ಬೆಂಗಳೂರು: ನೆಲಮಂಗಲ-ಯಲಹಂಕ ಮಾರ್ಗದ ನೈಸ್ ರಸ್ತೆಯಲ್ಲಿ ಸೋಮವಾರ ಸಂಜೆ ಭೀಕರ ರಸ್ತೆ ಅಪಘಾತದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕನಕಪುರದ ಶಿವನಹಳ್ಳಿ ನಂಜೇಗೌಡ (45), ವಿನೋದ್ (36) ಮತ್ತು ಕುಮಾರ್ (41) ಮೃತರು. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಸೋಂಪುರ ರಸ್ತೆಯಿಂದ ನೆಲಮಂಗಲ ಟೋಲ್ ಗೇಟ್ ಮಾರ್ಗ ಮಧ್ಯೆಯ ಚನ್ನಸಂದ್ರ ಸೇತುವೆ ಬಳಿ ಅಪಘಾತವಾಗಿದೆ.
ಮೃತರ ಪೈಕಿ ವಿನೋದ್ ಶಿವನಹಳ್ಳಿ ಗ್ರಾಮ ಪಂಚಾ ಯಿತಿ ಸದಸ್ಯನಾಗಿದ್ದು ಕುಮಾರ್ ಶಿವನಹಳ್ಳಿ ಹಾಲು ಉತ್ಪಾದಕರ ಸಂಘದ ಸದಸ್ಯ. ನಂಜೇಗೌಡ, ಗಾರ್ಮೆಂಟ್ಸ್ ಗಳಿಗೆ ಕಾರ್ಮಿಕರ ಕರೆದೊಯ್ಯಲು ಬಾಡಿಗೆ ಕಾರುಗಳನ್ನು ಇಟ್ಟುಕೊಂಡಿದ್ದಾರೆ.
ಮೂವರೂ ಸ್ನೇಹಿತರಾಗಿದ್ದು, ಗೋವಾಗೆ ಹೋಗಲು ಪ್ಲ್ರಾನ್ ಮಾಡಿದ್ದರು. ಹೀಗಾಗಿ ಸೋಮ ವಾರ ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಕ್ಕೆ ತೆರಳಲು ವಿಮಾನ ಟಿಕೆಟ್ ಕೂಡ ಕಾಯ್ದಿರಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಮೂವರು ವಿಮಾನ ನಿಲ್ದಾಣ ಕಡೆ ಹೊರಟಿದ್ದಾರೆ. ವಿನೋದ್ ಕಾರು ಚಾಲನೆ ಮಾಡುತ್ತಿದ್ದು ವಿಮಾನ ನಿಲ್ದಾಣಕ್ಕೆ ಬೇಗ ತಲುಪಲು ಅತೀ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರು. ಮಾರ್ಗ ಮಧ್ಯೆ ಚನ್ನಸಂದ್ರ ಸೇತುವೆ ಬಳಿ ಕಾರಿನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಟೈಯರ್ ಸ್ಫೋಟಗೊಂಡು, ಪಕ್ಕದ ರಸ್ತೆಯಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ಎಕ್ಸ್‌ಯುವಿ 700 ಕಾರಿಗೆ ಡಿಕ್ಕಿ ಹೊಡೆದು, ರಸ್ತೆ ಬದಿ ಬಿದ್ದು, ಸ್ಕಾರ್ಪಿಯೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಮೂವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕೆಂಗೇರಿ ಸಂಚಾರ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾ ಲಯದ ಅಧಿಕಾರಿಗಳು ಪರಿಶೀಲಿಸಿದ್ದು ಕಾರಿನ ಒಳಭಾಗದಲ್ಲಿ ಸಿಲುಕಿದ್ದ ಮೂರು ಮೃತದೇಹಗಳನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದು ಮಂಗಳವಾರ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅತೀವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
100 ಕಿ.ಮೀ. ವೇಗ?:
ಸಂಜೆ 6 ಗಂಟೆ ಸುಮಾರಿಗೆ ವಿಮಾನ ನಿಲ್ದಾಣ ತಲುಪಬೇಕಾದರಿಂದ ವಿನೋದ್ ತನ್ನ ಸ್ಕಾರ್ಪಿಯೋ ಕಾರನ್ನು ಸುಮಾರು 100 ಕಿ.ಮೀ. ವೇಗದಲ್ಲಿ ಚಾಲನೆ ಮಾಡುತ್ತಿದ್ದರು ಎಂದು ಸಂಚಾರ ಪೊಲೀಸರು ಅಂದಾಜಿಸಿದ್ದಾರೆ. ರಸ್ತೆ ಅಪಘಾತದ ಭೀಕರತೆ ಹಾಗೂ ಸ್ಥಳೀಯರ ಮಾಹಿತಿ ಪ್ರಕಾರ, ಸ್ಕಾರ್ಪಿಯೋ ಕಾರು ಸುಮಾರು 100 ಕಿ.ಮೀ.ವೇಗದಲ್ಲಿ ಹೋಗುತ್ತಿತ್ತು. ಹೀಗಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಪಕ್ಕದ ರಸ್ತೆಗೆ ಹಾರಿ ಎದುರು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡ ಸ್ಕಾರ್ಪಿಯೋ ಕಾರು ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಮತ್ತೂಂದು ಕಾರಿಗೆ ಡಿಕ್ಕಿ ಹೊಡೆದು ಕೊಂಡು ಮೂವರು ಮೃತಪಟ್ಟಿದ್ದಾರೆ. ಅತೀ ವೇಗ ಮತ್ತು ಕಾರಿನ ಟೈಯರ್ ಸ್ಫೋಟಗೊಂಡ ಪರಿಣಾಮ ದುರ್ಘಟನೆ ನಡೆದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
-ಎಂ.ಎನ್.ಅನುಚೇತ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ