Advertisement

ಮುದ್ದಾಡಿ-ಆರಂಬೋಡಿ ರಸ್ತೆ ನಡೆದಾಡಲೂ ಅಯೋಗ್ಯ

12:44 PM Jun 25, 2018 | |

ವೇಣೂರು: ಬೆಳ್ತಂಗಡಿ ತಾ|ನ ಮುದ್ದಾಡಿಯಿಂದ ಬಂಟ್ವಾಳ ತಾ|ನ ಸಿದ್ದಕಟ್ಟೆಯನ್ನು ಸಂಪರ್ಕಿಸುವ ರಸ್ತೆಯ ಮುದ್ದಾಡಿಯಿಂದ ಆರಂಬೋಡಿವರೆಗೆ ನಡೆದಾಡಲೂ ಅಯೋಗ್ಯವಾಗಿದೆ. ಕಿತ್ತು ಹೋಗಿರುವ ಡಾಮರು, ಗುಂಡಿಗಳಿಂದ ಕೂಡಿರುವ ರಸ್ತೆಯೀಗ ಕೆಸರುಮಯ ವಾಗಿದ್ದು, ಜನತೆ ಪರದಾಡುವಂತಾಗಿದೆ.

Advertisement

ಬಹುಕಾಲದ ಬೇಡಿಕೆ
ಮುದ್ದಾಡಿ-ಆರಂಬೋಡಿ ರಸ್ತೆ ಅಭಿವೃದ್ಧಿ ಬಹುವರ್ಷಗಳ ಹಿಂದಿನ ಬೇಡಿಕೆ. ಶಾಸಕರಾಗಿದ್ದ ಕೆ. ವಸಂತ ಬಂಗೇರ, ಸಂಸದ ನಳಿನ್‌ಕುಮಾರ್‌ ಕಟೀಲು, ಜಿ.ಪಂ.ಗೆ ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರು ಹಲವು ಬೇಡಿಕೆ ಸಲ್ಲಿಸಿದ್ದಾರೆ. ಆದರೆ ರಸ್ತೆ ಅಭಿವೃದ್ಧಿ ಆಗಲೇ ಇಲ್ಲ. ಬಜಿರೆ, ಮಿಯಲಾಜೆ, ಗುಂಡೂರಿ, ಆರಂಬೋಡಿ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನ, ವೇಣೂರಿನ ಶಾಲಾ ಕಾಲೇಜುಗಳಿಗೆ ತೆರಳಲು ಬಸ್ಸನ್ನು ಆಶ್ರಯಿಸುತ್ತಾರೆ. ಬಸ್‌ ಕೈಕೊಟ್ಟರೆ ಇತರ ವಾಹನ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ.

ಡಾಮರು ಕಾಣದೆ ದಶಕ
ಈ ರಸ್ತೆ ಡಾಮರು ಕಾಣದೆ ಸುಮಾರು 18 ವರ್ಷಗಳೇ ಕಳೆದಿದೆ. ಈ ರಸ್ತೆಗೆ ತೇಪೆ ಕಾರ್ಯ ಬಿಟ್ಟರೆ ಪೂರ್ಣ ಡಾಮರು ಹಾಕಿಲ್ಲ. 2012ರ ವೇಣೂರು ಮಹಾ ಮಸ್ತಕಾಭಿಷೇಕದ ಸಂದರ್ಭ 40 ಲಕ್ಷ ರೂ. ಅನುದಾನದಡಿ ಹಾಗೂ 2016ರಲ್ಲಿ ಜಿ.ಪಂ. ಅನುದಾನದಡಿ ಕಾಂಕ್ರೀಟ್‌ ಹಾಗೂ ತೇಪೆ ಕಾರ್ಯ ನಡೆಸಲಾಗಿತ್ತು. ಆದರೆ ಇದೀಗ ಡಾಮರು ಸಂಪೂರ್ಣ ಕಿತ್ತು ಹೋಗಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ರಸ್ತೆಯಲ್ಲೇ ತೋಡು ನಿರ್ಮಾಣ ಆಗಿ ಸಂಚಾರ ದುಸ್ತರವಾಗಿದೆ.

ಚರಂಡಿ ಅವ್ಯವಸ್ಥೆ
ರಸ್ತೆಯ ಇಕ್ಕೆಲಗಳಲ್ಲಿ ಕೆಲವಡೆಗಳಲ್ಲಿ ಚರಂಡಿಯೇ ಇಲ್ಲ. ಕೆಲವೆಡೆ ಇದ್ದರೂ ನಿರ್ವಹಣೆಯಿಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದು ರಸ್ತೆ ಹಾಳಾಗಲು ಪ್ರಮುಖ ಕಾರಣ. ಪ್ರತೀ ಮಳೆಗಾಲದ ಪ್ರಾರಂಭದಲ್ಲಿ ರಸ್ತೆ ಇಕ್ಕೆಲಗಳ ಚರಂಡಿ ದುರಸ್ತಿಯನ್ನು ಆಯಾ ಪಂಚಾಯತ್‌ ಗಳು ನಿರ್ವಹಿಸಬೇಕೆಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.

ಮೇಲ್ದರ್ಜೆ ಉಲ್ಲೇಖವಿಲ್ಲ
ಶಾಸಕ ಪೂಂಜ ಅವರಿಗೆ ಆರಂಬೋಡಿಯಲ್ಲಿ ನಡೆದ ಅಭಿನಂದನ ಸಮಾರಂಭದಲ್ಲಿ ‘ಕಳೆದ 10 ವರ್ಷಗಳಿಂದ ಮುದ್ದಾಡಿ-ಆರಂಬೋಡಿ ರಸ್ತೆ ನಿರ್ಲಕ್ಷ್ಯಕ್ಕೊಳಗಾಗಿದೆ. ರಸ್ತೆ ದುರಸ್ತಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಇದೀಗ ಮೇಲ್ದರ್ಜೆಗೇರಿಸಿ ಲೋಕೋ ಪಯೋಗಿ ಸಚಿವ ರೇವಣ್ಣರಿಗೆ ನೀಡಿದ ಮನವಿನಲ್ಲಿ ಮುದ್ದಾಡಿ- ಆರಂಬೋಡಿ ರಸ್ತೆಯ ಉಲ್ಲೇಖವೇ ಇಲ್ಲ.

Advertisement

ಜಿ.ಪಂ. ಅನುದಾನವಿಲ್ಲ
ಮುದ್ದಾಡಿ-ಆರಂಬೋಡಿ ರಸ್ತೆಗೆ ಮರು ಡಾಮರು ಮಾಡುವಷ್ಟು ಅನುದಾನ ಜಿ.ಪಂ.ನಲ್ಲಿ ಲಭಿಸುತ್ತಿಲ್ಲ. ಆದರೆ ಎರಡು ಬಾರಿ ಜಿ.ಪಂ. ಅನುದಾನದಡಿ ದುರಸ್ತಿ ನಡೆಸಲಾಗಿದೆ. ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಹಿಂದಿನ ಶಾಸಕ ಕೆ. ವಸಂತ ಬಂಗೇರರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದರು.
– ಪಿ. ಧರಣೇಂದ್ರ ಕುಮಾರ್‌
ಜಿ.ಪಂ. ಸದಸ್ಯ, ನಾರಾವಿ

ಗ್ರಾಪಂ ನಿರ್ಣಯ ಕೈಗೊಳ್ಳಲಿದೆ
ಲೋಕೋಪಯೋಗಿ ಸಚಿವರಿಗೆ ಶಾಸಕರು ನೀಡಿದ ಮನವಿಯಲ್ಲಿ ಮುದ್ದಾಡಿ-ಆರಂಬೋಡಿ ರಸ್ತೆಯ ಉಲ್ಲೇಖ ಇಲ್ಲ ನಿಜ. ಆದರೆ ಯಾವುದಾದರೊಂದು ಅನುದಾನದಿಂದ ದುರಸ್ತಿಗೆ ಒತ್ತಾಯಿಸಲಾಗುವುದು. ಈ ಬಗ್ಗೆ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಶಾಸಕರಿಗೆ ತಲುಪಿಸಲಾಗುವುದು.
– ಪ್ರಭಾಕರ ಎಚ್‌.
ಅಧ್ಯಕ್ಷರು, ಆರಂಬೋಡಿ ಗ್ರಾ.ಪಂ.

ರಸ್ತೆಯಲ್ಲೇ ಚಿಮ್ಮುತ್ತಿದೆ ಕುಡಿಯುವ ನೀರು!
ಹೊಂಡಬಿದ್ದ ರಸ್ತೆ ರಸ್ತೆಯಲ್ಲಿ ಕಳೆದ ಮೂರು ದಿನಗಳಿಂದ ಮಿಯಲಾಜೆ ಬಳಿ ಕುಡಿಯುವ ನೀರಿನ ಸಂಪರ್ಕದ ಪೈಪ್‌ ಒಡೆದು ನೀರು ಚಿಮ್ಮುತ್ತಿದ್ದರೂ ಸಂಬಂಧಿತ ಗ್ರಾ.ಪಂ. ದುರಸ್ತಿ ಕಾರ್ಯ ನಡೆಸಿಲ್ಲ. ರಸ್ತೆಯ ಮಧ್ಯ ಭಾಗದಲ್ಲಿ ಪೈಪ್‌ ಒಡೆದಿರುವ ಕಾರಣ ರಾತ್ರಿ ವೇಳೆಯಲ್ಲಿ ದುರಸ್ತಿ ಕಾರ್ಯ ನಡೆಸುವುದಾಗಿ ಪಂಚಾಯತ್‌ ತಿಳಿಸಿತ್ತು. ಆದರೆ ಎರಡು ರಾತ್ರಿ ಕಳೆದರೂ ವೇಣೂರು ಪಂಚಾಯತ್‌ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವಿದೆ.

ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next