ಮಂಗಳೂರು: ಕಾರಿಗೆ ಬೈಕ್ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಗರದ ಬಿಕರ್ನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ರವಿವಾರ ರಾತ್ರಿ ಸಂಭವಿಸಿದೆ.
ಕೋಡಿಕಲ್ ನಿವಾಸಿ, ನಗರದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಅಂಕಿತ್ ಜಿ.(21) ಮೃತಪಟ್ಟವರು. ಅಂಕಿತ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ತಂದೆ, ತಾಯಿ ಮತ್ತು ಅಣ್ಣನನ್ನು ಅಗಲಿದ್ದಾರೆ.
ರಾತ್ರಿ 10.30ರ ಸುಮಾರಿಗೆ ಅಂಕಿತ್ ಅವರು ತನ್ನ ಗೆಳೆಯ ಆರ್ಯನ್ ಅವರನ್ನು ಕುಲಶೇಖರ ಕೈಕಂಬದಲ್ಲಿರುವ ಅವರ ಮನೆಗೆ ಬಿಟ್ಟು ಕೋಡಿಕಲ್ ಕಡೆಗೆ ವಾಪಸಾಗುವಾಗ ಬಿಕರ್ನಕಟ್ಟೆಯ ಮಸೀದಿಯ ಎದುರು ಬೈಕ್ ನಿಯಂತ್ರಣ ಕಳೆದುಕೊಂಡು ಪ್ರಮೋದ್ ನರ್ಸರಿ ಎದುರುಗಡೆ ರಸ್ತೆ ಬದಿ ನಿಲ್ಲಿಸಿದ್ದ ಆಮ್ನಿ ಕಾರಿನ ಹಿಂಬದಿಗೆ ಢಿಕ್ಕಿಯಾಯಿತು. ಆಗ ಅಂಕಿತ್ ಬೈಕ್‌ನಿಂದ ಚರಂಡಿಗೆ ಬಿದ್ದು ಬೈಕ್ ಪಲ್ಟಿಯಾಗಿ ನರ್ಸರಿಯ ಗೇಟಿಗೆ ಢಿಕ್ಕಿ ಹೊಡೆದು ನಿಂತಿತು. ತಲೆಗೆ ಗಂಭೀರ ಸ್ವರೂಪದ ಗಾಯಗೊಂಡ ಅಂಕಿತ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲೇ ಅಂಕಿತ್ ಮೃತಪಟ್ಟಿದ್ದರು. ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಹೊಂಡ ಕಾರಣ?
ರಸ್ತೆಯಲ್ಲಿದ್ದ ಹೊಂಡದ ಕಾರಣದಿಂದಲೇ ಬೈಕ್ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಳೆದ ಜು.18ರಂದು ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಪೆಟ್ರೋಲ್ ಪಂಪ್ ಸಮೀಪ ಹೊಂಡ ತಪ್ಪಿಸಲು ಯತ್ನಿಸಿದ್ದ ದ್ವಿಚಕ್ರ ಸವಾರನಿಗೆ ಲಾರಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು.