ಗೋಕಾಕ: ದೀಪಾವಳಿ ಹಬ್ಬದಂದು ಊರಿಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಸಮೀಪದ ಮದಾಪುರ ಕ್ರಾಸ್‌ನ ಪೆಟ್ರೋಲ್ ಪಂಪ್ ಹತ್ತಿರ ರವಿವಾರ ಸಂಭವಿಸಿದೆ.
ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದ ಹನುಮಂತ ಫಕೀರಪ್ಪ ಪರಕನಟ್ಟಿ(28), ಸಿದ್ದವ್ವ ಫಕೀರಪ್ಪ ಪರಕನಟ್ಟಿ(50), ಮಾಲಾ ಹನುಮಂತ ಪರಕನಟ್ಟಿ(25) ಹಾಗೂ ಕೀರ್ತಿ ಹನುಮಂತ ಪರಕನಟ್ಟಿ(6) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೃತರು ರಾಮದುರ್ಗ ತಾಲೂಕಿನ ಮುರಕಟ್ನಾಳ ಗ್ರಾಮದ ಮೂಲ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಟಾಟಾ ಏಸ್ (ಮಿನಿ ಟ್ರಕ್) ಹಾಗೂ ಅಲ್ಟೋ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ರವಿವಾರ ಸಂಜೆ ಅಲ್ಟೋ ಕಾರಿನಲ್ಲಿ ಕೊಲ್ಲಾಪುರದಿಂದ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮಕ್ಕೆ ದೀಪಾವಳಿ ಹಬ್ಬದ ನಿಮಿತ್ತ ಬರುವಾಗ ಯರಗಟ್ಟಿಯಿಂದ ಗೋಕಾಕ ಕಡೆಗೆ ಹೋಗುತ್ತಿದ್ದ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಟಾಟಾ ಏಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಅಲ್ಟೋ ಕಾರಿನಲ್ಲಿ ಒಟ್ಟು 7 ಜನ ಪ್ರಯಾಣಿಸುತ್ತಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಮುಂದಿನ ವಾರದಿಂದ ಕಾನ್ಪುರದಲ್ಲಿ “ಸ್ಪುಟ್ನಿಕ್-5′ ಲಸಿಕೆ ಪ್ರಯೋಗ ಶುರು
ಉಪಜೀವನಕ್ಕಾಗಿ ಕುಟುಂಬ ಸಮೇತ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಈ ಕುಟುಂಬ ದುಡಿಯಲು ಹೋಗಿತ್ತು. ಈ ಕುರಿತು ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.