ಬೆಂಗಳೂರು: ಹಲಸೂರು, ವೈಟ್‌ಫೀಲ್ಡ್, ಕೆಂಗೇರಿಯಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಕೋರಮಂಗಲದ ನಿವಾಸಿ ಸಾಗರ್ (25), ನಲ್ಲೂರಹಳ್ಳಿ ನಿವಾಸಿ ಸಿದ್ದಲಿಂಗಯ್ಯ (77), ಅಗ್ರಹಾರ ದಾಸರಹಳ್ಳಿ ನಿವಾಸಿ ಲಿಖಿತ್ (22)ಮೃತಪಟ್ಟರು.
ಸಾಗರ್ ತನ್ನ ಸ್ನೇಹಿತರಾದ ಶ್ರೀಧರ್, ಶಶಿಕುಮಾರ್ ಜೊತೆಗೆ ಬೇರೊಬ್ಬ ಸ್ನೇಹಿತನನ್ನು ನೋಡಲು ಮುಂಜಾನೆ 4 ಗಂಟೆಗೆ ಕೋರಮಂಗಲದಿಂದ ಕಾರಿನಲ್ಲಿ ಹೊರ ಟಿದ್ದರು. ಮಾರ್ಗಮಧ್ಯೆ ದೊಮ್ಮಲೂರು ಮೇಲ್ಸೇ ತುವೆ ಬಳಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಉರುಳಿ ಬಿದ್ದಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಮೂವರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದರು.
ಸಾಗರ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಿನ ಜಾವ ಕಾರು ಚಲಾಯಿಸಿಕೊಂಡು ಬರುವಾಗ ನಿದ್ದೆಗಣ್ಣಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತವಾಗಿದೆ.
ಟಿಪ್ಪರ್ ಹಿಂದಿಕ್ಕುವ ವೇಳೆ ರಸ್ತೆ ಅಪಘಾತ: ಮತ್ತೂಂದು ಪ್ರಕರಣದಲ್ಲಿ ಉಲ್ಲಾಳ ಕೆರೆಯ ಬಳಿ ಟಿಪ್ಪರ್ ಹಾಗೂ ಬೈಕ್ ನಡುವೆ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಅಗ್ರಹಾರ ದಾಸರಹಳ್ಳಿ ನಿವಾಸಿ ಲಿಖಿತ್ (22) ಮೃತಪಟ್ಟರೆ, ಮಲ್ಲತ್ತಹಳ್ಳಿ ನಿವಾಸಿ ಜ್ಞಾನೇಶ್ (23) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂದೆ ಚಲಿಸುತ್ತಿದ್ದ ಟಿಪ್ಪರ್ ಅನ್ನು ಹಿಂದಿಕ್ಕುವ ವೇಳೆ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಇಬ್ಬರು ರಸ್ತೆಗೆ ಉರುಳಿ ಬಿದ್ದಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ತಲೆಗೆ ಗಂಭೀರ ಗಾಯವಾಗಿ ಲಿಖೀತ್ ಮೃತಪಟ್ಟಿದ್ದಾನೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧ ಸಾವು: ಕಾರಿನ ಡೋರ್ ತೆಗೆದ ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಸಿದ್ದಲಿಂಗಯ್ಯ ಅವರಿಗೆ ತಾಗಿ ಕೆಳಗೆ ಬಿದ್ದಾಗ ಅವರ ಮೇಲೆಯೇ ಹಿಂದಿನಿಂದ ಬಂದ ಕಾರು ಹರಿದು ಮೃತಪಟ್ಟಿರುವ ಪ್ರಕರಣ ವೈಟ್‌ಫೀಲ್ಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಮವಾರ ಸಂಜೆ ಮನೆ ಸಮೀಪದ ದೇವಾಲಯಕ್ಕೆ ತೆರಳಿ 7.45ರಲ್ಲಿ ಮನೆಗೆ ಹೋಗುತ್ತಿದ್ದರು. ನಲ್ಲೂರಳ್ಳಿಯ ನ್ಯೂ ಟೆಂಪಲ್ ರಸ್ತೆಯಲ್ಲಿ ಮುಂದೆ ನಿಂತಿದ್ದ ಕಾರಿನ ಬಾಗಿಲನ್ನು ಏಕಾಏಕಿ ತೆಗೆದ ಪರಿಣಾಮ ಸಿದ್ದಲಿಂಗಯ್ಯ ಅವರಿಗೆ ತಗುಲಿ ರಸ್ತೆ ಮದ್ಯದಲ್ಲಿ ಬಿದ್ದಿದ್ದರು.ಹಿಂದಿನಿಂದ ಬಂದ ಮತ್ತೂಂದು ಕಾರು ಸಿದ್ದಲಿಂಗಯ್ಯ ಮೇಲೆ ಹರಿದು ದುರ್ಮರಣ ಹೊಂದಿದ್ದಾರೆ. ವೈಟ್‌ಫೀಲ್ಡ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.