರಸ್ತೆಯಲ್ಲಿ ನಡೆದಿದೆ.

ಹಿಂಬದಿ ಸವಾರ ಕೂಡ ಗಾಯಗೊಂಡಿದ್ದಾನೆ. ಸಿದ್ದಾಪುರ ನಿವಾಸಿ ಧೀರಜ್‌(21) ಮೃತ ಸವಾರ. ಈತನ ಸ್ನೇಹಿತ ರಾಕೇಶ್‌ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಉತ್ತರ ಪ್ರದೇಶದ ಮೂಲದ ಧೀರಜ್‌ ಹಾಗೂ ಆತನ ಸ್ನೇಹಿತ ರಾಕೇಶ್‌ ಪೇಂಟಿಂಗ್‌ ಕೆಲಸ ಮಾಡುತ್ತಾರೆ. ನಗರದ ಸಿದ್ದಾಪುರದಲ್ಲಿ ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದರು. ಹೊಸ ವರ್ಷ ಹಿನ್ನೆಲೆಯಲ್ಲಿ ಇಬ್ಬರು ಇತರೆ ಸ್ನೇಹಿತರ ಜತೆ ಸೇರಿ ಪಾರ್ಟಿ ಮಾಡಿದ್ದರು. ಬಳಿಕ ದ್ವಿಚಕ್ರ ವಾಹನದಲ್ಲಿ ರೂಮ್‌ ಕಡೆಗೆ ಹೊರಟ್ಟಿದ್ದು, ಧೀರಜ್‌ ಬೈಕ್‌ ಚಾಲನೆ ಮಾಡುತ್ತಿದ್ದ. ಈ ವೇಳೆ ನಲ್ಲೂರಹಳ್ಳಿ ರಸ್ತೆಯಲ್ಲಿ ಬರುವಾಗ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ ಹೊಡೆದಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ತೀವ್ರ ರಕ್ತಸ್ರಾವವಾಗಿ ಸವಾರ ಧೀರಜ್‌ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ರಾಕೇಶ್‌ಗೆ ಗಾಯಗಳಾಗಿವೆ. ವೈಟ್‌ ಫೀಲ್ಡ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದು ವಾಹನ ಚಾಲನೆ 330 ಪ್ರಕರಣ ದಾಖಲು: 

ಬೆಂಗಳೂರು: ಹೊಸವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, ಕೇವಲ ಆರೇಳು ಗಂಟೆ ಯಲ್ಲೇ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ 330 ಮಂದಿ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಭಾನವಾರ ತಡರಾತ್ರಿ ಯಿಂದ ಸೋಮವಾರ ಮುಂಜಾನೆವರೆಗೆ ನಗರದ ವಿವಿಧೆಡೆ ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ನಗರಾದ್ಯಂತ 7,620 ವಾಹನ ಗಳನ್ನು ತಪಾಸಣೆ ಮಾಡಿದ್ದು, ಈ ಪೈಕಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ 330 ವಾಹನ ಸವಾರರ ವಿರುದ್ಧ ಮೋ ಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಡಿ.21ರಿಂದ ಡಿ.30ರವರೆಗೆ ನಡೆದ ವಿಶೇಷ ಕಾರ್ಯಾ ಚರಣೆಯಲ್ಲೂ 27,280 ವಾಹನಗಳ ತಪಾಸಣೆ ನಡೆಸಿ, 717 ವಾಹನ ಸವಾರರ ವಿರುದ್ಧ ಡ್ರಂಕ್‌ ಆ್ಯಂಡ್‌ ಡ್ರೈವ್‌ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಭಾನುವಾರ ತಡರಾತ್ರಿಯಿಂದ ಸೋಮವಾರ ಮುಂಜಾನೆ 7 ಗಂಟೆ ವರೆಗೆ 10 ಮಾರಣಾಂತಿಕವಲ್ಲದ ಅಪಘಾತಗಳು ಹಾಗೂ 3 ಮಾರಣಾಂತಿಕ ಅಪಘಾತ ಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

2023ರಲ್ಲಿ ರಸ್ತೆ ಅಪಘಾತದಲ್ಲಿ 909 ಮಂದಿ ಸಾವು: ನಗರ ವ್ಯಾಪ್ತಿಯಲ್ಲಿ ಕಳೆದ ವರ್ಷ(2023) ಸಂಭವಿಸಿದ ರಸ್ತೆ ಅಪಘಾತ ಪ್ರಕರಣಗಳಲ್ಲಿ 909 ಮಂದಿ ಮೃತಪಟ್ಟಿದ್ದು, ವಿವಿಧ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ 184.83 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ನಗರ ಸಂಚಾರ ಪೊಲೀಸರು ನಗರದಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ನಗರದಲ್ಲಿ ಕಳೆದ 12 ತಿಂಗಳಲ್ಲಿ 880 ಗಂಭೀರ ಸ್ವರೂಪದ ಅಪಘಾತಗಳು ನಡೆದಿದ್ದು, 4,095 ಸಣ್ಣ-ಪುಟ್ಟ ಅಪಘಾತಗಳು ಸಂಭವಿಸಿವೆ. ಹಾಗೆಯೇ ಘಟನೆಯಲ್ಲಿ 4201 ಮಂದಿ ಗಾಯಗೊಂಡಿದ್ದರು. ನೇರ ಕಾರ್ಯಚರಣೆ ಮೂಲಕ 2,49,624 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಸಿಸಿಟಿವಿ ಸೇರಿದಂತೆ ವಿವಿಧ ತಂತ್ರಜ್ಞಾನಗಳ ಮೂಲಕ 87,25,321 ಪ್ರಕರಣ ದಾಖಲಿಸಲಾಗಿದೆ.

ಈ ಮೂಲಕ ಕಳೆದ ವರ್ಷ ಬರೋಬ್ಬರಿ 184.83 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಅಲ್ಲದೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ 7,055 ಪ್ರಕರಣ, ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಅಪಘಾತ ಮಾಡಿದವರ ವಿರುದ್ಧ 16 ಕೇಸು ದಾಖಲಾಗಿವೆ. ಇದೇ ವೇಳೆ 22 ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ 22 ಗ್ರೀನ್‌ ಕಾರಿಡಾರ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next