ಬೆಂಗಳೂರು : ಅತಿ ವೇಗವಾಗಿ ಬಂದ ಬೈಕ್ ರಸ್ತೆ ಹಂಪ್ ಎಗರಿದ ಪರಿಣಾಮ ನಿಯಂತ್ರಣ ತಪ್ಪಿ ಬಿದ್ದು ಸವಾರ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೊಲ್ಲಹಳ್ಳಿ ನಿವಾಸಿ ಅರುಣ್ ಕುಮಾರ್ (27) ಮೃತ ಸವಾರ.
ಭಾನುವಾರ ರಾತ್ರಿ 8.20ರ ಸುಮಾರಿಗೆ ಶಾಂತಿಪುರ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಫೇಸ್ 2 ಕಡೆಗೆ ಬರುವಾಗ ದುರ್ಘಟನೆ ನಡೆದಿದೆ. ಕಲಬುರಗಿ ಮೂಲದ ಅರುಣ್ ಕುಮಾರ್ ಐಟಿಐ ವ್ಯಾಸಂಗ ಮಾಡಿದ್ದು, ಎಲೆಕ್ಟ್ರಾನಿಕ್ ಸಿಟಿಯ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಸ್ನೇಹಿತರನ್ನು ಭೇಟಿಯಾಗಿ ವಾಪಸ್ ಮನೆಗೆ ಹೋಗುವಾಗ ಟೆಕ್ ಮಹೀಂದ್ರ ಕಂಪನಿ ಬಳಿಯ ರಸ್ತೆಯಲ್ಲಿ ವೇಗವಾಗಿ ಬೈಕ್ ಚಲಾಯಿಸಿದ್ದಾನೆ. ಆಗ ಹಂಪ್ ಎದುರಾದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿ ಬೈಕ್ ಹಂಪ್ ಎಗರಿದ್ದು, ಪರಿಣಾಮ ದ್ವಿಚಕ್ರ ವಾಹನ ಸಹಿತ ಸವಾರ ಅರುಣ್ ರಸ್ತೆಗೆ ಬಿದ್ದಿದ್ದಾರೆ. ಹೆಲ್ಮೆಟ್ ಧರಿಸದ ಪರಿಣಾಮ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಅರುಣ್ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.