ಬೆಂಗಳೂರು: ಕಾಮಾಕ್ಷಿಪಾಳ್ಯ, ಕೆ.ಆರ್ .ಪುರ, ಕೆಂಗೇರಿಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಮೂರು ರಸ್ತೆ ಅಪಘಾತ ಪ್ರಕರಣದಲ್ಲಿ ಬ್ಯಾಂಕ್ ಉದ್ಯೋಗಿ, ಗಾಲ್ಫ್ ಕೋಚ್ ಸೇರಿ ಮೂವರು ದುರ್ಮರಣ ಹೊಂದಿದ್ದಾರೆ.
ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತರಿಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಾಲ್ಫ್ ಕೋಚ್ ಮೃತಪಟ್ಟರೆ, ಕೆಂಗೇರಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಅತೀ ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾನೆ.
ಗಾಲ್ಫ್ ಕೋಚ್ ಆಗಿದ್ದ ಬಿಡದಿ ನಿವಾಸಿ ಚಂದ್ರಶೇಖರ್ (28), ಖಾಸಗಿ ಕಂಪನಿ ಉದ್ಯೋಗಿ ಮೈಲಸಂದ್ರದ ನಿವಾಸಿ ಧ್ರುವ (32) ಸಾವನ್ನಪ್ಪಿದ್ದಾರೆ.
ಡಿವೈಡರ್‌ಗೆ ಬೈಕ್ ಡಿಕ್ಕಿ, ಗಾಲ್ಫ್ ಕೋಚ್ ಸಾವು: ಜ.21ರ ರಾತ್ರಿ 10.30ರಲ್ಲಿ ಚಂದ್ರಶೇಖರ್ ಅವರನ್ನು ಆತನ ಸ್ನೇಹಿತ ಕಿರಣ್ ತನ್ನ ಬೈಕ್‌ನಲ್ಲಿ ಹಿಂಬದಿಯಲ್ಲಿ ಕೂರಿಸಿಕೊಂಡು ಬರುತ್ತಿದ್ದ. ಔಟರ್‌ರಿಂಗ್ ರಸ್ತೆಯಲ್ಲಿ ಲಗ್ಗೆರೆ ಕಡೆಯಿಂದ ಸುಮನಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಬೈಕ್‌ಅನ್ನು ಅತಿವೇಗ, ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿದ್ದ. ಸುಮನಹಳ್ಳಿ ಬಿಎಂಟಿಸಿ ಬಸ್ ಡಿಪೋ ಹತ್ತಿರ ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದಿತ್ತು. ನಂತರ ಸೆಂಟರ್ ಮೀಡಿಯನ್‌ನಲ್ಲಿರುವ ಮರಕ್ಕೆ ಗುದ್ದಿತ್ತು. ಡಿಕ್ಕಿ ರಭಸಕ್ಕೆ ಇಬ್ಬರು ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಬ್ಬರನ್ನೂ ಪರೀಕ್ಷಿಸಿದ ವೈದ್ಯರು ಚಂದ್ರಶೇಖರ್ ಮೃತಪಟ್ಟಿರುವುದನ್ನು ದೃಢಪಡಿಸಿದ್ದರು. ಅಪಘಾತಕ್ಕೆ ಕಾರಣನಾದ ದ್ವಿಚಕ್ರವಾಹನ ಸವಾರ ಕಿರಣ್ ವಿರುದ್ಧ ಮೃತ ಚಂದ್ರಶೇಖರ್ ಭಾವಮೈದ ನರಸಿಂಹ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಗೆ ದೂರು ನೀಡಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿ ಸಾವು: ಖಾಸಗಿ ಕಂಪನಿ ಉದ್ಯೋಗಿ ಧ್ರುವ ಭಾನುವಾರ ರಾತ್ರಿ 10.15ರಲ್ಲಿ ಮೈಲಸಂದ್ರ 8ನೇ ಕ್ರಾಸ್ ಜಂಕ್ಷನ್ ಬಳಿ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದರು. ಆ ವೇಳೆ ಅದೇ ರಸ್ತೆಯಲ್ಲಿ ಅತಿ ವೇಗದಿಂದ ಬರುತ್ತಿದ್ದ ಕಾರೊಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ಬಿದ್ದ ಧ್ರುವ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕೆಂಗೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.