Advertisement

ಹೆಜಮಾಡಿ : ನಿಂತಿದ್ದ ಟ್ಯಾಂಕರ್ ಗೆ ಸ್ಕೂಟಿ ಡಿಕ್ಕಿ ಹೊಡೆದು ಕೊಡವೂರಿನ ಯುವಕನ ದಾರುಣ ಸಾವು

09:07 PM Apr 21, 2022 | Team Udayavani |

ಪಡುಬಿದ್ರಿ : ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ್ ಟೋಲ್ ಪ್ಲಾಝಾ ಬಳಿ ಟೋಲ್ ಕಂಪನಿಯ ಆದೇಶ ಧಿಕ್ಕರಿಸಿ ಬೃಹತ್ ವಾಹನಗಳು ರಸ್ತೆ ಮಧ್ಯೆ ನಿಲುಗಡೆಯಾಗುತ್ತಿರುವುದರಿಂದ ಗುರುವಾರ ಮಧ್ಯಾಹ್ನ ದ್ವಿಚಕ್ರ ವಾಹನವೊಂದು ರಸ್ತೆ ಮಧ್ಯದಲ್ಲೇ ಹಠಾತ್ ನಿಲ್ಲಿಸಿದ ಬುಲೆಟ್ ಟ್ಯಾಂಕರ್ ಗೆ ಹಿಂದಿನಿಂದ ಸ್ಕೂಟಿ ಢಿಕ್ಕಿ ಹೊಡೆದ ಪರಿಣಾಮ ಮಲ್ಪೆ ಕೊಡವೂರು ನಿವಾಸಿ ಮಹೇಶ್(27) ತೀವ್ರ ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ದಾರುಣ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಗುರುವಾರ ತನ್ನ ಹೋಂಡಾ ಆಕ್ಟಿವಾ ವಾಹನದಲ್ಲಿ ಮಂಗಳೂರಿಗೆ ತೆರಳಿದ್ದ ಅವರು, ಅಲ್ಲಿ ಸ್ನೇಹಿತರ ಜತೆ ಬಟ್ಟೆಗಳನ್ನು ಖರೀದಿಸಿ ವಾಪಾಸು ಮಲ್ಪೆಗೆ ಹಿಂತಿರುತ್ತಿದ್ದ ಸಂದರ್ಭ ಹೆಜಮಾಡಿಯ ಟೋಲ್ ಪ್ಲಾಝಾದ ಉತ್ತರ ದಿಕ್ಕಿನಲ್ಲಿ ಹೆಜಮಾಡಿ ದೇವಳದ ದ್ವಾರದ ಮುಂಭಾಗ ಕಾನೂನು ಬಾಹಿರವಾಗಿ ನಿಲುಗಡೆಗೊಳಿಸಲಾಗಿದ್ದ ಬುಲೆಟ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆದಿತ್ತು. ಅವಿವಾಹಿತರಾಗಿದ್ದ ಅವರು ಮಲ್ಪೆ ಬಂದರಿನಲ್ಲಿ ಕನ್ನಿ ಪಾರ್ಟಿಯಲ್ಲಿ ದುಡಿಯುತ್ತಿದ್ದರು ಎನ್ನಲಾಗಿದೆ.

ಅನಧಿಕೃತ ಗೂಡಂಗಡಿಗಳೂ ಕಾರಣ
ಟೋಲ್ ಪ್ಲಾಝಾದ ಎರಡೂ ಬದಿಯ ನಾಲ್ಕು ಕಡೆಗಳಲ್ಲಿ ಸಾಲು ಸಾಲು ಅನಧಿಕೃತ ಗೂಡಂಗಡಿಗಳಿವೆ. ಇದರ ಪೈಕಿ ಹೆಚ್ಚಿನ ಅಂಗಡಿಗಳು ಕೇರಳ ಮೂಲದವರದ್ದು. ಹಲವು ಬಾರಿ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆದರೂ ರಾಜಕೀಯ ಒತ್ತಡಗಳಿಂದ ತೆರವು ಕಾರ್ಯಚರಣೆ ಅಸಾಧ್ಯವಾಗಿತ್ತು. ಘನ ವಾಹನಗಳು ನಿತ್ಯ ಟೋಲ್‌ಗೆ ಅಡ್ಡವಾಗಿ ಸಾಲು ಸಾಲಾಗಿ ನಿಲುಗಡೆಗೊಳಿಸುತ್ತಿವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ದಿನಗಳ ಹಿಂದೆ ಟೊಲ್ ಪ್ಲಾಝಾದವರೇ ವಾಹನ ನಿಲುಗಡೆ ಬಗೆಗೆ ತಗಾದೆ ಎತ್ತಿದಾಗ ಓರ್ವ ಲಾರಿ ಚಾಲಕ ರಾಡ್ ಹಿಡಿದು ಬೆದರಿಸಿದ್ದ. ಕೆಲವು ಬಾರಿ ಇಲ್ಲಿ 100ಕ್ಕೂ ಅಧಿಕ ಲಾರಿಗಳು ನಿಲುಗಡೆಗೊಳಿಸುತ್ತದೆ. ಕೆಲವು ಲಾರಿಗಳಂತೂ ವಾರಗಟ್ಟಲೇ ಇಲ್ಲೇ ನಿಲ್ಲುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸರ್ಕಾರದ ವೈಫಲ್ಯ, ಕೋಮು ದ್ವೇಷ ಜನತೆಗೆ ತಿಳಿಸಿ : ಕಾರ್ಯಕರ್ತರಿಗೆ ಡಿಕೆಶಿ ಸಲಹೆ

ಟೋಲ್ ಪ್ಕಾಝಾ ಸ್ಪಂದನೆ : ಗುರುವಾರದ ಅಪಘಾತದ ಬಳಿಕ ಎಚ್ಚೆತ್ತ ಟೋಲ್ ಪ್ಲಾಝಾದ ಅಧಿಕಾರಿ ವರ್ಗ ಜಿಲ್ಲಾಡಳಿತದ ಸಹಕಾರದೊಂದಿಗೆ ಶುಕ್ರವಾರದಿಂದಲೇ ಅನಧಿಕೃತ ಗೂಡಂಗಿಗಳ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Advertisement

ಪಡುಬಿದ್ರಿ ಪೊಲೀಸರು ಬಲೆಟ್ ಟ್ಯಾಂಕರ್ ಚಾಲಕ ಕಾರ್ತಿಕೇಯನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೂ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next