ಬೆಂಗಳೂರು: ನೈಸ್ ರಸ್ತೆಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಲಾರಿಯೊಂದು ಉರುಳಿ ಬಿದ್ದ ಪರಿಣಾಮ ಅದರ ಚಾಲಕನ ಕಾಲಿನ ಪಾದ ತುಂಡಾಗಿರುವ ಘಟನೆ ಗುರುವಾರ ತಡರಾತ್ರಿ ಜ್ಞಾನಭಾರತಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಲಾರಿ ಚಾಲಕ ಮುಕ್ಬುಲ್ ಕಾಲು ತುಂಡಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ನೈಸ್ ರಸ್ತೆಯ ಮಂಗನಹಳ್ಳಿ ಬಳಿ ಗುರುವಾರ ತಡರಾತ್ರಿ ಈ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು, ಎರಡು ಲಾರಿ ಸೇರಿ ಐದಾರು ವಾಹನಗಳಿಗೆ ಹಾನಿಯಾಗಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ನೈಸ್ ರಸ್ತೆಯಲ್ಲಿ ಲಾರಿಯೊಂದು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಖಾಸಗಿ ಕಂಪನಿಯ ಹಾಲಿನ ಉತ್ಪನ್ನಗಳನ್ನು ಮುಕ್ಬುಲ್ ಲಾರಿಯಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಲಾರಿ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಚಾಲಕ ಮುಕ್ಬುಲ್ಕಾಲಿನ ಪಾದ ತುಂಡಾಗಿದೆ. ಕೂಡಲೇ ಸ್ಥಳೀಯರು ಗಾಯಾಳುವಿನ ನೆರವಿಗೆ ಧಾವಿಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.